ತೀರ್ಥಹಳ್ಳಿ ಕ್ಷೇತ್ರದಲ್ಲಿ ಉತ್ಸಾಹದ ಮತದಾನ
ಕ.ಪ್ರ.ವಾರ್ತೆ, ತೀರ್ಥಹಳ್ಳಿ, ಮೇ.5 ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆದಿದ್ದು, ಶೇ.80 ರಷ್ಟು ಮತದಾನ ನಡೆದಿದೆ. ಕ್ಷೇತ್ರದ ಅತಿ ಸೂಕ್ಷ್ಮ ಮತದಾನ ಕೇಂದ್ರಗಳಲ್ಲೂ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ತೆರಳಿ ಮತ ನೀಡಿದ್ದು ಕಂಡುಬಂದಿತು.
ತಾಲೂಕಿನಲ್ಲಿ ಒಟ್ಟು 246 ಮತಗಟ್ಟೆಗಳಿದ್ದು, ಅತಿ ಸೂಕ್ಷ್ಮ ಮತಗಟ್ಟೆಗಳು 44, ಸೂಕ್ಷ್ಮ 63 ಮತ್ತು ಸಾಮಾನ್ಯ 139 ಮತಗಟ್ಟೆಗಳಲ್ಲೂ, ಮತದಾನದ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮತದಾನ ಪ್ರಕ್ರಿಯೆ ಶಾಂತಯುತವಾಗಿತ್ತು.
ಹೆಸರು ನಾಪತ್ತೆ: 1000 ಕ್ಕೂ ಹೆಚ್ಚು ಮತದಾರರ ಹೆಸರುಗಳು ಮತಪಟ್ಟಿಯಿಂದ ನಾಪತ್ತೆಯಾಗಿದ್ದು ಇದರಿಂದಾಗಿ ಹಲವರ ಮತದಾನ ಮಾಡದೆ ನಿರಾಶರಾಗಬೇಕಾಯಿತು. ಪಟ್ಟಣ ಪಂಚಾಯ್ತಿ ಸದಸ್ಯ ಸಂದೇಶ ಜವಳಿಯವರ ಹೆಸರು ಮತಪಟ್ಟಿಯಲ್ಲಿಲ್ಲದ ಕಾರಣ ಮತ ನೀಡಲು ಅವಕಾಶವಾಗದೆ ನಿರಾಶರಾದರು.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಸೊಪ್ಪುಗುಡ್ಡೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಿಜೆಪಿಯ ಆರಗ ಜ್ಞಾನೇಂದ್ರ ಗುಡ್ಡೇಕೊಪ್ಪದ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಕೆಜೆಪಿ ಅಭ್ಯರ್ಥಿ ಮಂಜುನಾಥ ಗೌಡ, ಜೆಡಿಎಸ್ ಅಭ್ಯರ್ಥಿ ಮದನ್ ಬೆಟ್ಟಮಕ್ಕಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.
ಕ್ಷೇತ್ರಾದ್ಯಂತ ಉತ್ತಮ ಮತದಾನ ನಡೆದಿದ್ದು, ದಾಖಲೆಯ ಪ್ರಮಾಣದಲ್ಲಿ ಮತದಾನ ನಡೆದಿದೆ. ದೂರದ ಊರುಗಳಲ್ಲಿ ಉದ್ಯೋಗದಲ್ಲಿರುವ ಸಾವಿರಕ್ಕೂ ಹೆಚ್ಚು ಮತದಾರರೂ ತಮ್ಮ ಊರುಗಳಿಗೆ ಮತದಾನ ನೀಡಲೆಂದೇ ಬಂದಿದ್ದು ಉತ್ಸಾಹದಿಂದ ಭಾಗವಹಿಸಿದ್ದಾರೆ.