ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಈಶ್ವರಪ್ಪ ಕುಟುಂಬದ ಹಗರಣ ಕುರಿತು ಬಿಜೆಪಿ ಸ್ಪಷ್ಟನೆ ಕೊಡಲಿ

Lingaraj Badiger
Updated On : 2 May 2013, 11:14 am

ಶಿವಮೊಗ್ಗ: ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ತಾವುಗಳಿಸಿದ ಭ್ರಷ್ಟಾಚಾರದ ಕಪ್ಪುಹಣವನ್ನು ಸಕ್ರಮಗೊಳಿಸಲು ಭರಣಿ ಪವರ್ ಪ್ರೈವೆಟ್ ಲಿಮಿಟೆಡ್ ಎಂಬ ಬೇನಾಮಿ ಕಂಪನಿಯೊಂದನ್ನು ಹುಟ್ಟುಹಾಕಿ ಕೋಟ್ಯಂತರ ರುಪಾಯಿ ಅವ್ಯವಹಾರವೆಸಗಿದ್ದಾರೆ ಎಂಬ ಕೆಜೆಪಿ ಆರೋಪನ್ನು ಬೆಂಬಲಿಸಿರುವ ಕಾಂಗ್ರೆಸ್, ಪ್ರಕರಣವನ್ನು ಬೇಧಿಸಲು ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದೆ.
 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಕೆ. ದಿವಾಕರ್, ಈಶ್ವರಪ್ಪ ಕುಟುಂಬದ ಹಗರಣ ಕೊಲ್ಕತ್ತಾದ ಚಿಟ್‌ಫಂಡ್ ಹಗರಣ, ಮೆಗಾಸಿಟಿ ಹಗರಣದಷ್ಟೇ ದೊಡ್ಡದಾಗಿದ್ದು, ಕಾರ್ಪೊರೇಟ್ ಫ್ರಾಡ್ ಅಡಿಯಲ್ಲಿ ತನಿಖೆಯಾಗಲಿ ಎಂಬುದು ಕಾಂಗ್ರೆಸ್‌ನ ಒತ್ತಾಯ ಎಂದು ತಿಳಿಸಿದರು.
ಸಕ್ರಮಗೊಳಿಸಲು: ಯುಪಿಎ ಆಡಳಿತವನ್ನು ಟೀಕಿಸುವ ಬಿಜೆಪಿ ರಾಷ್ಟ್ರೀಯ ನಾಯಕರು ಈಶ್ವರಪ್ಪ ಕುಟುಂಬಕ್ಕೆ ಸೇರಿದ ಭರಣಿ ಎಲೆಕ್ಟ್ರಿಕಲ್ಸ್ ಕಂಪನಿಯ ಹಗರಣದ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಸವಾಲೆಸೆದ ಅವರು, ಈಶ್ವರಪ್ಪನವರ ಪುತ್ರ ಅನಿಲ್ ಅಂಬಾನಿ, ಮುಖೇಶ್ ಅಂಬಾನಿಯಲ್ಲ. ಯಾವುದೇ ಬ್ಯುಸಿನೆಸ್ ಟೈಕೂನ್ ಅಲ್ಲ. ಹೀಗಿರುವಾಗ ಭ್ರಷ್ಟಾಚಾರದ ಹಣವನ್ನು ಸಕ್ರಮಗೊಳಿಸಲು ಈ ಎಲ್ಲಾ ತಂತ್ರಗಾರಿಕೆ ಮಾಡಲಾಗಿದೆ ಎಂದು ಟೀಕಿಸಿದರು.
 ಈಶ್ವರಪ್ಪನವವರು ಇಂಧನ ಸಚಿವರಾಗಿದ್ದಾಗ ನಡೆಸಿದ ಎಲ್ಲಾ ಕಲ್ಲಿದ್ದಲು ಸರಬರಾಜು, ವಿದ್ಯುತ್ ಖರೀದಿ ಒಪ್ಪಂದದ ತನಿಖೆಯಾಗಬೇಕು ಎಂದ ಅವರು, ಕಾಂಗ್ರೆಸ್ ಸರ್ಕಾರ ರಚನೆಯಾದ ಕೂಡಲೇ ಬಿಜೆಪಿ ಸಚಿವರ ತನಿಖೆಯನ್ನು ತನಿಖೆಗೊಳಪಡಿಸಲಾಗುತ್ತದೆ ಎಂದು ಹೇಳಿದರು.
ಬ್ಯಾಂಕ್ ವ್ಯವಹಾರದ ಮೇಲೆ ಕಣ್ಣಿಡಿ: ತೀರ್ಥಹಳ್ಳಿ ಕ್ಷೇತ್ರದಲ್ಲಿ ಸೀರೆ, ಬೆಳ್ಳಿಬಟ್ಟಲು ನೀಡಿ ಮಹಿಳಾ ಸಬಲೀಕರಣ ಮಾಡಲು ಸಾಧ್ಯವಿಲ್ಲ ಎಂದು ಕೆಜೆಪಿ ಅಭ್ಯರ್ಥಿಯನ್ನು ಕಿಚಾಯಿಸಿದ ಕೆ. ದಿವಾಕರ್, ಡಿಸಿಸಿ ಬ್ಯಾಂಕ್ ಬಳಸಿಕೊಂಡು ಮುಂದಿನ 3-4 ದಿನಗಳಲ್ಲಿ ಚುನಾವಣೆಗಾಗಿ ಹಣ ಸಾಗಾಟ-ಹಂಚಿಕೆ ಸಾಧ್ಯವಿರುವುದರಿಂದ, ಬ್ಯಾಂಕ್ ಮೇಲೆ ನಿಯಂತ್ರಣ ಸಾಧಿಸುವಂತೆ ಚುನಾವಣಾ ಆಯೋಗವನ್ನು ಕೋರಲಾಗುತ್ತದೆ ಎಂದು ತಿಳಿಸಿದರು.
ಗೆಲ್ಲೋದು ಕಾಂಗ್ರೆಸ್: ನರೇಂದ್ರ ಮೋದಿ ಪ್ರಚಾರಕ್ಕೆ ಬೇಡ, ಬಿಜೆಪಿ ಸಾಧನೆಯಿಂದಲೇ ಈ ಚುನಾವಣೆ ಗೆಲ್ಲುತ್ತೇವೆ ಎಂದು ಹೇಳಿಕೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಇದೀಗ ಬಾಗಲಕೋಟೆ, ಮಂಗಳೂರು, ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ ನರೇಂದ್ರ ಮೋದಿಯನ್ನು ಚುನಾವಣಾ ಪ್ರಚಾರಕ್ಕೆ ಕರೆಸುತ್ತಿದ್ದಾರೆ. ನರೇಂದ್ರ ಮೋದಿ ರಾಜ್ಯದ 30 ಜಿಲ್ಲೆಗಳಿಗೂ ಹೋಗಿ ಕೋಮು ಸೌಹಾರ್ದತೆಗೆ ಬೆಂಕಿ ಹಚ್ಚಿದರೂ ಕಾಂಗ್ರೆಸ್ ಈ ಬಾರಿ ಕನಿಷ್ಠ 133 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದರು.
 ಮಲೆನಾಡು ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಜೀವನೋಪಾಯಕ್ಕಾಗಿ ಮಾಡಿದ ಕೃಷಿ, ಸೊಪ್ಪಿನ ಬೆಟ್ಟ, ಹೊಲ, ಮನೆಯನ್ನು ಅರಣ್ಯ ಇಂಡೀಕರಣದ ಹೆಸರಿನಲ್ಲಿ ವಶಪಡಿಸಿಕೊಳ್ಳುವ ಕಾರ್ಯಕ್ಕೆ ತಡೆಯೊಡ್ಡಿ ಮೂರು ತಿಂಗಳಲ್ಲಿ ಹೊಸ ಕಾಯ್ದೆ ರಚಿಸುವ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.
 ಶಿಕಾರಿಪುರ, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ಕ್ಷೇತ್ರಗಳಲ್ಲಿ ಬಿಜೆಪಿ ಒಂದು ಮತಕ್ಕೆ 300 ರುಪಾಯಿಯಂತೆ ಖರೀದಿ ಮಾಡುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗ ಗಮನಿಸಿ ದೂರ ದಾಖಲಿಸುವಂತೆ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
 ಇಂದು ವೈಚಾರಿಕ ಚುನಾವಣೆ ಆಗಬೇಕು, ಆರ್ಥಿಕ ಆಧಾರಿತ ಚುನಾವಣೆ ಆಗಬಾರದೆಂಬ ಕಾರಣಕ್ಕೆ ಹಳ್ಳಿಹಳ್ಳಿಗಳಲ್ಲಿ ಕಾಂಗ್ರೆಸ್ ತಂಡಗಳನ್ನು ರಚಿಸಿದ್ದು, ಈ ತಂಡ ಅಕ್ರಮ ಹಣ, ಮದ್ಯ ಹಂಚಿಕೆಯನ್ನು ಪತ್ತೆ ಹಚ್ಚಲಿದೆ ಎಂದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ಹೆಗ್ಡೆ, ಮುಖಂಡ ವೈ.ಎಚ್. ನಾಗರಾಜ್, ಸೈಯದ್ ವಾಹಿದ್ ಅಡ್ಡು ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement