ತಡವಾಗಿ ಮತದಾನ ಆರಂಭ
ಕ.ಪ್ರ.ವಾರ್ತೆ, ಸೊರಬ, ಮೇ 5
ಪ್ರಸಕ್ತ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು.
ಆರಂಭದಲ್ಲಿ ತುಸು ನಿಧಾನಗತಿಯಲ್ಲಿ ಆರಂಭಗೊಂಡ ಮತದಾನ ಪ್ರಕ್ರಿಯೆ ಬೆಳಿಗ್ಗೆ 11ರ ನಂತರ ತುಸು ಚುರುಕುಗೊಂಡಿತು. ಸುಮಾರು 1.72 ಲಕ್ಷ ಮತದಾರರಿರುವ ಕ್ಷೇತ್ರದಲ್ಲಿ 215 ಮತಗಟ್ಟೆಗಳಿಂದ ಮಧ್ಯಾಹ್ನ 3-30ರ ಹೊತ್ತಿಗೆ ಶೇ. 50 ಮತದಾನವಾಗಿತ್ತು.
ಮತಗಟ್ಟೆಗಳಿಗೆ ಒಟ್ಟು 960 ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅತಿಸೂಕ್ಷ್ಮ 69, ಸೂಕ್ಷ್ಮ 94 ರಲ್ಲಿ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ರಕ್ಷಣೆಗಾಗಿ 10 ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಒಟ್ಟು 472 ಸಿಬ್ಬಂದಿ ಇದ್ದರು. ಪಟ್ಟಣದ ಜಿಎಂಎಸ್, ತಲಗಡ್ಡೆ, ಕುಬಟೂರು, ಜಡೆ, ಕುಪ್ಪಗಡ್ಡೆ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಲಾಗಿತ್ತು, ಮೈಕ್ರೋ ಅಬ್ಸರ್ವರ್ ಜತೆ ವೀಡಿಯೋ ಚಿತ್ರೀಕರಣ ವ್ಯವಸ್ಥೆ ಕೂಡ ಮಾಡಲಾಗಿತ್ತು.
ಮತದಾನ ಮಾಡಿದ ಶತಾಯುಷಿ: ಆನವಟ್ಟಿ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದಾಗಿ 25 ನಿಮಿಷ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತು.
ಕಾಂಗ್ರೆಸ್ ಅಭ್ಯರ್ಥಿ ಕುಮಾರ್ ಬಂಗಾರಪ್ಪ, ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ತಮ್ಮ ತಾಯಿ ಶಕುಂತಲಾ ಬಂಗಾರಪ್ಪ ಹಾಗೂ ಪತ್ನಿ ಅನಿತಾರೊಂದಿಗೆ ಕುಬಟೂರಿನಲ್ಲಿ ಮತ ಚಲಾಯಿಸಿದರು.
ನಿಕಟಪೂರ್ವ ಶಾಸಕ ಹೆಚ್. ಹಾಲಪ್ಪ ತಮ್ಮ ಪತ್ನಿಯೊಂದಿಗೆ ಹೊಳೆಕೊಪ್ಪ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಿಜೆಪಿ ಅಭ್ಯರ್ಥಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದು, ತಮ್ಮ ಕುಟುಂಬದವರೊಂದಿಗೆ ತಮ್ಮ ಸ್ವಗ್ರಾಮ ಚಿಕ್ಕಾವಲಿಯಲ್ಲಿ ಮತ ಚಲಾಯಿಸಿದರು.
ಪಕ್ಷೇತರ ಅಭ್ಯರ್ಥಿ ಜೆ.ಎಸ್. ಚಿದಾನಂದಗೌಡ ಜೇಡಗೆರೆಯಲ್ಲಿ, ಕೆ. ಗುರುಮೂರ್ತಿ ಓಟೂರಿನಲ್ಲಿ, ಬಿ. ಚಂದ್ರೇಗೌಡ ಬಸೂರಿನಲ್ಸಿ ಮತ ಚಲಾಯಿಸಿದರು.
ಪಟ್ಟಣ ಸಮೀಪದ ಯಲಸಿ ಗ್ರಾಮದ ಮತಗಟ್ಟೆಯಲ್ಲಿ ಗುಂಡಶೆಟ್ಟಿ ಕೊಪ್ಪ ಗ್ರಾಮದ ಶತಾಯುಷಿ ಕೆರೆಯಮ್ಮ(102) ತಮ್ಮ ಮೊಮ್ಮಗ ಮಾಲತೇಶನೊಂದಿಗೆ ಮತದಾನ ಮಾಡಿದ್ದು ವಿಶೇಷವಾಗಿತ್ತು.