42 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್
ದಾವಣಗೆರೆ: ದಾವಣಗೆರೆ ಜಿಲ್ಲೆಯ ಒಟ್ಟು 42 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಮತದಾನ ಕೇಂದ್ರದ ಚಟುವಟಿಕೆಗಳನ್ನು ಲ್ಯಾಪ್ಟಾಪ್ ಬಳಸಿ ಚಿತ್ರೀಕರಿಸಲಿದ್ದು, ಈ ಮತಗಟ್ಟೆಗಳ ಮತದಾನ ಪ್ರಕ್ರಿಯೆಯನ್ನು ಕೇಂದ್ರ ಚುನಾವಣಾ ಆಯೋಗ ನೇರವಾಗಿ ವೀಕ್ಷಿಸಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ನಿರ್ದೇಶನದಂತೆ ಜಿಲ್ಲೆಯ ಒಟ್ಟು 42 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಮತ ಚಲಾವಣೆ ಪ್ರಕ್ರಿಯೆ ಚಿತ್ರೀಕರಿಸಲಿದ್ದು, ಮತದಾನ ಪ್ರಕ್ರಿಯೆಯನ್ನು ಕೇಂದ್ರ ಚುನಾವಣಾ ಆಯೋಗ ನೇರವಾಗಿ ವೀಕ್ಷಣೆ ಮಾಡಲು ಇದರಿಂದ ಸಾಧ್ಯವಾಗಲಿದೆ ಎಂದರು.
ದಕ್ಷಿಣದಲ್ಲಿ ಮೊದಲಬಾರಿ: ಈಗಾಗಲೇ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಕೇಂದ್ರ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆ ವೀಕ್ಷಿಸಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಜಿಲ್ಲೆಯ ಆಯ್ದ 26 ಅತಿ ಸೂಕ್ಷ್ಮ, ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
200 ವೀಡಿಯೋಗ್ರಾಫರ್ಸ್: ಜಿಲ್ಲೆಯ ಆಯ್ದ 200 ಮತಗಟ್ಟೆಗಳಲ್ಲಿ ವೀಡಿಯೋ ಚಿತ್ರೀಕರಣ ನಡೆಸಲು, ವೀಡಿಯೋಗ್ರಾಫರ್ಸ್ ನೇಮಿಸಲಾಗಿದೆ. ವೀಡಿ ಯೋಗ್ರಾಫರ್ಗಳು ಮತದಾನ ಕೇಂದ್ರದ ಚಟುವಟಿಕೆಗಳ ಚಿತ್ರೀಕರಣ ಮಾತ್ರವಲ್ಲದೇ, ಮತಗಟ್ಟೆ ಬಳಿ ನಡೆಯಬಹುದಾದ ಯಾವುದೇ ಅಹಿತಕರ ಘಟನೆಗಳ ಚಿತ್ರೀಕರಣವನ್ನೂ ಮಾಡಲಿದ್ದಾರೆ. ವಿಧಾನಸಭಾ ಕ್ಷೇತ್ರವಾಗಿ ವೀಡಿಯೋಗ್ರಾಫರ್ಗಳನ್ನು ಈಗಾಗಲೇ ಆಯಾ ಕ್ಷೇತ್ರ, ಮತಗಟ್ಟೆಗಳಿಗೆ ನೇಮಿಸಿದ್ದು, ಆ ಎಲ್ಲರೂ ಆಯಾ ಮತಗಟ್ಟೆಗೆ ತೆರಳಿದ್ದಾರೆ ಎಂದು ತಿಳಿಸಿದರು.
ಏ.24ರಿಂದ ಜಾರಿಗೆ ಬರುವಂತೆ ಜಿಲ್ಲೆಯ 170 ಸೆಕ್ಟರ್ ಅಧಿಕಾರಿಗಳಿಗೆ ವಾಹನ ನೀಡಿದೆ. ಸೆಕ್ಟರ್ ಅಧಿಕಾರಿಗಳು ಕಾರ್ಯ ನಿರ್ವಾಹಕ ದಂಡಾಧಿಕಾರಿಗಳ ಅಧಿಕಾರ ಹೊಂದಿದ್ದು, ಪ್ರತಿ 8ರಿಂದ 10 ಮತಗಟ್ಟೆಗಳ ಉಸ್ತುವಾರಿಯನ್ನು ಒಬ್ಬೊಬ್ಬ ಅಧಿಕಾರಿ ಹೊಂದಿರುತ್ತಾರೆ. ತಮ್ಮ ವ್ಯಾಪ್ತಿಯ ಮತಗಟ್ಟೆ ಸಂಪೂರ್ಣ ಜವಾಬ್ಧಾರಿ ಅಂತಹ ಅಧಿಕಾರಿಯದ್ದಾಗಿರುತ್ತದೆ ಎಂದು ಅವರು ಹೇಳಿದರು.
ಮತಗಟ್ಟೆ ಸಿಬ್ಬಂದಿ ಕ್ಷೇಮವಾಗಿ ಮತಗಟ್ಟೆ ತಲುಪಿದ, ಮತದಾನ ಪ್ರಾರಂಭವಾದ, ಕಾನೂನು ಸುವ್ಯವಸ್ಥೆ, ವಿದ್ಯುನ್ಮಾನ ಮತಯಂತ್ರ ಕಾರ್ಯ ನಿರ್ವಹಣೆ, ಮತ ಯಂತ್ರಗಳನ್ನು ಎಣಿಕಾ ಕೇಂದ್ರದವರೆಗೆ ಸಾಗಾಣಿಕೆ ಹಾಗೂ ಮತ್ತಿತರೆ ಅಧಿಕಾರಿಗಳ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವರು ಎಂದು ಅವರು ಹೇಳಿದರು.
ಒಣ ದಿವಸ ಘೋಷಣೆ: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಕ್ಕೆ ಮೇ 5ರಂದು ಮತದಾನ ಹಾಗೂ ಮೇ.8ರಂದು ಎಣಿಕೆ ಹಿನ್ನೆಲೆಯಲ್ಲಿ ಮೇ.5ರ ರಾತ್ರಿ 12ರವರೆಗೆ ಹಾಗೂ ಮೇ 8ರಂದು ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ, ಮದ್ಯ ಸಂಗ್ರಹಣೆ, ಮದ್ಯ ಸಾಗಾಣಿಕೆಯನ್ನು ನಿಷೇಧಿಸಿ, ಆದೇಶ ಹೊರಡಿಸಿದೆ. ಈ ಆದೇಶ ಉಲ್ಲಂಘನೆ ಮಾಡಿದಲ್ಲಿ, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಟ್ಟಣಶೆಟ್ಟಿ ಎಚ್ಚರಿಸಿದರು.