ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮತದಾನ ಮಾಡಿ, ಕಳಂಕ ಕಳಚಬನ್ನಿ

Vishwanath S
Updated On : 5 May 2013, 1:06 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 4
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಸೋಮಾರಿ ಮತದಾರರನ್ನು ಹೊಂದಿದ ಕ್ಷೇತ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿದೆ. ಅದಕ್ಕೆ ಕಾರಣ, ಇತ್ತೀಚಿನ ವರ್ಷಗಳಲ್ಲಿ ಮತದಾನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವುದು.
2008ರ ಚುನಾವಣೆಯಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡುವ ಹಕ್ಕು ಹೊಂದಿದವರ ಸಂಖ್ಯೆ 1,93,754. ಆದರೆ, ಮತದಾನವಾಗಿದ್ದು 1,09,927 ಮಾತ್ರ. ಅಂದರೆ ಶೇ.56.74 ಮತದಾರರು ಮಾತ್ರ ಮತ ಚಲಾಯಿಸಿದರು. ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಹಿಂದಿನ ಅಂಕಿಸಂಖ್ಯೆಯನ್ನು ಗಮನಿಸಿದರೆ ಉತ್ತಮ ಮತದಾನವಾಗಿದ್ದು ಉದಾಹರಣೆ ಕಡಿಮೆಯೇ. ಈ ಬಾರಿಯಾದರೂ ಶೇ.75ರಿಂದ 80ರಷ್ಟು ಮತದಾನದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿಯೇ ಚುನಾವಣಾ ಆಯೋಗ ವಿವಿಧ ರೀತಿಯ ಪ್ರಚಾರದ ಮೂಲಕ ಜಾಗೃತಿ ಮೂಡಿಸುವ ಅಭಿಯಾನ ನಡೆಸಿತು. ಬೀದಿ ನಾಟಕ, ವಾಕಥಾನ್, ಹೋರ್ಡಿಂಗ್, ಸಹಿ ಸಂಗ್ರಹ, ಸ್ಪರ್ಧೆಗಳು, ಎಸ್‌ಎಂಎಸ್, ಯೋಗ, ಪಂಜಿನ ಮೆರವಣಿಗೆ ಹೀಗೆ ಬಗೆಬಗೆಯ ಮಾಧ್ಯಮದ ಮೂಲಕ ಪ್ರಚಾರ ನಡೆಸಿತು. ವಿವಿಧ ಸಂಘಟನೆಗಳೂ ಸಹ ಮತದಾನ ಪ್ರಮಾಣ ಹೆಚ್ಚಾಗಿಸುವ ನಿಟ್ಟಿನಲ್ಲಿ ಪ್ರಚಾರ ನಡೆಸಿವೆ.
ಆಶೀರ್ವಾದ್ ಸಂಸ್ಥೆ: ಆಶೀರ್ವಾದ್ ಸಂಸ್ಥೆ ಪದಾಧಿಕಾರಿಗಳು ನಗರದ ವಿವಿಧ ಬಡಾವಣೆಯಲ್ಲಿ ಮತದಾನ ಕುರಿತು ಸಾರ್ವಜನಿಕರಿಗೆ ಕರಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಿದರು. ಮತದಾನ ಎಲ್ಲರ ಹಕ್ಕು. ಪ್ರತಿಯೊಬ್ಬರು ಉತ್ತಮ ಹಾಗೂ ಸಮಾಜವನ್ನು ಒಳ್ಳೆಯ ದಾರಿಯಲ್ಲಿ ಮುನ್ನಡೆಸಬಲ್ಲ ವ್ಯಕ್ತಿಗಳನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಎಂದು ನಗರದ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಮತದಾನದ ಅರಿವು ಮೂಡಿಸಿದರು.
ಮಾರಿಕೊಳ್ಳಬೇಡಿ: ತಮ್ಮ ಅಮೂಲ್ಯವಾದ ಮತಕ್ಕೆ 500 ರುಪಾಯಿಯಿಂದ ಸಾವಿರ ರುಪಾಯಿವರೆಗೆ ಕೊಡಬಹುದು ಅಷ್ಟೇ. 5 ವರ್ಷಕ್ಕೆ ಈ ಹಣ ಸಾಕೇ, ಒಳ್ಳೆ ಕೆಲಸ ಆಗ ಬೇಡವೇ. ಹಾಗಾದರೆ, ಈ ರೀತಿ ಪಡೆದಂತಹ ಹಣವನ್ನು ಪ್ರತಿ ದಿನ ಲೆಕ್ಕ ಹಾಕಿದರೆ, ಕೇವಲ 50 ಪೈಸೆ ಸಿಗುತ್ತದೆ. ಈ ರೀತಿಯ ದಿನದ 50 ಪೈಸೆಗೆ ಐದು ವರ್ಷ ನಮ್ಮನ್ನು ನಾವು ಮಾರಿಕೊಳ್ಳಬೇಕೆ ಎಂದು ಸಾರ್ವಜನಿಕರನ್ನು ಜಾಗೃತಗೊಳಿಸಿದರು.
ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆಗಾರಿಕೆ ನಮ್ಮ, ನಿಮ್ಮೆಲ್ಲರ ಮೇಲಿದೆ. ಆದರಿಂದ ಕಡ್ಡಾಯವಾಗಿ ನಾವು ನೀವು ಹಾಗೂ ನಮ್ಮ ಸುತ್ತ ಮುತ್ತಲಿನವರೆಲ್ಲರೂ ಸೇರಿ ಮತದಾನ ಮಾಡಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡೋಣ. ಎಲ್ಲರೂ ಮತದಾನವನ್ನು ಕಡ್ಡಾಯವಾಗಿ ಚಲಾಯಿಸೋಣ. ನಮ್ಮ ಹಕ್ಕು ಏನೆಂದು ತೋರಿಸೋಣವೆಂಬ ಕರ ಪತ್ರವನ್ನು ಹಂಚುವ ಮೂಲಕ ಸಂಸ್ಥೆ ಪದಾಧಿಕಾರಿಗಳು ಜಾಗೃತಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಸಿ. ಲಿಂಗೇಶ್, ಖಜಾಂಚಿ ಕೆ.ವಿ. ವಾದಿರಾಜ್, ಕಾರ್ಯದರ್ಶಿ ಟಿ.ಎಸ್. ಟೇಕೋಜಿರಾವ್, ವಾಗೀಶ್, ಲೋಕೇಶ್, ಶಶಿ, ಮತ್ತಿತರರು ಇದ್ದರು.
ಫೋಟೋ ಗ್ರಾಫರ್ಸ್ ಸಂಘಟನೆ ಕರೆ: ಉತ್ತಮ ಶಾಸಕನನ್ನು ಆರಿಸುವ ಅವಕಾಶ ಮತದಾರರನ್ನು ಹುಡುಕಿಕೊಂಡು ಬಂದಿದೆ. ಈ ಅವಕಾಶವನ್ನು ಮಾರಿಕೊಂಡೋ ಅಥವಾ ಉದಾಸೀನ ಮಾಡಿ ಮುಂದೆ ಶಪಿಸುವ ಬದಲು ಮೇ 5ರಂದು ಕಡ್ಡಾಯ ಮತದಾನ ಮಾಡಿ ಉತ್ತಮ ಅಭ್ಯರ್ಥಿ ಆರಿಸಿ ಎಂದು ಜಿಲ್ಲಾ ವೀಡಿಯೋ ಮತ್ತು ಫೋಟೋಗ್ರಾಫರ್ಸ್ ಅಸೋಸಿಯೇಷನ್ ಕರೆ ಕೊಟ್ಟಿದೆ.
ಸುಂದರ ಶಿವಮೊಗ್ಗಕ್ಕಾಗಿ, ಭ್ರಷ್ಟಾಚಾರ ಮುಕ್ತ ನಾಯಕತ್ವವನ್ನು ಆರಿಸಲು ಇದೊಂದು ಸದವಕಾಶ ಎಂದು ಅಭಿಪ್ರಾಯಪಟ್ಟಿರುವ ಸಂಘಟನೆ, ಮೇ 5 ರಂದು ಬೆಳಗ್ಗೆ 7ರಿಂದ ಸಂಜೆ 6ರೊಳಗೆ ಕಡ್ಡಾಯವಾಗಿ ಮತದಾನ ಮಾಡಬೇಕು ಮತ್ತು ಇತರರನ್ನು ಪ್ರೇರೇಪಿಸಬೇಕೆಂಬುದು ಸಂಘಟನೆಯ ಆಗ್ರಹ.
ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆ ಅಧ್ಯಕ್ಷ ಶಿವಮೊಗ್ಗ ನಂದನ್, ಚುನಾವಣೆಗೆಂದು ಸರ್ಕಾರ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತದೆ. ಹೀಗಿರುವಾಗ ಮತದಾನದ ದಿನ ಮನೆಯಲ್ಲಿ ಕುಳಿತುಕೊಳ್ಳುವುದೋ, ಅಥವಾ ಪರ ಊರುಗಳಿಗೆ ತೆರಳುವ ಬದಲಾಗಿ ಮತದಾನದಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿ ಸಂಭ್ರಮಿಸಿ ಎಂದು ಕರೆಕೊಟ್ಟಿದ್ದಾರೆ.
ಜಿಲ್ಲೆಯ ಎಲ್ಲಾ ಛಾಯಾಗ್ರಾಹಕರು ಹಾಗೂ ಮತದಾರರು ತಪ್ಪದೆ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement