ಸೋಲಾರ್ ದೀಪ ಅಳವಡಿಕೆಗೆ ಚಾಲನೆ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.30
ವಿದ್ಯುತ್ ಕ್ಷಾಮ ಎದುರಿಸುತ್ತಿರುವ ಈ ದಿನಗಳಲ್ಲಿ ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆಯು ಕೆನರಾ ಬ್ಯಾಂಕ್ ಜತೆಗೂಡಿ ಸೋಲಾಲ್ ಬೀದಿ ದೀಪ ಅಳವಡಿಸುವ ಯೋಜನೆ ರೂಪಿಸಿದೆ. ಈ ಯೋಜನೆಯನ್ನು ಕೆನರಾ ಬ್ಯಾಂಕ್ ಹಾಗೂ ಸರ್ ಎಂ.ವಿ. ಸೊಸೈಟಿ ಸಹಭಾಗಿತ್ವದಲ್ಲಿ ತಿಲಕ್ನಗರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸೋಲಾರ್ ದೀಪ ಅಳವಡಿಸುವ ಮೂಲಕ ಚಾಲನೆ ನೀಡಲಾಯಿತು. ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆಯ ಅಧ್ಯಕ್ಷ ಗೋಪಿನಾಥ್, ಈಗಾಗಲೇ ರಾಜ್ಯದಲ್ಲಿ ವಿದ್ಯುತ್ ಕೊರತೆ ತೀವ್ರವಾಗುತ್ತಿದೆ. ಇದನ್ನು ನೀಗಿಸಲು ನಗರಸಭೆಯು ಸಾಮಾಜಿಕ ಸಂಘಟನೆಗಳೊಂದಿಗೆ ಕೈಜೋಡಿಸಬೇಕು. ಸಹಕಾರ ಸಂಸ್ಥೆಗಳೂ ಸಹ ಸೋಲಾರ್ ದೀಪ ಅಳವಡಿಸಿಕೊಳ್ಳಲು ನೆರವು ನೀಡಬೇಕು ಎಂದರು.
ವರ್ಷಪೂರ್ತಿ ಬಳಕೆ: ಸೆಲ್ಕೋ ಕಂಪನಿಯ ಜಗದೀಶ್, ಸೆಲ್ಕೋ ಸಂಸ್ಥೆಯು 20 ವರ್ಷಗಳಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಸೋಲಾರ್ ಬೀದಿ ದೀಪಕ್ಕೆ 7 ಸಾವಿರ ಖರ್ಚಾಗುತ್ತದೆ. ಅಲ್ಲದೇ ಸರ್ವಋತುವಿನಲ್ಲಿಯೂ ಬಳಸಲು ಆಧುನಿಕ ತಂತ್ರಜ್ಞಾನ ಬಳಸಲಾಗಿದೆ ಎಂದು ತಿಳಿಸಿದರು. ನಗರದ ಪ್ರತಿ ವಾರ್ಡ್ನಲ್ಲಿ 10 ಬೀದಿ ದೀಪ ಅಳವಡಿಸುವ ಗುರಿ ಹೊಂದಲಾಗಿದೆ. ಈ ಬಗ್ಗೆ ನಗರಸಭೆಯಿಂದ ಅನುಮತಿ ಪಡೆಯಲಾಗಿದೆ. ಈಗಾಗಲೇ ಉಡುಪಿಯ ಕೋಟ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ 160 ಸೋಲಾರ್ ದೀಪ ಅಳವಡಿಸಲಾಗಿದೆ ಎಂದು ಹೇಳಿದರು.