ಅಧಿಕಾರಿಗಳ ಏಕಪಕ್ಷೀಯ ವರ್ತನೆ: ಆರೋಪ
ಕ.ಪ್ರ.ವಾರ್ತೆ,ಶಿಕಾರಿಪುರ, ಮೇ 3
ಚುನಾವಣಾ ಕರ್ತವ್ಯ ನಿರತ ಕೆಲ ಅಧಿಕಾರಿಗಳು ಏಕಪಕ್ಷೀಯವಾಗಿ ವರ್ತಿಸುವ ಮೂಲಕ ರಾಜಕೀಯ ಪಕ್ಷದ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತಿದ್ದು, ಈ ಕೂಡಲೇ ಕಳಂಕಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಿ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿಯಲ್ಲಿನ ಚುನಾವಣಾಧಿಕಾರಿ ಕಚೇರಿ ಹಾಗೂ ಪೋಲಿಸ್ ಠಾಣೆ ಮುಂಭಾಗ ಶುಕ್ರವಾರ ಪ್ರತಿಭಟಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಹುಲ್ಮಾರ್ ಮಹೇಶ್, ಪಟ್ಟಣದ ಚನ್ನಕೇಶವ ನಗರದ ಕಾಂಗ್ರೆಸ್ ಕಾರ್ಯಕರ್ತ ಬಸವರಾಜ್ ಸಾವಿರ ರುಪಾಯಿ ಹಣ ಹೊಂದಿದ್ದ ಆರೋಪದ ಮೇರೆಗೆ ಚುನಾವಣಾ ವೀಕ್ಷಕ, ಪುರಸಭಾ ಮುಖ್ಯಾಧಿಕಾರಿ ಮನೋಹರ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದರು.
ಉದ್ದೇಶಪೂರ್ವಕ: ಕಳೆದ ಹಲವು ದಿನದಿಂದ ನಿರಂತರವಾಗಿ ವಿರೋಧ ಪಕ್ಷಗಳು ಲಕ್ಷಾಂತರ ರುಪಾಯಿಯನ್ನು ಅಕ್ರಮವಾಗಿ ಮತದಾರರಿಗೆ ಹಂಚುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ರಾಜಾರೋಷವಾಗಿ ಧಿಕ್ಕರಿಸುತ್ತಿದ್ದಾರೆ ಎಂದರು.
ಕೇವಲ ಕೆಜೆಪಿ ಮುಖಂಡರ ಒತ್ತಡಕ್ಕೆ ಮಣಿದು ಕಾಂಗ್ರೆಸ್ ಕಾರ್ಯಕರ್ತರಿಗೆ ಇಲ್ಲಸಲ್ಲದ ತೊಂದರೆಯನ್ನು ಉದ್ದೇಶಪೂರ್ವಕವಾಗಿ ನೀಡಿ, ಅಧಿಕಾರಿಗಳು ನಿರ್ದಿಷ್ಟ ರಾಜಕೀಯ ಪಕ್ಷದ ಗೆಲವಿಗೆ ಪರೋಕ್ಷವಾಗಿ ಪಣ ತೊಟ್ಟಿದ್ದಾರೆ ಎಂದು ಆರೋಪಿಸಿದರು.
ಏಕಪಕ್ಷೀಯ ನಿರ್ಧಾರ: ಅಧಿಕಾರಿಗಳ ಏಕಪಕ್ಷೀಯ ನಿರ್ಧಾರ ಖಂಡಿಸಿದ ಅವರು ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಹಲವು ಅಕ್ರಮಗಳ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಜಾಣ ಕುರುಡು ಪ್ರದರ್ಶಿಸುವ ಮೂಲಕ ದೂರು ದಾಖಲಿಸದೇ ಕೆಜೆಪಿ ಪರವಾಗಿ ವರ್ತಿಸುತ್ತಿದ್ದಾರೆ ಎಂದ ಅವರು ಈ ಕೂಡಲೇ ಅಧಿಕಾರಿಗಳನ್ನು ವರ್ಗಾಯಿಸಿ ನ್ಯಾಯ ದೊರಕಿಸುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಹಾಕಿದ ಪ್ರತಿಭಟನಕಾರರನ್ನು ಸಿಪಿಐ ಮಾದಪ್ಪ ಹಾಗೂ ಪಿಎಸ್ಸೈ ಮೇಘರಾಜ್ ಮೊದಲಾದವರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು. ಘಟನೆ ಬಗ್ಗೆ ಮುಖ್ಯ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸ್ಥಳೀಯ ಚುನಾವಣಾಧಿಕಾರಿ ಗೋಪಾಲ್ ರವರ ಮೂಲಕ ದೂರು ಸಲ್ಲಿಸಿದರು. ಮಾಲತೇಶ್ ಗೋಣಿ, ಭಂಡಾರಿ ಮಾಲತೇಶ್, ಪರಮೇಶ್ವರಪ್ಪ ಹಳ್ಳೂರು, ಎಸ್.ವಿ.ಕೆ ಮೂರ್ತಿ, ರವೀಂದ್ರ, ಗಂಗೊಳ್ಳಿ ಸತೀಶ್, ಬುಡೇನ್ ಖಾನ್ ಇದ್ದರು.