ಸಂಗೀತ ಕಲಿಕಾ ತರಬೇತಿ ಶಿಬಿರ
ಶೃಂಗೇರಿ: ತಾಲೂಕಿನ ಮೆಣಸೆ ಪಂಚಾಯಿತಿ ಕೆರೆಮನೆಯಲ್ಲಿ ಶಾರದಾ ಸಂಗೀತ ಸಭಾದ ಆಶ್ರಯದಲ್ಲಿ ಸಂಗೀತ ಕಲಿಕಾ ತರಬೇತಿ ಶಿಬಿರ ನಡೆಯಿತು. ಮಲೆನಾಡು ಹೆಬ್ಬಾರ ಸಮಾಜದ ಅಧ್ಯಕ್ಷ ಎಚ್.ಕೆ. ಭಾಸ್ಕರ್ ರಾವ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಸಂಗೀತ ಮನೋಲ್ಲಾಸ ನೀಡುತ್ತದೆ. ಪ್ರತಿಯೊಬ್ಬರೂ ಸಂಗೀತದ ಬಗ್ಗೆ ಆಸಕ್ತಿ ವಹಿಸಬೇಕು ಎಂದರು. ಆಕಾಶವಾಣಿ ಕಲಾವಿದ ಬಳ್ಳಾರಿ ರಾಘವೇಂದ್ರ ತರಬೇತಿ ನೀಡಿದರು. ಕೆರೆಮನೆ ದಿನೇಶ್,ನೈಬಿ ಪ್ರಭಾಕರ, ಸಾವಿತ್ರಿ, ವೀಣಾ ದಿನೇಶ್ ಮೊದಲಾದವರು ಉಪಸ್ಥಿತರಿದ್ದರು. ಪ್ರಜ್ಞಾ ಸ್ವಾಗತಿಸಿದರು. ವಿದ್ಯುಲ್ಲತಾ ನಿರೂಪಿಸಿ ಚೇತನಾ ವಂದಿಸಿದರು.
2 ಬಂಗಾರದ ಗುಂಡುಗಳು ಪತ್ತೆ
ನರಸಿಂಹರಾಜಪುರ: ಬಿ.ಎಚ್. ಕೈಮರದಲ್ಲಿ ಗುರುವಾರ ಬಿಜೆಪಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಸಭಿಕರು ಕುಳಿತ್ತಿದ್ದ ಜಾಗದಲ್ಲಿ ಎರಡು ಬಂಗಾರದ ಗುಂಡುಗಳು ಸಿಕ್ಕಿವೆ. ಸರಿಯಾದ ಗುರುತು ಹೇಳಿ ಈ ಬಂಗಾರದ ಗುಂಡುಗಳು ಇರುವ ಪ್ಯಾಕೇಟ್ನ ವಾರುಸುದಾರರು ನರಸಿಂಹರಾಜಪುರ ಪೊಲೀಸ್ ಠಾಣೆಯಲ್ಲಿ ಪಡೆಯಬಹುದು ಎಂದು ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಮೂರ್ತಿ ತಿಳಿಸಿದ್ದಾರೆ.
ವರ್ಧಂತಿ ಮಹೋತ್ಸವ
ಶೃಂಗೇರಿ: ಪ್ರತಿಯೊಂದು ದೇವಸ್ಥಾನಗಳು ಸಮಾಜದ ಕೈಗನ್ನಡಿಗಳಾಗಿದ್ದು, ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖಪಾತ್ರ ವಹಿಸುತ್ತವೆ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ತಿಳಿಸಿದರು. ಪಟ್ಟಣದ ಹೆಬ್ಬಾಗಿಲು ಶ್ರೀ ಲಕ್ಷ್ಮೀ ವೆಂಕಟರಮಣ ದೇವಾಲಯದಲ್ಲಿ ನಡೆಯುತ್ತಿರುವ ಪ್ರಥಮ ಪುನಾ ಪ್ರತಿಷ್ಠಾ ವರ್ಧಂತಿ ಮಹೋತ್ಸವದಲ್ಲಿ ಆಶಿರ್ವಚನ ನೀಡಿದರು. ದೇವಾಲಯದ ವಾಸ್ತು, ನಿತ್ಯಪೂಜಾ ಪುನಸ್ಕಾರ ಜನರ ಪಾಲ್ಗೊಳ್ಳುವಿಕೆ ಸಮಾಜದ ಸ್ವಾಸ್ಥ್ಯ ಕಾಪಾಡುತ್ತದೆ ಎಂದರು.
ಸಂತೆ ರದ್ದು
ದಾವಣಗೆರೆ: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮೇ 5ರಂದು ಜಿಲ್ಲಾದ್ಯಂತ ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯಬೇಕಿದ್ದ ಭಾನುವಾರದ ವಾರದ ಸಂತೆಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ, ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಆದೇಶ ಹೊರಡಿಸಿದ್ದಾರೆ.
ಅಕ್ರಮ ಮದ್ಯ ವಶ
ಶಿವಮೊಗ್ಗ/ತೀರ್ಥಹಳ್ಳಿ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ- 2013ರ ನೀತಿ ಸಂಹಿತೆ ಜಾರಿ ಇದ್ದರೂ ತೀರ್ಥಹಳ್ಳಿ ನಗರದ ಆಜಾದ್ ರಸ್ತೆಯಲ್ಲಿನ ಮಳಿಗೆಯಲ್ಲಿ ಅಕ್ರಮ ಮದ್ಯ ದಾಸ್ತಾನಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಶಿವಮೊಗ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಯಿತು. ಅಕ್ರಮವಾಗಿ ಸಂಗ್ರಹಿಸಲಾಗಿದ್ದ ವಿವಿಧ ಬ್ರಾಂಡ್ನ ಮದ್ಯ ಹಾಗೂ ಬೀಯರ್ ದಾಸ್ತಾನು ಕಂಡುಬಂದಿದ್ದು, ಒಟ್ಟು 1109.745 ಲೀಟರ್ ಮದ್ಯ ಹಾಗೂ 843.170 ಲೀಟರ್ ಬಿಯರ್ ಅನ್ನು ವಶಪಡಿಸಲಾಗಿದೆ.. ಇದರ ಅಂದಾಜು ಮೌಲ್ಯ ಸುಮಾರು 4 ಲಕ್ಷವಾಗಿದ್ದು, ಕಟ್ಟಡದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರ ಬಂಧನಕ್ಕೆ ತನಿಖಾಧಿಕಾರಿ ಬಲೆ ಬೀಸಿದ್ದಾರೆಂದು ಅಬಕಾರಿ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯು ಶಿವಮೊಗ್ಗ ಜಿಲ್ಲಾ ಅಬಕಾರಿ ಉಪ ಆಯುಕ್ತ ರಾಜೇಂದ್ರ ಪ್ರಸಾದ್ರವರ ನೇತೃತ್ವದಲ್ಲಿ ನಡೆದು, ಅಬಕಾರಿ ಜಿಲ್ಲಾ ವಿಚಕ್ಷಣಾ ದಳದ ಅಬಕಾರಿ ನಿರೀಕ್ಷಕ ಡಿ.ಎನ್. ಹನುಮಂತಪ್ಪ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಅಬಕಾರಿ ಸಿಬ್ಬಂದಿ ಪ್ರಸನ್ನ, ಮಹದೇವ್, ರವೀಶ್, ಮಲ್ಲಿಕಾರ್ಜುನ, ನಾಗರಾಜಜ್ಮತ್ತು ವೆಂಕಟರಮಣ ಭಾಗವಹಿಸಿದ್ದರು.
ಮತಪಟ್ಟಿಯಲ್ಲಿ ಹೆಸರು ನಾಪತ್ತೆ
ತೀರ್ಥಹಳ್ಳಿ: ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದ್ದು, ತೀರ್ಥಹಳ್ಳಿ ಕ್ಷೇತ್ರದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮತದಾರರು ಈ ಚುನಾವಣೆಯಲ್ಲಿ ಮತ ನೀಡುವ ಪ್ರಕ್ರಿಯೆಯಿಂದ ವಂಚಿತರಾಗಿದ್ದಾರೆ ಎಂದು ತಾಲೂಕು ಬಿಜೆಪಿ ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಿದೆ. ಇತ್ತೀಚೆಗಷ್ಟೇ ನಡೆದ ಪಪಂ ಚುನಾವಣೆಯಲ್ಲಿ ಮತ ಚಲಾಯಿಸಿದ ಕೆಲವು ಮತದಾರರಿಗೆ ಈ ಚುನಾವಣೆಯಲ್ಲಿ ಆ ಭಾಗ್ಯ ಇಲ್ಲದಂತೆ ಆಗಿದೆ ಎಂದು ದೂರಿದ್ದಾರೆ. ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಂದರ್ಭದ ಮತಪಟ್ಟಿಯಲ್ಲಿದ್ದ ಹೆಸರು ನಂತರ ಪರಿಷ್ಕತ ಮತಪಟ್ಟಿಯಲ್ಲಿ ಕಾಣೆಯಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಲೇ ಈ ರೀತಿ ಆಗಿದೆ ಎಂದು ದೂರಿದ್ದಾರೆ.
ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ತೀರ್ಥಹಳ್ಳಿ: ಕ್ಷೇತ್ರದಲ್ಲಿನ ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯೊಂದಿಗೆ ಚುನಾವಣಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ರಾಜಗೋಪಾಲ್ ತಿಳಿಸಿದ್ದಾರೆ. ನಕ್ಸಲ್ ಪೀಡಿತ ಪ್ರದೇಶಗಳ ಮಲ್ಲಂದೂರು, ಹನಸ, ಉಳ್ತಿಗ, ತೆಮ್ಮೆಮನೆ, ಗುಡ್ಡೇಕೇರಿ, ತಲ್ಲೂರು, ಬಿದರಗೋಡು ಸೇರಿದಂತೆ ಅತಿ ಸೂಕ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತು ಏರ್ಪಡಿಸಲಾಗಿದೆ. ಆಗುಂಬೆ ಮತ್ತು ಮಾಸ್ತಿಕಟ್ಟೆಯ ಭಾಗಗಳಲ್ಲಿ 26 ಮತಕೇಂದ್ರಗಳಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದಲ್ಲಿ 400 ಮಂದಿ ಬಿಎಸ್ಎಫ್ ಯೋಧರು ಹಾಗೂ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.