ಪಕ್ಷೇತರರಿಗೆ ಸ್ಪರ್ಧೆಯೇ ಆದರ್ಶ
ಶಿವಮೊಗ್ಗ: ಪಕ್ಷದ ಟಿಕೆಟ್ ಸಿಗದೆ ಬಂಡಾಯ ನಿಂತವರು, ನಮ್ಮ ಹೆಸರು ಚಾಲ್ತಿಯಲ್ಲಿದ್ದರೆ ಮುಂದೆ ಅನುಕೂಲವಾದೀತು ಎಂದುಕೊಂಡವರು, ಸಮಾಜ ಸೇವೆ ಮಾಡಬೇಕೆಂಬ ನಿಜವಾದ ಕಳಕಳಿ ಇರುವವರು, ಆದರ್ಶ ರಾಜಕಾರಣ ಮಾಡಬೇಕೆಂದುಕೊಂಡರು, ತಮ್ಮ ಸ್ಪರ್ಧೆ ಉತ್ತಮ ಆಶಯಗಳನ್ನು ಬಿಂಬಿಸಬೇಕೆಂದುಕೊಂಡರು.
ಜಿಲ್ಲೆಯಲ್ಲಿ ಪಕ್ಷೇತರರಾಗಿ ನಿಂತಿರುವವರನ್ನು ಸಾರಾಸಗಾಟಾಗಿ ನಿರ್ಲಕ್ಷಿಸಲು ಆಗುವುದಿಲ್ಲ. ಅವರಲ್ಲಿಯೂ ಸಹ ವಿಭಿನ್ನ ಚಿಂತನೆಗಳಿವೆ. ಬಂಡಾಯದ ನೆಲೆಗಳಿವೆ. ಇವರ ಒಟ್ಟು ಸಂಖ್ಯೆ 37. ಇವರಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಪ್ರಭಲ ಪೈಪೋಟಿ ನೀಡುತ್ತಿರುವುದು ಭದ್ರಾವತಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಹಾಲಿ ಶಾಸಕ ಬಿ.ಕೆ. ಸಂಗಮೇಶ್ವರ.
ಅಚ್ಚರಿ ಎಂದರೆ ಈ ಬಾರಿ ಹೆಚ್ಚು ಪಕ್ಷೇತರರು ಕಣಕ್ಕಿಳಿದಿರುವುದು ಭದ್ರಾವತಿಯಲ್ಲಿಯೇ. 9 ಪಕ್ಷೇತರರು ಇಲ್ಲಿದ್ದಾರೆ. ಉಳಿದಂತೆ ಶಿವಮೊಗ್ಗ ಗ್ರಾಮಾಂತರ-5, ಶಿವಮೊಗ್ಗ-7, ತೀರ್ಥಹಳ್ಳಿ-3, ಶಿಕಾರಿಪುರ-6, ಸೊರಬ-4, ಸಾಗರದಲ್ಲಿ 3 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೂರು ಬಾರಿ: ಮಲೆನಾಡ ಜಿಲ್ಲೆಯ ಪಕ್ಷೇತರರಿಗೆ ಮಣೆ ಹಾಕಿದ್ದು ಕಡಿಮೆಯೇ. ಜಿಲ್ಲೆಯ ಚುನಾವಣಾ ಇತಿಹಾಸವನ್ನು ಗಮನಿಸಿದರೆ ಹೆಚ್ಚು ಪಕ್ಷೇತರರು ಗೆದ್ದಿರುವುದು ಭದ್ರಾವತಿ ಕ್ಷೇತ್ರದಲ್ಲಿಯೇ.
ಮೂರು ಬಾರಿ ಇಲ್ಲಿ ಪಕ್ಷೇತರರು ಜಯಶಾಲಿಗಳಾಗಿದ್ದಾರೆ. 1994 ಹಾಗೂ 1999ರಲ್ಲಿ ಎಂ.ಜೆ. ಅಪ್ಪಾಜಿಗೌಡ ಪಕ್ಷೇತರರಾಗಿ ಗೆದ್ದಿದ್ದರು. 2004ರಲ್ಲಿ ಇವರನ್ನು ಸೋಲಿಸಿದ್ದ ಬಿ.ಕೆ. ಸಂಗಮೇಶ್ವರ ಅವರೂ ಪಕ್ಷೇತರ ಅಭ್ಯರ್ಥಿಯೇ ಆಗಿದ್ದರು. ನಂತರ 2008ರ ಚುನಾವಣೆಯಲ್ಲಿ ಸಂಗಮೇಶ್ವರ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯಿಸಿದ್ದರು. ಈ ಬಾರಿ ಕಾಂಗ್ರೆಸ್ ಟಿಕೆಟ್ ದೊರೆಯದ ಕಾರಣ ಕೆಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಉಳಿದಂತೆ ಈ ಕ್ಷೇತ್ರದಲ್ಲಿ ಅಖಿಲ್ ಅಹಮದ್, ಅಹಮದ್ ಅಲಿ, ಓಂ ವಿಜಯವಂಶಿ, ಬಿಜಿಸಿ ಕುಮಾರ್, ಟಿಪ್ಪು ಸುಲ್ತಾನ್, ವಸುಂದರಾ ದೇವಿ, ಹನುಮಂತಪ್ಪ, ಪಿ.ಎ. ಹನುಮಂತಪ್ಪ ಪಕ್ಷೇತರರಾಗಿದ್ದಾರೆ.
