ಶಿರಾಳಕೊಪ್ಪದಲ್ಲಿ ಕಾಂಗ್ರೆಸ್ ರೋಡ್ ಶೋ
ಕ.ಪ್ರ.ವಾರ್ತೆ,ಶಿರಾಳಕೊಪ್ಪ, ಮೇ 3
ಶಿರಾಳಕೊಪ್ಪ ಪಟ್ಟಣದಲ್ಲಿ ಕಾಂಗ್ರೆಸ್ ರೋಡ್ ಶೋ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಭೆ ನಡೆಯಿತು.
ಜಿಲ್ಲಾ ಕಿಸಾನ್ ಶೆಲ್ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ಅಭಿವೃದ್ಧಿ ಎಂದರೆ ಕೇವಲ ರಸ್ತೆ ನಿರ್ಮಿಸುವುದಲ್ಲ. ಬಡವರಿಗೆ ನಿವೇಶನ ಹಂಚದ ಯಡಿಯೂರಪ್ಪ ಕಟ್ಟಡ ರಸ್ತೆ ನಿರ್ಮಿಸಿದ್ದಾರೆ. ಕಾಂಗ್ರೇಸ್ ಅಧಿಕಾರದಲ್ಲಿ ಇದ್ದಾಗ ನಿವೇಶನ ಹಂಚಿದ್ದನ್ನು ಬಿಟ್ಟರೆ ಈ ವರೆಗೆ ನಿವೇಶನ ಹಂಚಿಲ್ಲ ಎಂದು ದೂರಿದರು. ಬಡವರ ಕೆಲಸ ಮಾಡಬೇಕೆಂದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಕೆಜೆಪಿ-ಬಿಜೆಪಿ ಯಂತಹ ಪಕ್ಷಗಳು ಅಧಿಕಾರಕ್ಕೆ ಬಂದರೆ ಯಾವುದೇ ಬಡವರಪರ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.
ಕಾಂಗ್ರೇಸ್ ಅಭ್ಯರ್ಥಿ ಶಾಂತವೀರಪ್ಪಗೌಡ ಮಾತನಾಡಿ, ಈಗ ಪ್ರಾರಂಭವಾಗಿರುವದು ಧರ್ಮಯುದ್ದ, ಕೌರವರಂತೆ ಇರುವ ಕೆಜೆಪಿಯನ್ನು ಈ ಧರ್ಮಯುದ್ದದಲ್ಲಿ ಸೋಲಿಸಬೇಕಿದೆ. ಈ ಹಿಂದೆ ಯಡಿಯೂರಪ್ಪ ಶಾಸಕ ಸ್ಥಾನಕ್ಕೆ ರಾಜಿನಾಮೆ ಯಾಕೆ ಕೊಟ್ಟರು. ಈಗ ಪುನಃ ಚುನಾವಣೆಗೆ ಏಕೆ ನಿಂತಿದ್ದಾರೆ ಎಂಬುದನ್ನು ತಿಳಿಸಲಿ ಎಂದರು.