ಆಯೋಗ ಅಬ್ಬರಿಸಿದ್ದಕ್ಕೂ ಸಾರ್ಥಕವಾಯ್ತು
-ಶ್ರೀಕಾಂತ ಭಟ್
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 6
2013ರ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷದಷ್ಟೇ ಅಬ್ಬರಿಸಿದ್ದು ಚುನಾವಣಾ ಆಯೋಗ.
ಬಂಟಿಂಗ್ ಬ್ಯಾನರ್ ಇಲ್ಲದ ರಾಜಕೀಯ ಪ್ರಚಾರಕ್ಕಿಂತ ಆಯೋಗದ ಮತದಾನ ಜಾಗೃತಿಯೇ ಒಂದು ಕೈ ಮೇಲೆ ಎಂಬಂತೆ ಕಂಡುಬಂತು. ಅಂತಿಮವಾಗಿ ಆಯೋಗ ಕೂಡ ಚುನಾವಣಾ ಪರೀಕ್ಷೆಯಲ್ಲಿ ಗಣನೀಯ ಪ್ರಮಾಣದಲ್ಲಿ ಯಶಕಂಡಿತು.
ಹೇಗಂತಿರಾ, ಮತದಾನ ಪ್ರಮಾಣ ನಿರೀಕ್ಷೆಯಷ್ಟು ಮುಟ್ಟದಿದ್ದರೂ ನಿರಾಸೆಯನ್ನಂತೂ ಮೂಡಿಸಲಿಲ್ಲ. ಈ ನಿರಾಸೆ ಮೂಡಿಸದಷ್ಟು ಫಲಿತಾಂಶ ಏರಲು ಕಾರಣವಾಗಿದ್ದರಲ್ಲಿ ಚುನಾವಣಾ ಆಯೋಗದ ಸ್ವೀಪ್ ಕಾರ್ಯಕ್ರಮವೂ ಒಂದು. ರಾಜಕೀಯ ವಿಪ್ಲವ್, ಪೈಪೋಟಿಯೊಂದಿಗೆ, ಕಡಿಮೆ ಲೋಪವುಳ್ಳ ಮತದಾರರ ಪಟ್ಟಿ ಮತದಾನ ಏರಲು ಪ್ರಮುಖ ಕಾರಣಗಳು.
ಶಿವಮೊಗ್ಗದಲ್ಲಿ ಏನಾಯ್ತು: ಮತದಾನದ ಹಕ್ಕು ಪಡೆದುಕೊಂಡವರು ಮತಗಟ್ಟೆಯಿಂದ ದೂರ ಉಳಿಯುತ್ತಾರೆ ಎಂಬುದು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಚರ್ಚಾ ವಿಷಯ. ಈ ಹಿಂದಿನ ಚುನಾವಣೆಗಳ ಅಂಕಿಸಂಖ್ಯೆ ಗಮನಿಸಿದರೆ ಗ್ರಾಮೀಣ ಭಾಗದಲ್ಲಿ ಮತದಾನ ಮತದಾನ ಉತ್ತಮ ರೀತಿಯಲ್ಲಿ ನಡೆದುಕೊಂಡು ಬರುತ್ತಿದೆ. ಶೇ.90ಕ್ಕಿಂತ ಹೆಚ್ಚು ಮತದಾನ ಆಗದೇ ಇದ್ದರೂ ಶೇ.75ರಿಂದ 85ರವರೆಗೆ ಮತದಾನವಾಗುತ್ತಿದೆ. ಆದರೆ, ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಯೋಗದ ಚಿಂತೆಗೀಡು ಮಾಡಿರುವುದು ನಗರ ಪ್ರದೇಶದ ಮತದಾನ ಪ್ರಮಾಣ. ವರ್ಷದಿಂದ ವರ್ಷಕ್ಕೆ ನಗರ ಪ್ರದೇಶದ ಮತದಾನ ಪ್ರಮಾಣ ಇಳಿಕೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಆಯೋಗವು 2013ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿತ್ತು.
ಲೋಪಗಳು ಕಡಿಮೆ: ಶಿವಮೊಗ್ಗ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ವಿವರಿಸುವಂತೆ, ಮತದಾರರ ಪಟ್ಟಿಯಲ್ಲಿನ ಲೋಪಗಳು ಕಡಿಮೆ ಸಂಖ್ಯೆಯಲ್ಲಿದ್ದಿದ್ದು, ಸ್ವೀಪ್ ಕಾರ್ಯಕ್ರಮ ಮತದಾನ ಹೆಚ್ಚಾಗಲು ಕಾರಣವಾಯಿತು. ರಾಜಕೀಯ ಪೈಪೋಟಿಯೂ ಕಾರಣವಾಗಿರಬಹುದು. ಆದರೆ, ಈ ಮತದಾನ ಹೆಚ್ಚಳವಾದ ಬೆಳವಣಿಗೆ ಖುಷಿತಂದಿದೆ ಎಂದು ಹೇಳಿದರು.
