ಶಿಕಾರಿಪುರ: ಪಟ್ಟಿಯಲ್ಲಿ ಹೆಸರೇ ನಾಪತ್ತೆ
ಕ.ಪ್ರ.ವಾರ್ತೆ, ಶಿಕಾರಿಪುರ, ಮೇ 5
ಮಾಜಿ ಮುಖ್ಯಮಂತ್ರಿ, ಪ್ರಭಾವಿ ನಾಯಕ ಯಡಿಯೂರಪ್ಪನವರ ಸ್ಪರ್ಧೆಯಿಂದಾಗಿ ರಾಜ್ಯದ ಗಮನ ಸೆಳೆದಿದ್ದ ಶಿಕಾರಿಪುರದಲ್ಲಿ ಭಾನುವಾರ ನಡೆದ ಮತದಾನ ಬಹುತೇಕ ಶಾಂತಿಯುತವಾಗಿದ್ದು, ಕೆಲವೆಡೆ ಮತದಾರರ ಪಟ್ಟಿಯಲ್ಲಿನ ಹೆಸರು ನಾಪತ್ತೆ, ಗುರುತು ಪಟ್ಟಿಯನ್ನು ಗೊಂದಲದ ಮಧ್ಯೆ ನಡೆಯಿತು.
ಪಟ್ಟಣದ ರಥಬೀದಿಯ 115 ನೇ ಮತಗಟ್ಟೆಯಲ್ಲಿ ಅಧಿಕಾರಿಗಳ ಅಚಾತುರ್ಯದಿಂದಾಗಿ ಬೆಳಿಗ್ಗೆ 15 ನಿಮಿಷ ತಡವಾಗಿ ಮತದಾನ ಆರಂಭವಾಗಿದ್ದು, ಚುನಾವಣಾ ಆಯೋಗದ ನೀಡುವ ಮತದಾರರ ಪಟ್ಟಿ ಇಲ್ಲದ ಮತದಾರರಿಗೆ ಮತದಾನಕ್ಕೆ ಅವಕಾಶ ಇಲ್ಲವೆಂದು ಬೇಜವಾಬ್ದಾರಿಯ ಹೇಳಿಕೆ ಮತದಾರರನ್ನು ಕೆರಳಿಸಿ ಮಾತಿನ ಚಕಮಕಿ, ವಾಗ್ವಾದದ ನಂತರದಲ್ಲಿ ಅವಕಾಶ ಕಲ್ಪಿಸಲಾಯಿತು.
ಬೆಳಿಗ್ಗೆ ಚುರುಕಿನಿಂದ ನಡೆದ ಮತದಾನ ಮದ್ಯಾಹ್ನದ ವೇಳೆಯಲ್ಲಿ ಬಿಸಿಲಿನ ಬೇಗೆಗೆ ಕಡಿಮೆಯಾಗಿ ಸಂಜೆ ವೇಳೆಗೆ ಪುನಃ ಮತದಾರರು ಹೆಚ್ಚಿನ ಅಸಕ್ತಿಯನ್ನು ವಹಿಸಿದ್ದರು.
ಮಧ್ಯಾಹ್ನದ ವೇಳೆಗೆ ಶೇ.60 ಕ್ಕಿಂತ ಅಧಿಕ ಮತದಾನವಾಗಿದ್ದು ಎಲ್ಲೆಡೆ ಪೊಲೀಸ್ ಹಾಗೂ ಅರೆ ಸೇನಾ ಪಡೆಯ ಬಂದೋಬಸ್ತ್ನಿಂದಾಗಿ ಶಾಂತಿಯುತವಾಗಿತ್ತು.
ಮುಖಾಮುಖಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪಗೌಡ ಬೆಳಿಗ್ಗೆ 7.15 ಕ್ಕೆ ಪಟ್ಟಣದ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಮತದಾನಗೈಯಲು ಮುಖಾಮುಖಿಯಾಗಿದ್ದು ವಿಶೇಷವಾಗಿತ್ತು. ಪಟ್ಟಣ ಹಾಗೂ ತಾಲೂಕಿನ ಹೆಚ್ಚಿನ ಮತದಾನ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿಯ ಪೋಲಿಂಗ್ ಏಜೆಂಟ್ ಕೊರತೆ ಪಕ್ಷದ ದೈನೇಸಿ ಸ್ಥಿತಿಯ ಪರಮಾವಧಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸಂಗಮೇಶ್, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಕ್ಷದ ಪ್ರಾಮಾಣಿಕ, ಮೂಲ ಕಾರ್ಯಕರ್ತರಲ್ಲಿ ವಿಶ್ವಾಸವಿರಿಸದ ಕಾರಣ ಅಧೋಗತಿಯನ್ನು ಅನುಭವಿಸುವಂತಾಗಿದೆ ಎಂದರು.
ಇತ್ತೀಚೆಗೆ ನಡೆದ ಪಕ್ಷದ ಚುನಾವಣಾ ಪೂರ್ವ ಮುಖಂಡರ ಸಭೆಯಲ್ಲಿ ಅಭ್ಯರ್ಥಿ ಕೊಪ್ಪಲು ಮಂಜುನಾಥ್ರವರಿಗೆ ಸಮಸ್ಯೆ ಬಗ್ಗೆ ಗಮನ ಸೆಳೆದಾಗ, ಆರ್ಥಿಕ ಸಮಸ್ಯೆಯಿದ್ದು ಪಕ್ಷದ ಬಗ್ಗೆ ಅಭಿಮಾನವಿದ್ದಲ್ಲಿ ಪರವಾಗಿ ಕಾರ್ಯನಿರ್ವಹಿಸಿ ಇಲ್ಲದಿದ್ದಲ್ಲಿ ಚುನಾವಣೆಯನ್ನು ನಿರ್ವಹಿಸುವ ಬಗೆ ಅರಿತಿದ್ದು ನಿಭಾಯಿಸುವುದಾಗಿ ತಿಳಿಸಿದ್ದು, ಈ ರೀತಿಯ ದರ್ಪದ ವರ್ತನೆ ಪಕ್ಷಕ್ಕೆ ಹಾನಿಯುಂಟಾಗಲಿದೆ ಎಂದರು.
ವ್ಯಾಪಕ ವಿರೋಧ: ತಾಲೂಕಿನ ಅಂಜನಾಪುರ ಹೋಬಳಿಯ ಹಲವು ಗ್ರಾಮದಲ್ಲಿ ಜಲಾಶಯದ ನೀರನ್ನು ಶಿಕಾರಿಪುರ ಹಾಗೂ ಶಿರಾಳಕೊಪ್ಪ ಜನತೆಯ ಕುಡಿಯುವ ಬಳಕೆಯ ಉದ್ದೇಶಕ್ಕೆ ನೀಡಿ ಬೇಸಿಗೆ ಬೆಳೆಗೆ ನೀಡದಿರುವ ಕ್ರಮದ ಬಗ್ಗೆ ತೀವ್ರ ರೀತಿಯ ವಿರೋಧ ವ್ಯಕ್ತವಾಗಿದ್ದು ಈ ಸಂಗತಿ ಈ ಬಾರಿಯ ಚುನಾವಣೆಯಲ್ಲಿ ಕೆಜೆಪಿಗೆ ಹೆಚ್ಚಿನ ಹಾನಿಯುಂಟು ಮಾಡುವ ಲಕ್ಷಣ ಗೋಚರವಾಗಿದೆ.
ಅಂಜನಾಪುರ ಜಲಾಶಯ ಸಾವಿರಾರು ಎಕರೆ ಜಮೀನಿಗೆ ನೀರುಣಿಸುವ ರೈತರ ಬಹು ದೊಡ್ಡ ನೀರಿನ ಮೂಲವಾಗಿದ್ದು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಯಡಿಯೂರಪ್ಪನವರು ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ಉದ್ದೇಶಕ್ಕಾಗಿ ಪ್ರತ್ಯೇಕ ಪೈಪ್ಲೈನ್ ಅಳವಡಿಸಿ ಅಚ್ಚುಕಟ್ಟುದಾರ ರೈತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಚುನಾವಣೆಯಲ್ಲಿ ಈ ಬಾಗದ ರೈತ ವರ್ಗ ಕೆಜೆಪಿಯನ್ನು ವಿರೋಧಿಸಿರುವುದು ಸ್ಪಷ್ಟವಾಗಿದೆ.
ರೈತರಿಗೆ ಅನ್ಯಾಯ: ಈ ಬಗ್ಗೆ ಕಲ್ಮನೆ ಗ್ರಾಮದ ಹಿರಿಯ ಬಾಷಾಸಾಬ್ ಮಾತನಾಡಿ, ಅನಾದಿ ಕಾಲದಿಂದ ಬೇಸಿಗೆ ಬೆಳೆಗೆ ನೀರು ಒದಗಿಸುತ್ತಿದ್ದ ಅಂಜನಾಪುರ ಜಲಾಶಯದಿಂದ ಕುಡಿಯುವ ಉದ್ದೇಶಕ್ಕಾಗಿ ಮೀಸಲಿರಿಸಿ ರೈತರಿಗೆ ಹೆಚ್ಚಿನ ಅನ್ಯಾಯವಾಗಿದೆ ಎಂದ ಅವರು, ತಿಂಗಳಲ್ಲಿ ಕನಿಷ್ಟ 2 ಬಾರಿ ನೀರು ಒದಗಿಸಿದಲ್ಲಿ ಬೇಸಿಗೆಯ ಹೆಸರು, ಅಲಸಂದೆ ಮತ್ತಿತರ ಕಾಳು ಬೆಳೆಯುತ್ತಿದ್ದು ಇದೀಗ ರೈತರಿಗೆ ಕೋಟ್ಯಂತರ ರೂ.ನಷ್ಟವಾಗಿದೆ ಎಂದರು.
ಈ ಬಾಗದ ಹೆಚ್ಚಿನ ರೈತರ ಪ್ರತಿಕ್ರಿಯೆ ಸಮವಾಗಿದ್ದು ಯಡಿಯೂರಪ್ಪನವರನ್ನು ವಿರೋದಿಸಿ ಕಾಂಗ್ರೆಸ್ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದು ಗೋಚರಿಸುತ್ತಿತ್ತು.
ಹಿತ್ತಲ ಗ್ರಾಮದಲ್ಲಿ ಗ್ರಾ.ಪಂ ಸದಸ್ಯ ತಾರಕೇಶ್ ಅಭಿವೃದ್ಧಿಯ ಕಾರಣದಿಂದ ಕೆಜೆಪಿಯನ್ನು ಜನತೆ ಬೆಂಬಲಿಸುತ್ತಿದ್ದು ಕುಡಿಯುವ ಉದ್ದೇಶಕ್ಕಾಗಿ ನೀಡಿದ ನೀರು ಈ ಬಾಗದ ರೈತರ ಬಹು ದೊಡ್ಡ ಗುಣವಾಗಿದೆ ಎಂದು ಸಮರ್ಥಿಸಿಕೊಂಡರು.
ತಾಲೂಕಿನ ಮಟ್ಟಿಕೋಟೆ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್. ಬಳಿಗಾರ್ ಹಾಗೂ ಪಟ್ಟಣದ 129 ನೇ ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಮತ ಚಲಾಯಿಸಿದರು.