ಭರ್ಜರಿ ಕಣ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಪಕ್ಷೇತರರ ಆರ್ಭಟ ಜೋರಾಗಿದೆ. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ. ಗುರುಮೂರ್ತಿ ಗೆಲವಿಗೆ ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ.
ಭಗವಾನ್ ಸಂಘರ್ಷ ಸಮಿತಿ ಕಟ್ಟಿಕೊಂಡು ಮೆಗ್ಗಾನ್ ಆಸ್ಪತ್ರೆ ಇತ್ಯಾದಿ ವಿಷಯಗಳ ಬಗ್ಗೆ ಆಗಾಗ್ಗೆ ಹೋರಾಟ ಮಾಡುವ ವಿ. ಭಗವಾನ್ ಅದೃಷ್ಟ ಪರೀಕ್ಷೆಯಲ್ಲಿ ತೊಡಗಿದ್ದಾರೆ. ಆದಾಯ ತೆರಿಗೆ ಅಧಿಕಾರಿಯಾಗಿದ್ದ ಶಿವರುದ್ರಯ್ಯ ಸ್ವಾಮಿ ಅವರು ಟಿಕೆಟ್ ಆಕಾಂಕ್ಷಿಯಾಗಿ ಕರ್ನಾಟಕ ಜನತಾ ಪಕ್ಷ ಸೇರಿದ್ದರು. ಟಿಕೆಟ್ ದೊರೆಯದ ಕಾರಣ ಪಕ್ಷೇತರರಾಗಿದ್ದಾರೆ. ಇನ್ನುಳಿದಂತೆ ರುದ್ರಸ್ವಾಮಿ ಹಾಗೂ ಶಿವಮೂರ್ತಿ ಕಣದಲ್ಲಿದ್ದಾರೆ.
ತರಾವರಿ ಯತ್ನ: ಶಿವಮೊಗ್ಗ ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಉಷಾ ಜಯರಾಜ್ ಅವರು ಮತದಾರರ ಗಮನ ಸೆಳೆಯಲು ಹಲವು ಪ್ರಯತ್ನ ನಡೆಸಿದ್ದಾರೆ. ಒಂಟಿಕಾಲಲ್ಲಿ ನಿಂತು ಮತ ಯಾಚಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು, ಕ್ಷೇತ್ರದ ಏಕೈಕ ಮಹಿಳಾ ಅಭ್ಯರ್ಥಿಯಾಗಿರುವುದನ್ನು ಅವರು ಜನರ ಮುಂದಿಡುತ್ತಿದ್ದಾರೆ. ಹಲವು ಜನಪರ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸುವ ಸೈಯದ್ ಮಜರ್ ಪ್ರಯತ್ನ ನಡೆಸಿದ್ದಾರೆ. ಇನ್ನುಳಿದಂತೆ ಮಹಮದ್ ಫಯಾಜ್ ಅಹಮದ್, ಮೊಹಮದ್ ಫಜಿಲ್, ಎ. ಯಾಸಿನ್ ಮುಬಾರಕ್, ಗಾ.ರಾ. ಶ್ರೀನಿವಾಸ್, ಸೈಯದ್ ಶಾಮೀದ್ ಅವರು ಕಣದಲ್ಲಿದ್ದಾರೆ.
ಪ್ರತಿಷ್ಠಿತ ಕ್ಷೇತ್ರ: ಶಿಕಾರಿಪುರ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಕಣಕ್ಕಿಳಿದಿರುವ ಪಕ್ಷೇತರರದಲ್ಲಿ ಡಿ.ಎಸ್. ಈಶ್ವರಪ್ಪ ಅವರು ಹಲವು ಹೋರಾಟಗಳನ್ನು ರೂಪಿಸಿದ್ದ ವ್ಯಕ್ತಿ. ಒಳಚರಂಡಿ ಸಂಸ್ಕರಣೆ ಘಟಕವನ್ನು ಸ್ಥಾಪಿಸಲು ಅಂಬಾರಗೊಪ್ಪ ಸಮೀಪದ ಫಲವತ್ತಾದ ಭೂಮಿಯನ್ನು ಸರ್ಕಾರ ವಶಪಡಿಸಲು ಮುಂದಾದಾಗ ಸತತ ಹೋರಾಟ ಹಮ್ಮಿಕೊಂಡಿದ್ದರು.
