ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಾಕಿಸ್ತಾನ ಧ್ವಜ ದಹಿಸಿ ಪ್ರತಿಭಟನೆ

Lingaraj Badiger
Updated On : 4 May 2013, 11:15 am

ಕ.ಪ್ರ.ವಾರ್ತೆ, ಸಾಗರ, ಮೇ 3
ಪಾಕಿಸ್ತಾನದ ಜೈಲಿನಲ್ಲಿ ಭಾರತದ ಸರಬ್ಜಿತ್ ಸಿಂಗ್ ಸಾವನ್ನಪ್ಪಿದ ಘಟನೆಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ಶುಕ್ರವಾರ ಪಾಕಿಸ್ತಾನದ ಧ್ವಜ ದಹಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಸಂಘ ಪರಿವಾರದ ಪ್ರಮುಖ ಅ.ಪು. ನಾರಾಯಣಪ್ಪ ಮಾತನಾಡಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಖೈದಿಯನ್ನು ಪ್ರತ್ಯೇಕ ಸೆಲ್ನಲ್ಲಿ ಇರಿಸಿ, ಯಾರನ್ನೂ ಅವನ ಭೇಟಿ ಅವಕಾಶ ಕೊಡಬಾರದು ಎಂಬ ಅಂತಾರಾಷ್ಟ್ರೀಯ ನಿಯಮವಿದೆ. ಆದರೆ ಪಾಕಿಸ್ತಾನ ಜೈಲಿನಲ್ಲಿ ಬಂಧಿಯಾಗಿ, ಮರಣದಂಡನೆ ಶಿಕ್ಷೆ ಅನುಭವಿಸುತ್ತಿದ್ದ ಸರಬ್ಜಿತ್ ಸಿಂಗ್ ಮೇಲೆ ಖೈದಿಗಳು ಹಲ್ಲೆ ನಡೆಸಿರುವ ಕ್ರಮದ ಹಿಂದೆ ಹಲವಾರು ಅನುಮಾನ ಉಂಟಾಗುತ್ತದೆ. ಭಾರತದಲ್ಲಿ ಭಯೋತ್ಪಾದನೆ ಕೃತ್ಯದಲ್ಲಿ ಮರಣದಂಡನೆಗೆ ಗುರಿಯಾಗಿರುವ ಖೈದಿಗಳನ್ನು ಗೌರವದಿಂದ ನೋಡಿಕೊಳ್ಳಲಾಗುತ್ತಿದೆ. ಆದರೆ ಪಾಕಿಸ್ತಾನ ದುರುದ್ದೇಶಪೂರಿತವಾಗಿ ಇಂತಹ ಕೃತ್ಯ ನಡೆಸಿದೆ ಎಂದು ದೂರಿದರು.
ಖಂಡನೀಯ: ಭಾರತ ಸರ್ಕಾರ ಸರಬ್ಜಿತ್ ಸಿಂಗ್ನನ್ನು ಬಿಡಿಸಿಕೊಂಡು ಬರಲು ಪ್ರಾಮಾಣಿಕ ಪ್ರಯತ್ನ ನಡೆಸಿಲ್ಲ. ಮಾನವಹಕ್ಕು ಆಯೋಗ, ಬುದ್ಧಿಜೀವಿಗಳು, ಪ್ರಗತಿಪರರು, ಸಾಹಿತಿಗಳು ಎನಿಸಿಕೊಂಡವರು ಬೇರೆ ಯಾವುದಾದರೂ ಕೋಮಿನವರ ಮೇಲೆ ಇಂತಹ ಕೃತ್ಯ ನಡೆದಿದ್ದರೆ ಬೀದಿಗಿಳಿಯುತ್ತಿದ್ದರು. ಆದರೆ ಸರಬ್ಜಿತ್ ಸಿಂಗ್ರಂತಹ ಅಮಾಯಕನನ್ನು ಹೊಡೆದು ಕೊಲೆ ಮಾಡಿದ್ದರೂ ಯಾವುದೆ ಧ್ವನಿ ಎತ್ತದೆ ಇರುವುದು ಖಂಡನೀಯ ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಯು.ಎಚ್. ರಾಮಪ್ಪ, ಭಾರತದಲ್ಲಿ ಭಯೋತ್ಪಾದನೆ ನಡೆಸಿ ಜೈಲಿನಲ್ಲಿ ಇರುವವರಿಗೆ ಬಿರಿಯಾನಿ ಊಟ ಕೊಡುತ್ತಾರೆ. ಆದರೆ ಪಾಕಿಸ್ತಾನದಂತಹ ದೇಶದಲ್ಲಿ ನಮ್ಮ ದೇಶದ ಖೈದಿಗಳನ್ನು ಕತ್ತಲಕೋಣೆಯಲ್ಲಿ ಕೂಡಿಹಾಕಿ ಅಮಾನುಷವಾಗಿ ಹಿಂಸೆ ನೀಡುತ್ತಿದ್ದಾರೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಸಮಸ್ತ ಹಿಂದೂ ಬಾಂಧವರು ಇದನ್ನು ಉಗ್ರವಾಗಿ ಖಂಡಿಸಬೇಕು ಎಂದು ಹೇಳಿದರು. ಕೆ.ಎಚ್. ಸುದರ್ಶನ್, ಕೆ.ವಿ. ಪ್ರವೀಣಕುಮಾರ್, ಬಿ.ಎಚ್. ರಾಘವೇಂದ್ರ, ರಾಜು ಮಡಿವಾಳ, ವಿ. ಶಂಕರ್, ಎಲ್.ವಿ. ನಾಗರಾಜ್, ಸುಮನಾ ಗೋಮ್ಸ್, ಕಸ್ತೂರಿ ನಾಗರಾಜ್, ರವೀಶ್, ಬಾಲಕೃಷ್ಣ ಗುಳೇದ್, ಐ.ವಿ. ಹೆಗಡೆ, ಸಂತೋಷ್ ಶೇಟ್, ಡಿ. ರವಿ, ಸತೀಶಬಾಬು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement