ಚುನಾವಣೆ ಪ್ರಚಾರಕ್ಕೆ ಮೋದಿ ಮೋಡಿ ಬೇಕು
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.31
ಸರ್ಕಾರ ನಡೆಸುವ ಧಾವಂತದಲ್ಲಿ ಮುಖ ಕೆಡಿಸಿಕೊಂಡಿಸಿಕೊಂಡಿರುವ ಬಿಜೆಪಿಗೆ ಈಗ ನರೇಂದ್ರ ಮೋದಿ ಅಲೆಯಲ್ಲಿ ತೇಲಿ ದಡ ಸೇರುವ ತವಕ.
ಇದಕ್ಕಾಗಿಯೇ ನರೇಂದ್ರ ಮೋದಿಯವರನ್ನು ತಮ್ಮ ಕ್ಷೇತ್ರಕ್ಕೆ ಕರೆದೊಯ್ಯಬೇಕೆಂದು ಹಲವು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದಕ್ಕಾಗಿ ರಾಜ್ಯ ಬಿಜೆಪಿಗೆ ಬೇಡಿಕೆಯನ್ನೂ ಇಟ್ಟಿದ್ದಾರಂತೆ. ಇದರಲ್ಲಿ ಶಿವಮೊಗ್ಗ ಕ್ಷೇತ್ರ ಕೂಡ ಒಂದು.
ಅಂದು ಅಟಲ್ ಬಿಹಾರಿ ವಾಜಪೇಯಿ ಅಲೆಯಲ್ಲಿ ಅನೇಕರು ಗೆದ್ದುಬಂದಿದ್ದರು.
ಅದರಂತೆಯೇ ಈಗ ಮೋದಿ ಅಲೆಯಲ್ಲಿ ದಡ ಸೇರುವ ತವಕ ಅಭ್ಯರ್ಥಿಗಳು ಹಾಗೂ ಬಿಜೆಪಿ ಸ್ಥಳೀಯ ಮುಂದಾಳತ್ವ ವಹಿಸಿರುವ ನಾಯಕರದ್ದು. ಹೀಗಾಗಿಯೇ ಶತಾಯಗತಾಯ ಮೋದಿಯವರನ್ನು ತಮ್ಮ ಕ್ಷೇತ್ರಕ್ಕೆ ಕರೆಸಿ ಒಂದು ಸಭೆ ನಡೆಸಿ ಮತ ಸೆಳೆಯಬೇಕೆಂಬ ಉತ್ಸಾಹ ಅನೇಕರದ್ದು.
ಅದರಲ್ಲೂ ಪ್ರಮುಖವಾಗಿ ಕರಾವಳಿ, ಮಲೆನಾಡು ವ್ಯಾಪ್ತಿಕಡೆಯಿಂದ ಒತ್ತಡ ಹೆಚ್ಚಾಗಿದೆ.
ರಾಷ್ಟ್ರೀಯ ನಾಯಕರು: ಬಿಜೆಪಿ ಪರವಾಗಿ ಚುನಾವಣೆಯಲ್ಲಿ ಪ್ರಚಾರ ನಡೆಸಲು ನರೇಂದ್ರ ಮೋದಿಯವರೊಂದಿಗೆ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ರಾಜನಾಥಸಿಂಗ್ ಆದಿಯಾಗಿ ಹಲವು ನಾಯಕರು ರಾಜ್ಯಕ್ಕೆ ಬರುವವರಿದ್ದಾರೆ. ಎಲ್.ಕೆ.ಆಡ್ವಾಣಿ ಕೂಡ ಅಭ್ಯರ್ಥಿಗಳ ಪರ ರಾಜ್ಯಕ್ಕೆ ಬಂದು ಬಂದು ಬ್ಯಾಟಿಂಗ್ ಮಾಡುವ ನಿರೀಕ್ಷೆ ಇದೆ.
