ಮತದಾನ ಬಹುತೇಕ ಶಾಂತಿಯುತ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 5
ಅಲ್ಲಲ್ಲಿ ಹಲ್ಲೆ, ವಾಗ್ವಾದ, ಗೊಂದಲಗಳ ನಡುವೆಯೂ ಜಿಲ್ಲೆಯಾದ್ಯಂತ ಮತದಾನ ಶಾಂತಿಯುತವಾಗಿ ನಡೆದಿದೆ. ಪಟ್ಟಣದ ಪ್ರದೇಶದಲ್ಲಿ ಬಿಸಿಲೇರುವ ಮುನ್ನ ಮತಗಟ್ಟೆಯಲ್ಲಿ ನೂಕುನುಗ್ಗಲು ಇದ್ದು, ಮಧ್ಯಾಹ್ನದ ವೇಳೆ ವಿರಳವಾಗಿತ್ತು. ಸಂಜೆ ಮತ್ತೆ ಬಿರುಸು ಕಾಣಿಸಿಕೊಂಡಿತು.
ಆದರೆ, ಗ್ರಾಮೀಣ ಪ್ರದೇಶದಲ್ಲಿ ಮತದಾರರು ಉತ್ಸಾಹದಿಂದ ಭಾಗವಹಿಸಿದ್ದರು. ಈ ನಡುವೆ ಅಲ್ಲಲ್ಲಿ ಹಣ ಹಂಚಿದ, ಮತಪಟ್ಟಿಯಲ್ಲಿ ಹೆಸರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಗಳೂ ನಡೆದಿವೆ.
ತೀವ್ರ ಹಣಾಹಣಿಯ ಕ್ಷೇತ್ರವಾದ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಹಣ ಹಂಚಿಕೆ ಪ್ರಯತ್ನಗಳು ಬೆಳಕಿಗೆ ಬಂದಿವೆ. ವಿನೋಬ ನಗರದಲ್ಲಿ ಮನೆಯೊಂದರಲ್ಲಿ ಹಣವನ್ನು ಇಟ್ಟುಕೊಂಡಿದ್ದ ಆರೋಪದ ಮೇಲೆ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಕಾರಿನಲ್ಲಿ ಕೆಜೆಪಿ ಪಕ್ಷದ ಕರಪತ್ರಗಳು, ಶಾಲು ದೊರೆತಿವೆ. ಮಂಗಳ, ಗೀತಾ, ವಿದ್ಯಾರಾಣಿ ಹಾಗೂ ಮಂಜುನಾಥ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 65,120 ನಗದು ವಶಪಡಿಸಿಕೊಂಡಿದ್ದಾರೆ. ಹಣ ಹಂಚಿಕೆ ಆರೋಪವನ್ನು ಕೆಜೆಪಿ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್ ಅವರು ನಿರಾಕರಿಸಿದ್ದು, ಅವರು ನಮ್ಮ ಪಕ್ಷದ ಕಾರ್ಯಕರ್ತರೇ ಇರಬಹುದು. ಮನೆಯಲ್ಲಿ ಹಣವನ್ನೇ ಇಟ್ಟುಕೊಳ್ಳಬಾರದೆಂದರೆ ಹೇಗೆ. ನಾವು ಯಾರಿಗೂ ಹಣ ಹಂಚಿಲ್ಲ. ಅದು ಅವರೇ ದುಡಿದ ಹಣ ಎಂದಿದ್ದಾರೆ.
ಹಲ್ಲೆ: ಕಾಗೋಡು ತಿಮ್ಮಪ್ಪ ಅವರು ಕಾಂಗ್ರೆಸ್ನಿಂದ ಮರುಆಯ್ಕೆ ಬಯಸಿರುವ ಸಾಗರದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ವಿ. ಕೃಷ್ಣಮೂರ್ತಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ. ಇಲ್ಲಿನ ಗಾಂಧಿನಗರದ ಮತಗಟ್ಟೆ 61 ಹಾಗೂ 61 ಮತದಾರರ ಗೊಂದಲ ನಿವಾರಿಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯರ್ಕರು ದಿಢೀರ್ ಹಲ್ಲೆ ನಡೆಸಿದ್ದಾರೆ. ಪಟ್ಟಣದ ಹೊರವಲಯದ ಸೂರನಗದ್ದೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದ್ದು, ಪೊಲೀಸರ ಮಧ್ಯಪ್ರವೇಶದಿಂದ ತಣ್ಣಗಾಗಿದೆ.
ಭದ್ರಾವತಿಯಲ್ಲಿ ಕೆಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ ಅವರು ಉಜ್ಜನಿಪುರ ಮತಗಟ್ಟೆಯೊಳಗೆ ಬೆಂಬಲಿಗರೊಂದಿಗೆ ಪ್ರವೇಶಿಸಲು ಯತ್ನಿಸಿದಾಗ ಅವರನ್ನು ಚುನಾವಣಾಧಿಕಾರಿಯವರು ತಡೆದಿದ್ದಾರೆ. ಈ ನಡುವೆ ಜೆಡಿಎಸ್ ಬೆಂಬಲಿಗ ರಮೇಶ್ ಎಂಬುವರೊಂದಿಗೆ ವಾಗ್ವಾದವೂ ನಡೆದಿದೆ. ಅಲ್ಲಿಂದ ಪೊಲೀಸ್ ಠಾಣೆಗೆ ತೆರಳಿದ ಸಂಗಮೇಶ್ ಅವರು ತಮ್ಮ ಮೇಲೆ ಹಲ್ಲೆ ಪ್ರಯತ್ನ ನಡೆದಿದೆ ಎಂದು ದೂರು ನೀಡಿದ್ದಾರೆ. ಇದನ್ನು ಹೊರತುಪಡಿಸಿ ಮತದಾನ ಶಾಂತಿಯುತವಾಗಿ ನಡೆದಿದೆ.
ಕೆಟ್ಟ ಮತಯಂತ್ರ: ಸಹೋದರರ ಸವಾಲ್ ನಡೆದಿರುವ ಸೊರಬ ಕ್ಷೇತ್ರದಲ್ಲಿ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಆದರೆ, ಆನವಟ್ಟಿಯ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿದ್ದ ಮತಗಟ್ಟೆ ಸಂಖ್ಯೆ 42 ಮತಯಂತ್ರ ಕೆಟ್ಟಿದ್ದರಿಂದ 25 ನಿಮಿಷ ಮತದಾನ ಸ್ಥಗಿತಗೊಳಿಸಲಾಗಿತ್ತು. ಕೂಡಲೇ ಚುನಾವಣಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೇರೆ ಮತಯಂತ್ರ ಅಳವಡಿಸಿದರು.
ಶಾಂತಿಯುತ ಮತದಾನ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪರ್ಧಿಸಿರುವ ಶಿಕಾರಿಪುರ ಕ್ಷೇತ್ರಾದ್ಯಂತ ಶಾಂತಿಯುತ ಮತದಾನ ನಡೆದಿದೆ. ಎಲ್ಲಿಯೂ ಅಹಿತಕರ ಘಟನೆಗಳು ನಡೆದಿಲ್ಲ. ಆದರೆ, ಶಿರಾಳಕೊಪ್ಪ ಸುತ್ತಮುತ್ತಲಿನ ಕೆಲವು ಕ್ಷೇತ್ರಗಳಲ್ಲಿ ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿದ್ದಾರೆ.
ತೀರ್ಥಹಳ್ಳಿಯಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ. ನಕ್ಸಲಲ್ಪೀಡಿತ ಪ್ರದೇಶದಲ್ಲಿಯೂ ಸಹ ಮತದಾರರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು ಕಂಡುಬಂತು. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿಯೂ ಸಹ ಶಾಂತಿಯುತ ಮತದಾನ ನಡೆದಿದೆ.