ಪ್ರತಿ ತಾಲೂಕಲ್ಲೂ ಕಂಟ್ರೋಲ್ ರೂಂ
ಕ.ಪ್ರ. ವಾರ್ತೆ, ಶಿವಮೊಗ್ಗ, ಮಾ.31
ಅತ್ತ ರಾಜಕೀಯ ಪಕ್ಷಗಳು ಚುನಾವಣೆಗೆ ಬಿರುಸಿನ ತಯಾರಿ ನಡೆಸುತ್ತಿರುವಂತೆಯೇ ಇತ್ತ, ಚುನಾವಣೆ ನಡೆಸುವ ವ್ಯವಸ್ಥೆ ಕೂಡ ಅಷ್ಟೇ ವೇಗದಲ್ಲಿ ಸಜ್ಜುಗೊಳ್ಳುತ್ತಿದೆ.
ಜಿಲ್ಲೆಯಲ್ಲಿ ಸುಗಮ- ಶಾಂತಿಯುತ ಚುನಾವಣಾ ಪ್ರಕ್ರಿಯೆ ನಡೆಸುವ ಉದ್ದೇಶದಿಂದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ, ಸಕಲ ವ್ಯವಸ್ಥೆಯನ್ನೊಳಗೊಂಡ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗುತ್ತಿದೆ.
ಸಮಗ್ರ ಮಾಹಿತಿ ಸಲ್ಲಿಸಿ: ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಪ್ರತ್ಯೇಕ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗುತ್ತಿದೆ. ದಿನದ 24 ಗಂಟೆಯೂ ಈ ಕೇಂದ್ರ ಕಾರ್ಯನಿರ್ವಹಣೆ ಮಾಡಲಿದ್ದು, ಅಗತ್ಯ ಸಿಬ್ಬಂದಿಗಳ ನೇಮಿಸಲಾಗುತ್ತದೆ. ಈ ಕುರಿತಂತೆ ಏಪ್ರಿಲ್ 1 ರೊಳಗೆ ತಮಗೆ ಸಮಗ್ರ ಮಾಹಿತಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಯವರು ತಾಲೂಕು ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರತಿ ಕಂಟ್ರೋಲ್ ರೂಂಗೆ ಪ್ರತ್ಯೇಕ ದೂರವಾಣಿ ಸಂಖ್ಯೆ ನೀಡಲಾಗುತ್ತದೆ. ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ, ಫ್ಯಾಕ್ಸ್, ಪ್ರಿಂಟರ್ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತದೆ. ಜೊತೆಗೆ ತಾಲೂಕು ಕಚೇರಿ, ಪೊಲೀಸ್ ಇಲಾಖೆ, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಯನ್ನು ನೇಮಿಸಲಾಗುವುದು. ಶಿಫ್ಟ್ ಆಧಾರದ ಮೇಲೆ ಈ ಸಿಬ್ಬಂದಿ ಕಾರ್ಯನಿರ್ವಹಣೆ ಮಾಡಲಿದ್ದಾರೆ.
ಈ ಕೇಂದ್ರಕ್ಕೆ ಬರುವ ಪ್ರತಿ ಕರೆಯನ್ನು ಸ್ವೀಕರಿಸಿ ದೂರು, ಅಹವಾಲು ಆಲಿಸಲಾಗುತ್ತದೆ. ನಿಗದಿತ ಮಾದರಿಯ ನಮೂನೆಯಲ್ಲಿ ವಿಷಯ ದಾಖಲಿಸಿಕೊಂಡು ಪ್ರತ್ಯೇಕ ನೋಂದಣಿ ಸಂಖ್ಯೆ ನೀಡಲಾಗುತ್ತದೆ. ಇದನ್ನು ಜಿಲ್ಲಾ ಮಟ್ಟದ ಕಂಟ್ರೋಲ್ ರೂಂಗೆ ಮಾಹಿತಿ ನೀಡಲಾಗುತ್ತದೆ. ಹಾಗೆಯೇ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಲಭ್ಯವಾಗುವ ಮಾಹಿತಿಯನ್ನು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಂಸಿಸಿ, ಸೆಕ್ಟರ್ ತಂಡಗಳಿಗೆ ತಕ್ಷಣವೇ ತಿಳಿಸಲಾಗುತ್ತದೆ.