ಶಿವಮೊಗ್ಗ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಹೀಮಂತ ರಾಜು ಹೇಳುವಂತೆ, ಚುನಾವಣೆಗೆ ಒಂದೂವರೆ ತಿಂಗಳ ಮುಂಚಿನಿಂದಲೂ ಮತದಾನ ಜಾಗೃತಿಗೆ ವಿಶೇಷ ಕಾರ್ಯಕ್ರಮ ರೂಪಿಸಲಾಗಿತ್ತು.
ಹೋರ್ಡಿಂಗ್ ಪ್ರಚಾರ, ಇಲಾಖೆ ಪ್ರಚಾರ ವಾಹನ ಬಳಕೆ, ಸಹಿ ಸಂಗ್ರಹ ಅಭಿಯಾನ, ಜಾಥಾಗಳು, ಪಂಜಿನ ಮೆರವಣಿಗೆ, ಪ್ರತಿಜ್ಞಾ ವಿಧಿ, ಕರಪತ್ರ ಹಂಚಿಕೆ ಸೇರಿದಂತೆ ನ್ಯಾಯಬೆಲೆ ಅಂಗಡಿ ಹಾಗೂ ನಾಗರಿಕ ಸೇವಾ ಕೇಂದ್ರಗಳ ಮೂಲಕ ಮತದಾನ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಮದುವೆ ಸಮಾರಂಭದಲ್ಲೂ ಮತದಾನ ಮಾಡಿ ಎಂಬ ಜಾಗೃತಿ ಕಾರ್ಯಕ್ರಮ ಗಮನ ಸೆಳೆಯಿತು ಎಂದು ಹೇಳಿದರು.
ಪ್ರೇರೇಪಣೆ: 2008ರ ಚುನಾವಣೆಯಲ್ಲಿ ಕಡಿಮೆ ಮತದಾನವಾದ ಶಿವಮೊಗ್ಗ ಹಾಗೂ ಭದ್ರಾವತಿಯ ಅಂದಾಜು 50ಕ್ಕೂ ಹೆಚ್ಚಿನ ಬೂತ್ ವ್ಯಾಪ್ತಿಯಲ್ಲಿ ಚುನಾವಣೆಗೆ 2-3 ದಿನ ಇರುವಾಗ ಸರ್ವೆಯೊಂದನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮತ ಮಾಡುವಂತೆಯೂ ಪ್ರೇರೇಪಿಸಲಾಯಿತು. ಎನ್‌ಜಿಓ ಈ ಕಾರ್ಯಕ್ರಮದ ಜವಾಬ್ದಾರಿ ಹೊತ್ತುಕೊಂಡಿತ್ತು.
- ಎಲ್ಲಿ ಎಷ್ಟುಕಳೆದ ಬಾರಿಗೆ ಹೋಲಿಸಿದರೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಶೇ.6ರಷ್ಟು ಮತ ಚಲಾವಣೆ ಹೆಚ್ಚಾಗಿದ್ದರೆ, ಭದ್ರಾವತಿಯಲ್ಲಿ ಶೇ.7ರಷ್ಟು ಅಧಿಕವಾಗಿದೆ. ಶಿವಮೊಗ್ಗದಲ್ಲಿ ಶೇ.9 (ಪೋಸ್ಟಲ್ ಬ್ಯಾಲೆಟ್ ಸೇರಿ), ತೀರ್ಥಹಳ್ಳಿಯಲ್ಲಿ ಶೇ.3ರಷ್ಟು, ಶಿಕಾರಿಪುರದಲ್ಲಿ ಶೇ.2, ಸೊರಬದಲ್ಲಿ ಶೇ.5, ಸಾಗರದಲ್ಲಿ ಶೇ.5ಕ್ಕಿಂತ ಹೆಚ್ಚು ಮತದಾನವಾಗಿದೆ. ಒಟ್ಟಾರೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಶೇ.5ಕ್ಕಿಂತ ಹೆಚ್ಚು ಮತದಾನ ಅಧಿಕವಾಗಿದೆ.