ಈ ತಾರಾ ಪ್ರಚಾರಕರನ್ನು ಕರೆತರುವ ಮೂಲಕ ತನ್ನ ಓಟ್ ಬ್ಯಾಂಕನ್ನು ಭದ್ರಗೊಳಿಸುವುದು ರಾಜ್ಯ ಬಿಜೆಪಿ ನಾಯಕರ ಲೆಕ್ಕಾಚಾರ. ತಾರಾ ಪ್ರಚಾರಕರ ಪೈಕಿ ದೇಶಾದ್ಯಂತ ಹೊಸ ಅಲೆ ಎಬ್ಬಿಸಿರುವ ನರೇಂದ್ರ ಮೋದಿಗೆ ಹೆಚ್ಚಿನ ಆದ್ಯತೆ ಅಭ್ಯರ್ಥಿಗಳದ್ದು.
ಈಗಾಗಲೇ ಟಿಕೆಟ್ ಖಚಿತವಾಗಿರುವಂತಹ ಬಿಜೆಪಿ ಅಭ್ಯರ್ಥಿಗಳು ತಮ್ಮ ಕ್ಷೇತ್ರಕ್ಕೆ ಮೋದಿ ಬಂದರೆ ಪಕ್ಷದ ಪರವಾಗಿರುವ ಮನಸ್ಸುಗಳು ಬೇರೆಕಡೆ ಸುಳಿಯದಂತೆ ಜತನದಿಂದ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂಬ ನಂಬಿಕೆ ಇದೆ. ಹೀಗಾಗಿ ಮೋದಿ ಮೇಲೆ ಹೆಚ್ಚಿನ ನಿರೀಕ್ಷೆ ಇದೆ ಎಂಬುದು ಶಿವಮೊಗ್ಗದ ಬಿಜೆಪಿ ಹಿರಿಯ ನಾಯಕರೊಬ್ಬರ ಅಭಿಪ್ರಾಯ.
ಮೋದಿಯೇ ಏಕೆ? ಬೇರೆಲ್ಲಾ ತಾರಾ ಪ್ರಚಾರಕರಿಂದ ಮೋದಿ ಮೇಲೆ ಹೆಚ್ಚಿನ ವಿಶ್ವಾಸ. ಏಕೆಂದರೆ, ಅವರು ಮುಂದಿನ ದಿನಗಳಲ್ಲಿ ದೇಶವನ್ನು ಮುನ್ನೆಡೆಸಬೇಕೆಂಬ ಕೂಗು ಎಲ್ಲೆಡೆ ಎದ್ದಿದೆ. ಸಾಮಾಜಿಕ ತಾಣಗಳು, ಬ್ಲಾಗ್, ಎಸ್‌ಎಂಎಸ್ ಆದಿಯಾಗಿ ಬಹುವಿಧ ಮಾಧ್ಯಮಗಳಲ್ಲಿ ಮೋದಿ ಹೆಸರು ಹರಿದಾಡುತ್ತಿದೆ.
ಹೀಗಿರುವಾಗ ಅಂತಹ ನಾಯಕ ಆಗಮಿಸಿ ತಮ್ಮ ಪರ ಮತ ಯಾಚಿಸಿದರೆ ಹೆಚ್ಚು ಉಪಯೋಗವಾದಿತು, ಪಕ್ಷದ ಓಟ್ ಬ್ಯಾಂಕ್ ಭದ್ರವಾದೀತು ಎಂಬ ಲೆಕ್ಕಾಚಾರವೂ ಅಭ್ಯರ್ಥಿ ಹಾಗೂ ಸ್ಥಳೀಯ ನಾಯಕರದ್ದು.
ಶಿವಮೊಗ್ಗದಲ್ಲಿ ಪ್ರಯತ್ನ: ಬಿಜೆಪಿ ರಾಜ್ಯಾಧ್ಯಕ್ಷ ಗಾದಿಯಿಂದ ಇದೀಗ ತಾನೆ ಹೊಣೆಗಾರಿಕೆಯ ಹೊರೆ ಕೆಳಗಿಳಿಸಿ ತಮ್ಮ ಕ್ಷೇತ್ರದಲ್ಲಿ ಬಿರುಸಾಗಿ ಸುತ್ತಾಡುತ್ತಿರುವ ಕೆ.ಎಸ್. ಈಶ್ವರಪ್ಪನವರಿಗೆ ಮುಂದಿನ ಚುನಾವಣೆ ದೊಡ್ಡ ಸವಾಲೆ ಸರಿ.
ಆಡಳಿತ ವಿರೋಧಿ ಅಲೆ, ಈಶ್ವರಪ್ಪ ಹೇಗೆ ಗೆಲ್ಲುತ್ತಾರೋ ನೋಡುತ್ತೇನೆ ಎಂಬ ಯಡಿಯೂರಪ್ಪನವರ ಸವಾಲು, ಜಾತಿ ಸಮೀಕರಣ ಹೀಗೆ ಎಲ್ಲಾ ವಿಚಾರದಲ್ಲೂ ಈಶ್ವರಪ್ಪರಿಗೆ ಪರಿಸ್ಥಿತಿ ಅನುಕೂಲಕರವಾಗಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಹಿಂದಿನ ಚುನಾವಣೆಯಲ್ಲಿ ಬೆನ್ನಿಗಿರುತ್ತಿದ್ದ ಬಿಎಸ್‌ವೈ ಜೊತೆಗಿಲ್ಲ.
ಇನ್ನಿಲ್ಲದ ಪ್ರಯತ್ನ: ಇಂತಹ ಪರಿಸ್ಥಿತಿಯಲ್ಲಿ ಕಾರ್ಯಕರ್ತರಲ್ಲಿ ಹೊಸಹುಮ್ಮಸ್ಸು ತರುವುದು, ಗೊಂದಲಗಳನ್ನು ನಿವಾರಿಸುವುದು ಇದೆಲ್ಲಕ್ಕಿಂತ ಮುಖ್ಯವಾಗಿ ಪಕ್ಷದ ಜೊತೆಗೆ ಮುಂಚಿನಿಂದಲೂ ಇದ್ದ ಮತದಾರರನ್ನು ಓಲೈಸಿಕೊಳ್ಳುವ ಉದ್ದೇಶದಿಂದ ಸ್ಥಳೀಯ ಬಿಜೆಪಿಯು ನರೇಂದ್ರ ಮೋದಿಯವರನ್ನು ಶಿವಮೊಗ್ಗಕ್ಕೆ ಕರೆತರಲು ಇನ್ನಿಲ್ಲದ ಪ್ರಯತ್ನ ನಡೆಸಿದೆ.
ಮೋದಿಯವರನ್ನು ಇಲ್ಲಿಗೆ ಕರೆತಂದು ಪ್ರಚಾರ ನಡೆಸಬೇಕೆಂಬ ದೊಡ್ಡ ಅಭಿಲಾಷೆ ಇದೆ. ಇದಕ್ಕಾಗಿ ಪ್ರಯತ್ನ ನಡೆದಿದೆ ಎಂದು ಸ್ಥಳೀಯ ಬಿಜೆಪಿ ನಾಯಕರು “OÚ«ÚsÚ®ÚúڒOæQ ತಿಳಿಸಿದರು.
ಒಟ್ಟಾರೆ, ರಾಜ್ಯದ ಮೂಲೆಮೂಲೆಗೆ ತೆರಳಿ ಅನುಕಂಪ ಸೃಷ್ಟಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಬಿಎಸ್‌ವೈ ಎಂಬ ಅಸ್ತ್ರ ಈಗ ಬಿಜೆಪಿಯಲ್ಲಿಲ್ಲ. ಆ ಅಸ್ತ್ರವೇ ಪಕ್ಷಕ್ಕೆ ಎದುರಾಳಿ. ಹೀಗಿರುವಾಗ ಪರ್ಯಾಯ ಶಕ್ತಿಯನ್ನು ನೆಚ್ಚಿಕೊಳ್ಳುವುದು ಬಿಜೆಪಿಗೂ ಅನಿವಾರ್ಯ. ಮೋದಿಯ ಅಲೆಯನ್ನು ಕೊಂಚವಾದರೂ ಬಳಸಿಕೊಳ್ಳಬೇಕೆಂಬ ಆಸೆ ಬಿಜೆಪಿಯದ್ದು.
-ಶ್ರೀಕಾಂತ ಭಟ್