ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹೊಸ ಪ್ರಯೋಗದ ನೆಲೆಯಾದ ಸಮಾಜವಾದಿ ನೆಲ

Lingaraj Badiger
Updated On : 1 Apr 2013, 11:16 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.31
ಕರ್ನಾಟಕ ಸರ್ಕಾರವು ಭೂಸುಧಾರಣಾ ಕಾಯ್ದೆ ಜಾರಿ ಮಾಡಿ ಇಡೀ ದೇಶಕ್ಕೆ ಮಾದರಿಯಾಗಲು ಕಾರಣವಾದ ಕ್ಷೇತ್ರ ಸಾಗರ. 50ರ ದಶಕದಲ್ಲಿ ನಡೆದ ಕಾಗೋಡು ಹೋರಾಟವು ಇಡೀ ದೇಶದ ಗಮನ ಸೆಳೆದಿತ್ತು. ಸ್ವತಃ ರಾಮಮನೋಹರ ಲೋಹಿಯಾ ಈ ಹೋರಾಟದಲ್ಲಿ ಪಾಲ್ಗೊಂಡು ಬಂಧನಕ್ಕೊಳಪಟ್ಟಿದ್ದರು.
  ಹಾಗೆ ನೋಡಿದರೆ ಸಾಗರ ಕ್ಷೇತ್ರವು ಹಲವು ವಿಶೇಷಗಳನ್ನು ಹೊಂದಿದ ನೆಲೆ. ವಿಶ್ವವಿಖ್ಯಾತ ಜೋಗ ಜಲಪಾತ, ಕೆಳದಿ ಸಾಮ್ರಾಜ್ಯದ ಕುರುಹುಗಳು ಇಲ್ಲಿ ಕಾಣಸಿಗುತ್ತವೆ. ರಂಗಭೂಮಿಯಲ್ಲಿ ವಿಶ್ವಮಾನ್ಯತೆ ಪಡೆದ ಹೆಗ್ಗೋಡಿನ ಕೋಡು ಈ ಕ್ಷೇತ್ರಕ್ಕಿದೆ. ಅದೇ ರೀತಿ ರಾಜಕಾರಣದಲ್ಲಿಯೂ ಸಹ ವಿಶೇಷ ಛಾಪು ಮೂಡಿಸಿದೆ.
ಸೋಷಿಯಲಿಸ್ಟ್‌ಗೆ ಮಣೆ: ಸ್ವತಂತ್ರ್ಯ ಭಾರತದ ಮೊದಲ ಚುನಾವಣೆಯಲ್ಲಿಯೇ ಹೊಸನಗರ ತಾಲೂಕನ್ನು ಒಳಗೊಂಡಿದ್ದ ಈ ಕ್ಷೇತ್ರವು ಸೋಷಿಯಲಿಸ್ಟ್ ಪಾರ್ಟಿಯ ಶಾಂತವೇರಿ ಗೋಪಾಲಗೌಡರನ್ನು ಆರಿಸಿತ್ತು. ನಂತರ ಕಾಂಗ್ರೆಸ್ ಬೆಳೆದಿತ್ತು. 1972ರಲ್ಲಿ ಮತ್ತೆ ಸೋಷಿಯಲಿಸ್ಟ್ ಪಾರ್ಟಿ ಬಂದಿತ್ತು. ಈ ಪಕ್ಷದಿಂದ ಸ್ಪರ್ಧಿಸಿ ಗೆದ್ದಿದ್ದ ಕಾಗೋಡು ತಿಮ್ಮಪ್ಪ ಅವರು ಯಾವಾಗ ಕಾಂಗ್ರೆಲ್‌ಗೆ  ಸೇರ್ಪಡೆಯಾದರೋ ಆಗ ಮತ್ತೆ ಕಾಂಗ್ರೆಸ್ಸಿಗೇ ಒಲಿದಿತ್ತು.
 2004ರಲ್ಲಿ ಬಂಗಾರಪ್ಪ ಅವರು ಬಿಜೆಪಿ ಸೇರಿದ್ದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರಿದಂತೆ ಸಾಗರ ಕ್ಷೇತ್ರದ ಮೇಲೆಯೂ ಪರಿಣಾಮ ಬೀರಿತ್ತು.
   ಅಲ್ಲಿಯವರೆಗೆ ಜಾತ್ಯತೀತ ಶಕ್ತಿಗಳ ರಾಜಕೀಯಕ್ಕೆ ಅವಕಾಶ ನೀಡಿದ್ದ ಸಾಗರ ನೆಲದಲ್ಲಿ ಕಮಲ ಅರಳಿತ್ತು. ಸ್ವತಃ ಕಾಗೋಡು ತಿಮ್ಮಪ್ಪ ಅವರನ್ನು ಅವರ ಅಳಿಯ ಬೇಳೂರು ಗೋಪಾಲಕೃಷ್ಣ ಎರಡು ಬಾರಿ ಸೋಲಿಸಿದ್ದು ಸಾಗರದ ಇತಿಹಾಸದಲ್ಲಿ ದಾಖಲಾರ್ಹ.
