ಭೀಮನೇರಿಯಲ್ಲಿ ಶೇ.97 ಮತದಾನ
ಕ.ಪ್ರ.ವಾರ್ತೆ, ಸಾಗರ, ಮೇ.6 ತಾಲೂಕಿನ ಭೀಮನೇರಿಯ ಮತಗಟ್ಟೆ ಸಂಖ್ಯೆ 35ರಲ್ಲಿ ಅತಿಹೆಚ್ಚು ಅಂದರೆ ಶೇ.97 ಮತದಾನವಾಗಿದೆ. ಇಲ್ಲಿ ಒಟ್ಟು 280 ಮತದಾರರಿದ್ದು, ಈ ಪೈಕಿ 272 ಜನರು ಮತ ಚಲಾಯಿಸಿದ್ದಾರೆ. ಸಾಗರ ಪಟ್ಟಣದ ಎ.ಕೆ.ಕಾಲೋನಿ ಮತಗಟ್ಟೆ ಸಂಖ್ಯೆ 71ರಲ್ಲಿ ಅತಿ ಕಡಿಮೆ ಅಂದರೆ ಶೇ.39ರಷ್ಟು ಮತದಾನವಾಗಿದೆ. ಇಲ್ಲಿ 534 ಮತದಾರರ ಪೈಕಿ ಕೇವಲ 211ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ತಾಲೂಕಿನ ಹಿನ್ನೀರಿನ ಪ್ರದೇಶವಾದ ಸುಂಕದಮನೆಯಲ್ಲಿ ಮತಗಟ್ಟೆ ತೆರೆದಿತ್ತು. ಇಷ್ಟು ವರ್ಷಗಳ ಕಾಲ ಈ ಗ್ರಾಮಕ್ಕೆ ಚುನಾವಣಾ ಸಿಬ್ಬಂದಿ, ಪರಿಕರಗಳನ್ನು ಕೊಂಡೊಯ್ಯುವುದು ಕಷ್ಟ ಎನ್ನುವ ನೆಲೆಯಲ್ಲಿ ಇಲ್ಲಿ ಮತದಾನ ಕೇಂದ್ರ ಸ್ಥಾಪಿಸಿರಲಿಲ್ಲ. ಈ ಬಾರಿ ಮತದಾನ ಕೇಂದ್ರ ಸ್ಥಾಪಿಸಿ ಚುನಾವಣಾ ಸಿಬ್ಬಂದಿಗೆ ವಿಶೇಷ ಲಾಂಚ್ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿ ಶೇ.80 ಮತದಾನವಾಗಿದೆ. ಒಟ್ಟು 184 ಮತದಾರರ ಪೈಕಿ 149 ಮತದಾರರು ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 1,79,685ಮತದಾರರಿದ್ದು ಈ ಬಾರಿ 1,36,274 ಮಂದಿ ಮತ ಚಲಾಯಿಸಿದ್ದು ಒಟ್ಟು ಶೇ.75.84ರಷ್ಟು ಮತದಾನವಾಗಿದೆ.