ಬಂದೋಬಸ್ತ್ ನಡುವೆ ಶಾಂತ ಮತದಾನ
ಶಿರಾಳಕೊಪ್ಪ, ಮೇ 5 : ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚುನಾವಣೆ ಶಾಂತ ರೀತಿಯಿಂದ ನಡೆಯಿತು.
ಚುನಾವಣಾ ಆಯೋಗದ ಬಿಗಿ ನಿರ್ಧಾರದಿಂದ ಈ ಹಿಂದೆ ಒಂದಿಲ್ಲ ಒಂದು ಕಾರಣಕ್ಕೆ ಶಿರಾಳಕೊಪ್ಪ ಪಟ್ಟಣ ಸೇರಿದಂತೆ ಕೆಲಭಾಗದಲ್ಲಿ ಪ್ರತಿ ಚುನಾವಣೆಯಲ್ಲಿ ನಡೆಯುತ್ತಿದ್ದ ಗಲಾಟೆಗಳು ಈ ಬಾರಿ ನಡೆಯದೇ ಶಾಂತರೀತಿಯಿಂದ ಮತದಾನ ನಡೆದಿರುವದು ಈ ಭಾಗದ ಮತದಾರರಿಗೆ ನೆಮ್ಮದಿ ತಂದಿದೆ.
ಹೆಸರು ನಾಪತ್ತೆ: ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಈ ಹಿಂದೆ ನಡೆದಂತೆ ಮತಪಟ್ಟಿಯಲ್ಲಿ ಹೆಸರು ನಾಪತ್ತೆಯ ಪ್ರಕಣಗಳು ಸಾಕಷ್ಟು ಕೇಳಿ ಬಂದಿವೆ. ಮತದಾರಪಟ್ಟಿಯಲ್ಲಿ ಹೆಸರು ಮತ್ತು ಪೋಟೋ ಅದಲು ಬದಲು ಸಾಕಷ್ಟ ಗೊಂದಲಕ್ಕೆ ಕಾರಣವಾಗಿದ್ದರೂ ಮತದಾನಕ್ಕೆ ತೊಂದರೆ ಆಗಲಿಲ್ಲ.
ಶಿರಾಳಕೊಪ್ಪ ಪಟ್ಟಣದಲ್ಲಿ ಕೆಲವು ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆ ಎಂದು ಈ ಹಿಂದೆ ಗುರುತಿಸಲಾಗಿತ್ತು, ಅಂತಹ ಮತಗಟ್ಟೆಗಳಲ್ಲಿ ಬಿಗಿ ಪೋಲೀಸ್ಬ್‌ಂದೋಬಸ್ತ ಜೊತೆಗೆ ಅರೆಸೇನಾಪಡೆ ಹಾಕಲಾಗಿತ್ತು. ಮತದಾರರನ್ನು ಬಿಟ್ಟು ಇತರರನ್ನು ಹತ್ತಿರ ನಿಲ್ಲದಂತೆ ಹಾಗು ಗುಂಪುಸೇರದಂತೆ ಸ್ಥಳೀಯ ಪೋಲೀಸರು ಎಚ್ಚರಿಕೆ ವಹಿಸಿದ ಕಾರಣ ಯಾವದೇ ಅಹಿತಕರ ಘಟನೆಗೆ ಆಸ್ಪದವಿರಲಿಲ್ಲ.
ಅಭ್ಯರ್ಥಿಗಳ ಭೇಟಿ: ಚುನಾವಣೆಗೆ ನಿಂತ ಅಭ್ಯರ್ಥಿಗಳು ಈ ಬಾಗದ ಮತಗಟ್ಟೆಗೆ ಹಾಗು ಸುತ್ತಮುತ್ತಲ ಗ್ರಾಮಗಳಿಗೆ ಭೇಟಿನೀಡಿ ಮತದಾನ ಆಗಿರುವ ಬಗ್ಗೆ ಮಾಹಿತಿಪಡೆದರು. ಕೆಜೆಪಿ ಪಕ್ಷದ ಪರವಾಗಿ ಕೆಲಪ್ರದೇಶಗಳಲ್ಲಿ ಯಡಿಯೂರಪ್ಪ ನವರು ಭೇಟಿ ನೀಡಿದರೆ ಇನ್ನು ಇತರೆ ಗ್ರಾಮಗಳಿಗೆ ಅವರಮಗ ಬಿ.ವೈ. ರಾಘವೇಂದ್ರ ಭೇಟಿ ನೀಡಿ ತಮ್ಮ ಕಾರ್ಯಕರ್ತರಿಂದ ಮಾಹಿತಿ ಪಡೆದರು. ಯಡಿಯೂರಪ್ಪನವರಿಗೆ ಪೈಪೋಟಿ ಕೊಡುತ್ತಿರುವ ಕಾಂಗ್ರೇಸ್ಪ್‌ಕ್ಷದ ಅಭ್ಯರ್ಥಿ ಶಾಂತವೀರಪ್ಪಗೌಡ ಹಾಗು ಜೆಡಿಎಸ್ ಅಭ್ಯರ್ಥಿ ಬಳಿಗಾರ್ ಆಗಮಿಸಿ ತಮ್ಮಕಾರ್ಯಕರ್ತರಿಂದ ಮಾಹಿತಿಪಡೆದರು. ಕ್ಷೇತ್ರದಲ್ಲಿ ಈ ಹಿಂದೆ ಎಂದೂ ಕಂಡರಿಯದ ಪೈಪೋಟಿ ಅಭ್ಯರ್ಥಿಗಳ ಮಧ್ಯೆ ಏರ್ಪಟ್ಟಿದ್ದು, ವಿವಿಧ ಪಕ್ಷಗಳ ಕಾರ್ಯಕರ್ತರು ತಮ್ಮತಮ್ಮ ಲೆಕ್ಕಾಚಾರವನ್ನು ಹಾಕುತ್ತಿರುವುದು ಕಂಡುಬಂದಿತು.