ಮತದಾನ ಮಾಡಿದ ಭಿಕ್ಷುಕರು
-ಮೋಹನ್ ಕುಮಾರ್ ಎನ್.
ಶಿವಮೊಗ್ಗ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಬೇಕು. ಅದಕ್ಕಾಗಿ ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಹಿಂದೆ ಬಿಕ್ಷುಕರು ಎಂದು ನಮ್ಮನ್ನೆಲ್ಲಾ ಕಡೆಗಣಿಸಿದ್ದರು. ಆದರೆ, ಇದೇ ಮೊದಲ ಬಾರಿಗೆ ನಮಗೂ ಮತದಾನಕ್ಕೆ ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ...
ಇದು ತ್ಯಾವರೆಕೊಪ್ಪದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಆಶ್ರಯಿಸಿರುವ ಭಿಕ್ಷಕ ಕುಲಕರ್ಣಿ ಅವರ ಮನದಾಳದ ಮಾತು.
ಸಮಾಜ ಕಲ್ಯಾಣ ಸಮಿತಿಯು ನಡೆಸುತ್ತಿರುವ ಪುನರ್ವಸತಿ ಕೇಂದ್ರದಲ್ಲಿರುವ ಭಿಕ್ಷುಕರಿಗೆ ಮತದಾನದ ಹಕ್ಕು ದೊರಕಿಸಿಕೊಡಲು ಅಪ್ನಾದೇಶ್ ಅಸೋಸಿಯೇಷನ್ ಸಂಸ್ಥೆ ಪ್ರಯತ್ನಿಸಿತ್ತು. ಈಗ ಈ ಕೇಂದ್ರದಲ್ಲಿರುವ 84 ನಿರಾಶ್ರಿತರ ಪೈಕಿ 81 ಭಿಕ್ಷುಕರಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಉಳಿದ ಮೂವರ ಮೂಲ ದಾಖಲೆಗಳು ಹಾಗೂ ಅವರ ಪೋಷಕರ ಮಾಹಿತಿ ಲಭ್ಯವಿಲ್ಲದಿದ್ದರಿಂದ ಅವರನ್ನು ತಿರಸ್ಕರಿಸಿದ್ದಾರೆ.
ಇದೇ ಮೊದಲು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗದ 81 ಭಿಕ್ಷುಕರಿಗೆ ಮತದಾನದ ಹಕ್ಕು ಸಿಕ್ಕಿದ್ದು, ಭಾನುವಾರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ವಿರುಪಿನಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆ ಸಂಖ್ಯೆ-145ರಲ್ಲಿ ಮತದಾನ ಮಾಡುವ ಮೂಲಕ ಸಂಭ್ರಮಿಸಿದರು.
ಕಳೆದ ಆರು ತಿಂಗಳಿನಿಂದ ಕೇಂದ್ರದಲ್ಲಿ ವಾಸಿಸುತ್ತಿರುವ ಭಿಕ್ಷುಕರಿಗೆ ಮತದಾನದ ಹಕ್ಕು ಕೊಡಿಸಬೇಕು ಎಂದು ಪಣ ತೊಟ್ಟಿದ್ದ ಅಪ್ನಾದೇಶ್ ಅಸೋಸಿಯೇಷನ್ ಅಂದಿನಿಂದಲೇ ಪ್ರಯತ್ನಿಸಿತ್ತು. ಈ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಅಧಿಕಾರಿಗಳಿಗೆ ಭಿಕ್ಷುಕರ ಮೂಲ ದಾಖಲೆಗಳನ್ನು ಪರಿಶೀಲಿಸಿ ಮತದಾನ ಮಾಡಲು ವ್ಯವಸ್ಥೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಚುನಾವಣಾ ಆಯೋಗ ಮತಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಆಹ್ವಾನಿಸುತ್ತಿದ್ದಂತೆಯೇ, ಈ ಭಿಕ್ಷುಕರ ಅರ್ಜಿಗಳನ್ನು ಸ್ವೀಕರಿಸಿ, ಭಿಕ್ಷುಕರ ಬಗ್ಗೆ ನೀಡಿದ ಎಲ್ಲಾ ದಾಖಲೆಗಳು ಸರಿಯಾಗಿದ್ದರಿಂದಾಗಿ ಅವರಿಗೆ ಮತದಾನದ ಹಕ್ಕು ನೀಡಲಾಗಿತ್ತು.ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅಪ್ನಾದೇಶ್ ಅಸೋಸಿಯೇಷನ್ ಸಂಚಾಲಕ ಸಿ.ಎಂ. ರಮೇಶ್, ಈಗ ಬಿಕ್ಷುಕರಿಗೆ ಮತದಾನದ ಹಕ್ಕು ಕೊಡಿಸಲಾಗಿದೆ. ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ಕೊಡಿಸುವ ಗುರಿ ಹೊಂದಲಾಗಿದೆ. ಜೊತೆಗೆ ಅವರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ ಸ್ವತಂತ್ರ ಜೀವನ ನಡೆಸಲು ಅವಕಾಶ ಕಲ್ಪಿಸಲಾಗುವುದು ಎಂದರು.
ಇವರೇನಂತಾರೇ
ನಮನ್ನು ಬೀಕ್ಷುಕರೆಂದು ಎಲ್ಲರೂ ತಿರಸ್ಕರಿಸಿದ್ದರೂ, ಇದೇ ಮೊದಲ ಬಾರಿಗೆ ಬಿಕ್ಷುಕರಿಗೆ ಮತ ಚಲಾಯಿಸಲು ಅವಕಾಶ ನೀಡಿರುವುದು ಸಂತಸ ತಂದಿದೆ. ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ನಮ್ಮ ಹಕ್ಕು ನಮಗೆ ಚಲಾಯಿಸುಲು, ಮೂಲಭೂತ ಸೌಕರ್ಯ ಒದಗಿಸಲು ಅವಕಾಶ ನೀಡಿತ್ತಿರುವು ಸಂತಸ ತಂದಿದೆ.
ಆನಂದ
ನಿರಾಶ್ರಿತರ ಪರಿಹಾರ ಕೇಂದ್ರದ ಸದಸ್ಯ.