ಅಲ್ಲದೇ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿಯನ್ನು ಸ್ಥಾಪಿಸಿ ಈಗಲೂ ಅದರ ಅಧ್ಯಕ್ಷರಾಗಿದ್ದಾರೆ.
ಈ ಹಿಂದೆ 2008ರಲ್ಲಿ ಲೋಕಸಭಾ ಚುನಾವಣೆಗೂ ಅವರು ಸ್ಪರ್ಧಿಸಿದ್ದರು. ಉಳಿದಂತೆ ಈ ಕ್ಷೇತ್ರದಲ್ಲಿ ಈರ್ಯಾನಾಯ್ಕ್, ಕೋಟೇಶ್ವರ, ಗಿರೀಶ್ ಎಸ್., ರಾಜು ನಾಯ್ಕ್, ಸೈಫುಲ್ಲಾ ಜಿ. ಕಣದಲ್ಲಿದ್ದಾರೆ.
ಆದರ್ಶದ ಸ್ಪರ್ಧೆ: ಶಾಂತವೇರಿ ಗೋಪಾಲಗೌಡರ ತೀರ್ಥಹಳ್ಳಿ ನೆಲದಲ್ಲಿ ಮೂವರು ಪಕ್ಷೇತರರು ಅದೃಷ್ಟ ಪರೀಕ್ಷೆಯಲ್ಲಿ ತೊಡಗಿದ್ದಾರೆ. ಗುಡಿಸಲು ನಿವಾಸಿಗಳ ಪರ ಹೋರಾಟ ರೂಪಿಸಿದ್ದ ಜಾದೂಗಾರ್ ನಿಶ್ಚಲ್ ವಿ ಶೆಟ್ಟಿ ಕಣದಲ್ಲಿದ್ದಾರೆ. ತೀರ್ಥಹಳ್ಳಿ ಗಡಿ ಭಾಗದಲ್ಲಿರುವ ಹೆದ್ದೂರು ಎಂಬಲ್ಲಿ ವನಚೇತನ ಎಂಬ ವಿಶಿಷ್ಟ ತಾಣ ರೂಪಿಸಿರುವ ದೇವಿತೋ ನಾಗೇಶ್ ಕಣದಲ್ಲಿದ್ದಾರೆ. ತಮ್ಮ ಒಂದು ಮತವೂ ವ್ಯರ್ಥವಾಗಬಾರದು ಎಂಬುದು ಅವರ ಆಶಯ. ಇನ್ನು ಕಿರಣ್ ಕುಮಾರ್ ಸ್ಪರ್ಧಿಸಿದ್ದಾರೆ.
ಹೋರಾಟದ ಬಿಂಬ: ಗೋಸಂರಕ್ಷಣೆ ಹೋರಾಟ ವೇದಿಕೆ, ವಿದ್ಯಾರ್ಥಿ ಹಿತರಕ್ಷಣಾ ಹೋರಾಟ ಸಮಿತಿ ಮುಖಂಡ ಜೆ.ಎಸ್. ಚಿದಾನಂದಗೌಡ ಅವರ ಇನ್ನೊಂದು ಹೆಸರೇ ಸ್ಟ್ರೈಕ್ ಚಿದಾನಂದ ಗೌಡ. ಸಮಾಜದ ನ್ಯೂನ್ಯತೆ ಬಗ್ಗೆ ಇವರದು ಯಾವಾಗಲೂ ಹೋರಾಟದ ಉತ್ತರ.
ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಎಚ್. ಭೀಮಪ್ಪ, ಬಹುಜನ ಸಮಾಜ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ಬಸಣ್ಯಪ್ಪ ಸ್ಪರ್ಧೆಯಲ್ಲಿದ್ದಾರೆ. ಕೆ. ಗುರುಮೂರ್ತಿ ಕಣದಲ್ಲಿದ್ದಾರೆ.
ಸಾಗರದ ಕಣ: ಸಾಗರ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಮೂವರು ಪಕ್ಷೇತರರಿದ್ದಾರೆ. ಇಂಡಿಯನ್ ಡೆಮಾಕ್ರೆಟಿಕ್ ಪಾರ್ಟಿಯಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಮೇಘರಾಜ್ ಜೆ.ಎನ್. ಪೂಜಾರಿ ಅವರು ಬಿ ಫಾರಂ ಗೊಂದಲದಿಂದ ಕೊನೆ ಕ್ಷಣದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದರು. ಇನ್ನುಳಿದಂತೆ ಎಸ್. ರಾಮಚಂದ್ರ ಹಾಗೂ ಸುರೇಶ್ ಪಿ. ಕಣದಲ್ಲಿದ್ದಾರೆ.
- ಹೊನ್ನಾಳಿ ಚಂದ್ರಶೇಖರ್