ಎಲ್ಲ ಕಂಟ್ರೋಲ್ ರೂಂಗಳಿಗೆ ವೈಯರ್ ಲೆಸ್ ಸೆಟ್ಡಲಾಗುವುದು. ಸೆಟ್ ನೀಡುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ಸೂಚನೆ ನೀಡಲಿದೆ. ಎಲ್ಲ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ದಾಖಲಾಗುವ ಚುನಾವಣಾ ನೀತಿ-ಸಂಹಿತೆ ಪ್ರಕರಣಗಳ ಸಮಗ್ರ ವಿವರವನ್ನು ತಮಗೆ ನೀಡಬೇಕು. ಈ ಮಾಹಿತಿಯನ್ನು ಪ್ರತಿ ದಿನ 10 ಗಂಟೆಯೊಳಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಜಿಲ್ಲಾಡಳಿತ ಸಲ್ಲಿಸುವುದು ಕಡ್ಡಾಯವಾಗಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದ ಅಧಿಕಾರಿಗಳು ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಏಕಗವಾಕ್ಷಿ ಸಮಿತಿ
ಚುನಾವಣಾ ಸಂದರ್ಭದಲ್ಲಿ ಸಭೆ, ಸಮಾರಂಭ, ವಾಹನಗಳ ಓಡಾಟಕ್ಕೆ ಅನುಮತಿ, ವಿದ್ಯುತ್ ಸಂಪರ್ಕ ಮತ್ತಿತರ ಕಾರ್ಯಗಳಿಗೆ ರಾಜಕೀಯ ಪಕ್ಷಗಳು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿಲ್ಲ. ಏಕೆಂದರೆ, ಅಲೆದಾಟ ತಪ್ಪಿಸುವ ಉದ್ದೇಶದಿಂದಲೇ ತಾಲೂಕು ಮಟ್ಟದಲ್ಲಿ ಏಕಗವಾಕ್ಷಿ ಸಮಿತಿ ರಚಿಸಲಾಗಿದೆ.
ಏಕಗವಾಕ್ಷಿ ಸಮಿತಿಯು ರಾಜಕೀಯ ಪಕ್ಷಗಳು ಸಲ್ಲಿಸುವ ಅರ್ಜಿಗಳಿಗೆ 24 ಗಂಟೆಯೊಳಗೆ ಪ್ರತ್ಯುತ್ತರ ನೀಡಬೇಕು. ಸಭೆ - ಸಮಾರಂಭಗಳಿಗೆ ಅನುಮತಿ ನೀಡಲಾಗುವುದೇ ಇಲ್ಲವೇ ಎಂಬುವುದನ್ನು ಸಂಬಂಧಿಸಿದ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಮಾಹಿತಿಯನ್ನು ಈ ಸಮಿತಿ ರವಾನಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ.
ಈಗಾಗಲೇ ಜಿಲ್ಲಾ ಮಟ್ಟ, ತಾಲೂಕು ಹಾಗೂ ಸೆಕ್ಟರ್ ಮಟ್ಟದ ನೀತಿ-ಸಂಹಿತೆ ಅಧಿಕಾರಿಗಳ ತಂಡ ರಚನೆ ಮಾಡಿ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈ ತಂಡಗಳು ತಮ್ಮ ವ್ಯಾಪ್ತಿಯಲ್ಲಿ ಕಂಡುಬರುವ ಚುನಾವಣಾ ಅಕ್ರಮಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಸೂಚಿಸಲಾಗಿದೆ.