ಆರ್ಟಿಇ ನಿಯಮ ಮೀರಿಲ್ಲ: ರಾಘವೇಂದ್ರ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.31
ಶಿಕಾರಿಪುರದ ಮೈತ್ರಿ ಶಾಲೆಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ನಿಯಮ ಮೀರಿ ಹೆಚ್ಚುವರಿ ಶುಲ್ಕ ಪಡೆದಿಲ್ಲ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ಕಾರ್ಯದರ್ಶಿಯೂ ಆಗಿರುವ ಸಂಸದ ಬಿ.ವೈ. ರಾಘವೇಂದ್ರ ಸ್ಪಷ್ಟನೆ ನೀಡಿದ್ದಾರೆ.
ಉಲ್ಲೇಖಿತ ಪ್ರಕರಣವು 2012-13ನೇ ಸಾಲಿನದ್ದಾಗಿದೆ. ಈ ಪೋಷಕರು ಒಂದು ವರ್ಷದಿಂದ ಯಾವ ಕಾರಣಕ್ಕೆ ದೂರು ನೀಡಲಿಲ್ಲ ಎಂಬ ಬಗ್ಗೆ ಅನುಮಾನ ಹುಟ್ಟುತ್ತದೆ. ವಿಳಂಬವನ್ನು ಗಮನಿಸಿದರೆ ನಮ್ಮ ಸಂಸ್ಥೆಯ ಹೆಸರು ಹಾಳು ಮಾಡುವ ಹುನ್ನಾರ ಇದರಲ್ಲಿ ಕಾಣುತ್ತದೆ ಎಂದಿದ್ದಾರೆ.
ಹೆಚ್ಚುವರಿ ಹಣ ಪಡೆದಿಲ್ಲ: ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಂದ ಶಿಕ್ಷಣ ಇಲಾಖೆಯ ನಿಯಮದಂತೆ ಯಾವುದೇ ಶುಲ್ಕವನ್ನು ವಿದ್ಯಾರ್ಥಿಯ ಪೋಷಕರಿಂದ ಪಡೆದಿರುವುದಿಲ್ಲ. ಅಲ್ಲದೇ ಯಾವುದೇ ವಿದ್ಯಾರ್ಧಿಗಳ ಪೋಷಕರು ಈ ಸಂಬಂಧವಾಗಲಿ ನಮ್ಮ ಸಂಸ್ಥೆಗಾಗಲಿ. ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಜಿಲ್ಲಾ ಉಪನಿರ್ದೇಶಕರಿಗಾಗಲಿ ಇದುವರೆವಿಗೂ ಸಹ ದೂರನ್ನು ನೀಡಿರುವುದಿಲ್ಲ. ಶಾಲೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ವಿಷಯಗಳ ಬಗ್ಗೆ ಶಿಕ್ಷಣ ಇಲಾಖೆಯಿಂದ ಕಾಲಕಾಲಕ್ಕೆ ತಪಾಸಣೆಗಳು ಸಹ ಆಗಿರುತ್ತವೆ ಎಂದರು.