ವಿದೇಶಿಯರ ರಚಿತ ಇತಿಹಾಸ ಓದುತ್ತಿದ್ದೇವೆ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.30
ಇಂದು ನಾವು ವಿದೇಶಿಗರು ಬರೆದಿಟ್ಟ ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದೇವೆ ಎಂದು ನವದೆಹಲಿಯ ಭಾರತೀಯ ಇತಿಹಾಸ ಸಂಕಲನ ಸಂಯೋಜನೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಡಾ. ಬಾಲಮುಕುಂದ ಪಾಂಡೆ ಅಭಿಪ್ರಾಯಪಟ್ಟರು.
ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ವೇದಿಕೆ ಮತ್ತು ಭಾರತೀಯ ಇತಿಹಾಸ ಸಂಕಲನ ಸಮಿತಿ ಆಶ್ರಯದಲ್ಲಿ ಶನಿವಾರ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, ನಾವು ಓದುತ್ತಿರುವುದು ಅಮೆರಿಕ ಅಥವಾ ಯುರೋಪ್ ಇತಿಹಾಸಕಾರರು ಬರೆದಿಟ್ಟ ಇತಿಹಾಸ. ಅವರು ತಮಗೆ ಬೇಕಾದ ರೀತಿಯಲ್ಲಿ ಭಾರತೀಯ ಇತಿಹಾಸವನ್ನು ರಚಿಸಿಟ್ಟು ಹೋಗಿದ್ದಾರೆ ಎಂದರು.
ಇಲ್ಲಿನ ಸಂಸ್ಕೃತಿ ನಾಶ: ಲಾರ್ಡ್ ಮೇಕಾಲೆ ತನ್ನ ತಂದೆಗೆ ಬರೆದ ಪತ್ರದಲ್ಲಿ ಭಾರತದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣವನ್ನು ಜಾರಿಗೊಳಿಸುವುದರ ಮೂಲಕ ಅಲ್ಲಿನ ಸಂಸ್ಕೃತಿಯನ್ನು ನಾಶ ಮಾಡಿ ಐರೋಪ್ಯ ಸಂಸ್ಕೃತಿಯನ್ನು ಹೇರುವ ಅಂಶವನ್ನು ವ್ಯಕ್ತಪಡಿಸಿದ್ದು, ಇದಕ್ಕೆ ಸಮರ್ಥನೆಯಾಗಿದೆ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ತಿಳಿಸಿದರು.
ದೇಶದಲ್ಲಿ ಆರ್ಯರು ಮತ್ತು ದ್ರಾವಿಡರು ಎರಡು ವಿಭಿನ್ನ ಜನಾಂಗದವರು ಎಂಬಿತ್ಯಾದಿ ಸಮಸ್ಯೆ ಹುಟ್ಟುಹಾಕಿದವರೇ ಬ್ರಿಟಿಷರು. ಆದರೆ, ದೇಶದಲ್ಲಿನ ಇತ್ತೀಚಿನ ಸಂಶೋಧನೆಗಳು 35 ಸಾವಿರ ಡಿಎನ್ಎ ಪರೀಕ್ಷೆ ಮಾಡಿಸುವುದರ ಮೂಲಕ ಶೇ.92ರಷ್ಟು ಫಲಿತಾಂಶ ಆರ್ಯರು ಭಾರತೀಯರೇ ಆಗಿದ್ದಾರೆ. ಇವರು ಜಗತ್ತಿನ 68 ದೇಶಗಳಿಗೆ ವಲಸೆ ಹೋಗಿದ್ದಾರೆ ಎಂಬುವುದು ಪುರಾತತ್ವ ಪುರಾವೆಗಳಿಂದ ದೃಢೀಕೃತವಾಗಿದೆ ಎಂದರು.
ಸ್ವಾತಂತ್ರ್ಯ ನಂತರ ಭಾರತದಲ್ಲಿ ಬ್ರಿಟಿಷರ ದೃಷ್ಟಿಕೋನದಿಂದಲೇ ಇತಿಹಾಸ ರಚಿಸಲ್ಪಟ್ಟಿದ್ದು, ಅದು ಭಾರತದ ದೃಷ್ಟಿಕೋನದ ವಿರುದ್ಧವಾಗಿದೆ. ಇವು ಐರೋಪ್ಯ ವಿಚಾರ ಧಾರೆಗಳಿಂದ ರಚಿತವಾದವು. ಇತಿಹಾಸ, ಪುರಾಣ, ರಾಮಾಯಣ, ಮಹಾಭಾರತಗಳು ಕೇವಲ ಕಪೋಲ ಕಲ್ಪಿತವಾಗಿ ಬಿಂಬಿಸಲಾಗಿದೆ. ಭಾರತೀಯ ಇತಿಹಾಸಕ್ಕೆ ಮೂಲ ಆಕರ ಸಾಮಗ್ರಿಗಳಿದ್ದು, ಸಂಶೋಧನೆಯ ಮೂಲಕ ಭಾರತೀಯ ಇತಿಹಾಸದ ಪುನರ್ ರಚನೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಗೋಪಾಲ್, ಶ್ರೀನಿವಾಸ್ರಾವ್, ಪ್ರೊ. ನವೀನ್, ಡಾ.ಸಾಮಕ್, ಡಾ. ಕೃಷ್ಣಮೂರ್ತಿ, ಪ್ರೊ. ವೆಂಕಟೇಶ್, ಡಾ. ಬಾಲಕೃಷ್ಣ ಹೆಗಡೆ ಇದ್ದರು.