10ರಂದು ಭವಿಷ್ಯ ನಿಧಿ ಅದಾಲತ್
ಶಿವಮೊಗ್ಗ: ಶಿವಮೊಗ್ಗ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಮೇ 10 ರಂದು ಸಾಗರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಭವಿಷ್ಯ ನಿಧಿ ಅದಾಲತ್ ನಡೆಸಲಿದೆ. ಸಾಗರ ತಾಲೂಕು ಮತ್ತು ಸುತ್ತಮುತ್ತಲಿನ ಭವಿಷ್ಯ ನಿಧಿ ಸದಸ್ಯರು ಹಾಗೂ ಭವಿಷ್ಯ ನಿಧಿ ಇಲಾಖೆಯಿಂದ ಪಿಂಚಣಿ ಪಡೆಯುವ ಪಿಂಚಣಿದಾರರು ತಮ್ಮ ದೂರುಗಳಿದ್ದಲ್ಲಿ ಮೇ 8ರೊಳಗೆ ದುರ್ಗಿಗುಡಿಯ ಭವಿಷ್ಯ ನಿಧಿ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗೆ ಸಲ್ಲಿಸಬಹುದು. ಅಲ್ಲದೇ ಈ ಕಚೇರಿ ವ್ಯಾಪ್ತಿಗೆ ಬರುವ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಸದಸ್ಯರೂ ಕೂಡ ನಿಗದಿತ ದಿನಾಂಕದಂದು ಅರ್ಜಿ ಸಲ್ಲಿಸಬಹುದು ಎಂದು ಸಹಾಯಕ ಭವಿಷ್ಯ ನಿಧಿ ಆಯುಕ್ತ ಡಿ. ಹನುಮಂತಪ್ಪ ಅವರು ತಿಳಿಸಿದ್ದಾರೆ.
ಅಭಿನಂದನೆ
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಸಮಿತಿ ಮೇ 5ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ನಗರ ಕ್ಷೇತ್ರದ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರನ್ನು ಬೆಂಬಲಿಸಿದ ಎಲ್ಲಾ ಮತದಾರಿಗೆ ಅಭಿನಂದನೆ ಸಲ್ಲಿಸಿದೆ. ಶಾಂತಿಯುತ ಚುನಾವಣೆ ನಡೆಸಿಕೊಟ್ಟ ಜಿಲ್ಲಾಡಳಿತ, ಚುನಾವಣಾ ಆಯೋಗಕ್ಕೂ ಕೃತಘ್ನತೆ ತಿಳಿಸಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್.ಟಿ. ಹಾಲಪ್ಪ ತಿಳಿಸಿದ್ದಾರೆ.