   ಪ್ರಮುಖ ರೈತ ಚಳವಳಿಯಾದ ಕಾಗೋಡು ಹೋರಾಟದ ರೂವಾರಿ ಎಚ್. ಗಣಪತಿಯಪ್ಪ ಅವರು ಶಾಸಕರಾಗುವ ಹಲವು ಪ್ರಯತ್ನ ನಡೆಸಿದರೂ ವಿಫಲರಾಗಿದ್ದೂ ಸಹ ದಾಖಲಾರ್ಹ.
8 ಬಾರಿ ಕಾಂಗ್ರೆಸ್‌ಗೆ ಜಯ: ಕಾಂಗ್ರೆಸ್ ಅಭ್ಯರ್ಥಿಯನ್ನು 8 ಬಾರಿ ಗೆಲ್ಲಿಸಿರುವ ಈ ಕ್ಷೇತ್ರವು 2 ಬಾರಿ ಸೋಷಿಯಲಿಸ್ಟ್, ಇನ್ನೆರಡು ಬಾರಿ ಬಿಜೆಪಿ ಅಭ್ಯರ್ಥಿಗೆ ಮಣೆ ಹಾಕಿದೆ. ಒಮ್ಮೆ ಜನತಾ ಪಕ್ಷಕ್ಕೂ ಅವಕಾಶ ನೀಡಿದೆ.
 ಈಡಿಗ ಸಮುದಾಯದ ಪ್ರಭಾವಳಿಯ ಈ ಕ್ಷೇತ್ರದಲ್ಲಿ ಈಡಿಗೇತರರೂ ಆವಾಗಾವಾಗ ರಾಜ್ಯಭಾರ ಮಾಡಿದ್ದಾರೆ. ಈಡಿಗ ಸಮುದಾಯದಲ್ಲಿ ಮೊಟ್ಟಮೊದಲು ಪದವಿ ಪಡೆದ ವಿದ್ಯಾವಂತ ಕಾಗೋಡು ತಿಮ್ಮಪ್ಪ. ಅವರು ನಾಲ್ಕು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
   ಅಷ್ಟೇ ಅಲ್ಲ. ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಎಂದರೆ ಏನು ಎಂದು ಮೊದಲು ಸಾಗರಕ್ಕೆ ತೋರಿಸಿಕೊಟ್ಟ ಶಾಸಕರಿವರು. ಭೂಸುಧಾರಣಾ ಕಾಯ್ದೆ ಜಾರಿಯಾದಾಗ ಮನೆಮನೆಗೆ ಭೇಟಿ ನೀಡಿ, ಜನರಿಂದ ಅರ್ಜಿ ಸಲ್ಲಿಸಿ ಅವರು ಭೂಮಿಯ ಮಾಲೀಕರಾಗುವಂತೆ ಮಾಡುವಲ್ಲಿ ಇವರದು ಪ್ರಮುಖ ಪಾತ್ರ. ಅದೇ ಪ್ರೀತಿಯಿಂದ ಜನರು ಇವರನ್ನು ಗೆಲ್ಲಿಸುತ್ತಾ ಬರುತ್ತಿದ್ದರು.
ಕ್ಷೇತ್ರ ಮರುವಿಂಗಡಣೆ: ಆದರೆ ಈಗ ಭೂಸುಧಾರಣಾ ಕಾಯ್ದೆ ಜಾರಿಗೆ ನಡೆದ ಹೋರಾಟದ ಅನುಭವವಿಲ್ಲದ, ಪರಿಚಯವಿಲ್ಲದ ತಲೆಮಾರು ಸಾಗರದಲ್ಲಿದೆ. ತನ್ಮೂಲಕ ಚುನಾವಣೆಯ ಸ್ವರೂಪವೂ ಬದಲಾಗುತ್ತಿದೆ. 2008ರಲ್ಲಿ ಮರುವಿಂಗಡಣೆಯಾದ ಈ ಕ್ಷೇತ್ರಕ್ಕೆ ಮತ್ತೆ ಹೊಸನಗರ ತಾಲೂಕಿನ ಕೆಲವು ಭಾಗಗಳು ಸೇರಿವೆ.
 ಈ ಬಾರಿ ಕಾಂಗ್ರೆಸ್‌ನಿಂದ ಕಾಗೋಡು ತಿಮ್ಮಪ್ಪ ಮತ್ತೆ ಕಣಕ್ಕಿಳಿಯುವುದು ಗ್ಯಾರೆಂಟಿ. ಒಂದು ಕಾಲದ ಇವರ ಒಡನಾಡಿ ಬಿ.ಆರ್. ಜಯಂತ್ ಕರ್ನಾಟಕ ಜನತಾ ಪಕ್ಷದಿಂದ ಸ್ಪರ್ಧಿಸಲಿದ್ದಾರೆ.
    ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣ ಯಾವ ಪಕ್ಷಕ್ಕೂ ಸೇರದೆ ಅತಂತ್ರವಾಗಿದ್ದಾರೆ. ಜೆಡಿಎಸ್ ಇನ್ನೂ ಅಭ್ಯರ್ಥಿ ತೀರ್ಮಾನಿಸಿಲ್ಲ. ಈ ಬಾರಿ ಕ್ಷೇತ್ರದ ಮತದಾರರಿಗೆ ಹೆಚ್ಚು ಆಯ್ಕೆಗಳಿಲ್ಲ.
-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement