ಕೆಜೆಪಿಯಿಂದ ಯಡಿಯೂರಪ್ಪ ರೋಡ್ ಶೋ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮೇ.3
ಬಹಿರಂಗ ಪ್ರಚಾರದ ಕೊನೆಯ ದಿನವಾದ ಶುಕ್ರವಾರ ಶಿರಾಳಕೊಪ್ಪ ಪಟ್ಟಣದಲ್ಲಿ ಕೆಜೆಪಿಯಿಂದ ರೋಡ್ ಶೋ ನಡೆಯಿತು. ಶಿರಾಳಕೊಪ್ಪ ಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರೊಂದಿಗೆ ರೋಡ್ ಶೋ ಹಾಗೂ ಸಾರ್ವಜನಿಕ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ನನ್ನ ಅಧಿಕಾರ ಅವಧಿಯಲ್ಲಿ ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಹಲವಾರು ಮಹತ್ತರ ಜನಪರ ಕಾರ್ಯಕ್ರಮ ಕೈಗೊಂಡು ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಯಿತು ಎಂದರು.
ತಾಲೂಕು ಕೇಂದ್ರ: ಕೆಜೆಪಿ ಅಧಿಕಾರಕ್ಕೆ ಬಂದನಂತರ ಶಿಕಾರಿಪುರ ತಾಲೂಕನ್ನು ಜಿಲ್ಲೆ ಆಗಿ ಶಿರಾಳಕೊಪ್ಪ ಪಟ್ಟಣವನ್ನು ತಾಲೂಕು ಕೇಂದ್ರವಾಗಿ ಘೋಷಿಸುತ್ತೇನೆ. ಈಗಾಗಲೇ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಕ್ಕಾಗಿ ಎಲ್ಲ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು. ನಾನು ಮುಖ್ಯಮಂತ್ರಿ ಆದಾಗ ರಾಜ್ಯದಲ್ಲಿ ಮಹಿಳೆಯರಿಗೆ ಹಾಗೂ ಮುಸ್ಲಿಮರಿಗೆ ಹಲವು ಕಾರ್ಯಕ್ರಮ ಕೈಗೊಂಡಿತ್ತು, ಕೆಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ತಲಾ ರು. 2ಸಾವಿರ ಕೋಟಿ ಹಣ ಮೀಸಲಿಟ್ಟು ಹಲವಾರು ಕಾರ್ಯಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಮೆರವಣಿಗೆಯಲ್ಲಿ ಸಂಸದ ರಾಘವೇಂದ್ರ, ಮಾಜಿ ಶಾಸಕ ಮಹಲಿಂಗಪ್ಪ, ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ,ಅಗಡಿ ಅಶೋಕ, ಮಹಿಳಾ ಮೋರ್ಚಾ ಅಧ್ಯಕ್ಷೆ ನಿವೇದಿತಾ ರಾಜು ಸೇರಿದಂತೆ ಹಲವಾರು ಪ್ರಮುಖರು ವಾಹನದಲ್ಲಿದ್ದರು.