ಜೆಡಿಎಸ್ ತಾಲೂಕು ಆಧ್ಯಕ್ಷರ ಮೇಲೆ ಹಲ್ಲೆ
ಸಾಗರ: ಜೆಡಿಎಸ್ ತಾಲ್ಲೂಕು ಘಟಕದ ಆಧ್ಯಕ್ಷ ಕೆ.ಅರುಣಪ್ರಸಾದಾ ಹಾಗೂ ಪಕ್ಷದ ಕಾರ್ಯಕರ್ತ ಮಡ್ಡಿ ಸತೀಶ್ ಎಂಬುವವರ ಮೇಲೆ ತಾಲ್ಲೂಕಿನ ಚೆನ್ನಶೆಟ್ಟಿಕೊಪ್ಪ ಗ್ರಾಮದಲ್ಲಿ ಶನಿವಾರ ಸಂಜೆ 6-30ರ ಸುಮಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಚೆನ್ನಶೆಟ್ಟಿಕೊಪ್ಪದ ಬೂತ್ ಚುನಾವಣಾ ಏಜೆಂಟರನ್ನು ನೇಮಿಸಲು ಅರುಣಪ್ರಸಾದ್ ಮತ್ತಿತರರು ತೆರಳಿದ್ದಾಗ ರವಿ ಜಂಬೂರುಮನೆ, ಐಗಿನಬೈಲು ದಿನೇಶ್ ಸೇರಿದಂತೆ ಐದಾರು ಜನರ ಗುಂಪು ಏಕಾಏಕಿ ದಾಳಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಗೆ ದಾಖಲು: ಘಟನೆಯಲ್ಲಿ ಅರುಣಪ್ರಸಾದ್ ಅವರ ತಲೆಗೆ ಹಾಗೂ ಮಡ್ಡಿ ಸತೀಶ್ ಅವರ ಕೈಗೆ ಪೆಟ್ಟಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಗೆ ದೂರು ನೀಡಿರುವ ಅರುಣಪ್ರಸಾದ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದು ತಮಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಹತಾಶೆ: ಕಾಂಗ್ರೆಸ್ ಚುನಾವಣೆಯಲ್ಲಿ ಸೋಲುತದೆ ಎಂಬ ಹತಾಶೆಯಿಂದ ಕಾರ್ಯಕರ್ತರು ತಮ್ಮ ಮೇಲೆ ಈ ರೀತಿ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ಸುದ್ದಿಗಾರರಿಗೆ ಅರುಣಪ್ರಸಾದ್ ತಿಳಿಸಿದರು. ಕಾಗೋಡು ತಿಮ್ಮಪ್ಪನವರು ಹಿಂದಿನಿಂದಲೂ ಕ್ಷೇತ್ರದಲ್ಲಿ ದಬ್ಬಾಳಿಕೆಯ ರಾಜಕಾರಣವನ್ನೇ ಮಾಡಿಕೊಂಡು ಬಂದಿದ್ದು, ಶನಿವಾರ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಹೇಳಿದರು.