ಮತದಾನ ಪ್ರಕ್ರಿಯೆಗೆ ಕ್ಷಣಗಣನೆ
ಕ.ಪ್ರ.ವಾರ್ತೆ, ಸೊರಬ, ಮೇ.4
ಪ್ರಸಕ್ತ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಕ್ಷಣಗಣನೆ ಆರಂಭವಾಗಿದ್ದು, ಸುಮಾರು 1.72 ಲಕ್ಷ ಮತದಾರರಿರುವ ಈ ಕ್ಷೇತ್ರದಲ್ಲಿ 215 ಮತಗಟ್ಟೆಗಳಿವೆ. ಈ ಮತಗಟ್ಟೆಗಳಿಗೆ ಒಟ್ಟು 960 ಸಿಬ್ಬಂದಿ ನಿಯೋಜಿಸಲಾಗಿದೆ.
69 ಅತಿಸೂಕ್ಷ್ಮ, 94 ಸೂಕ್ಷ್ಮ, 52 ಸಾಮಾನ್ಯ ಹಾಗೂ 16 ದುರ್ಬಲ ಮತಗಟ್ಟೆಗಳಿವೆ. ಅಗತ್ಯ ರಕ್ಷಣೆಗಾಗಿ 10 ಹಿರಿಯ ಪೊಲೀಸ್ ಅಧಿಕಾರಿಗಳು, 3 ಸಿಪಿಐ, 6 ಪಿಎಸ್‌ಐ, 11ಎಎಸ್‌ಐ,172 ಹೆಡ್ ಕಾನ್ಸ್ಟೆಬಲ್, 40 ಪಿಸಿ, 50 ಹೋಮ್ ಗಾರ್ಡ್ ಅಲ್ಲದೆ ಹೆಚ್ಚುವರಿಯಾಗಿ 81 ಸಿಆಪಿಎಫ್, 99 ಪ್ಯಾರಾ ಮಿಲಿಟರಿಯವರನ್ನು ತೆಗೆದುಕೊಳ್ಳಲಾಗಿದ್ದು, ಅತಿಸೂಕ್ಷ್ಮ ಮತ್ತು ಸೂಕ್ಷ ಮತಗಟ್ಟೆಗಳತ್ತ ತೀವ್ರ ನಿಗಾ ಇರಿಸಲಾಗಿದೆ.
ಪಟ್ಟಣದ ಜಿಎಂಎಸ್, ತಲಗಡ್ಡೆ, ಕುಬಟೂರು, ಜಡೆ, ಕುಪ್ಪಗಡ್ಡೆ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮೈಕ್ರೋ ಅಬ್ಸರ್ವರ್ ಜೊತೆ ವಿಡೀಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ಮತಗಟ್ಟೆಯಲ್ಲಿ ಮತದಾನದ ಕೊಠಡಿ, ತಂಗುವ, ಶೌಚಕ್ರಿಯೆ, ಊಟದ ವ್ಯವಸ್ಥೆ ಇತ್ಯಾದಿಯನ್ನು ಸಮರ್ಪಕವಾಗಿ ಸಜ್ಜುಗೊಳಿಸಲಾಗಿದ್ದು, ಮತಗಟ್ಟೆಗಳಿಗೆ ತೆರಳಲು 32 ಖಾಸಗಿ ಮತ್ತು ಕೆಎಸ್‌ಆರ್ಟಿಸಿ ಬಸ್, 10 ಜೀಪ್, 22 ಸೆಟ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ. ಶುಕ್ರವಾರ ಸಂಜೆ 5 ರಿಂದ ಮೇ 5ರ ಮಧ್ಯ ರಾತ್ರಿಯವರೆಗೆ ಮದ್ಯ ಮಾರಾಟ ಪೂರೈಕೆಗೆ ನಿಷೇಧ ಹೇರಲಾಗಿದೆ ಎಂದಿದ್ದಾರೆ.