ಪಿಯುಸಿ: ಜಿಲ್ಲೆಗೆ ಶೇ.76.74 ಫಲಿತಾಂಶ
ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 7
ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಕೂಡ ಪ್ರಕಟಗೊಂಡಿದ್ದು, ಜಿಲ್ಲೆ ಒಂದು ಸ್ಥಾನ ಕೆಳಗೆ ಕುಸಿದಿದ್ದು, ಈ ಬಾರಿ 7ನೇ ಸ್ಥಾನ ಪಡೆದಿದೆ.
ಇಡೀ ರಾಜ್ಯದ ವಿದ್ಯಮಾನದಂತೆ ಜಿಲ್ಲೆಯಲ್ಲಿಯೂ ಸಹ ಬಾಲಕಿಯರದೇ ಮೇಲುಗೈ.
ಎಂದಿನಂತೆ ಈ ಬಾರಿಯೂ ಸಹ ತೀರ್ಥಹಳ್ಳಿಯ ವಿದ್ಯಾರ್ಥಿಗಳು ಬುದ್ದಿವಂತರೆಂದು ಸಾಬೀತುಪಡಿಸಿದ್ದಾರೆ. ಶೇಕಡಾವಾರು ಫಲಿತಾಂಶದಲ್ಲಿ ಈ ತಾಲೂಕು ಮೇಲುಗೈ ಪಡೆದಿದೆ. ಭದ್ರಾವತಿ ತಾಲೂಕು ಕೊನೆಯ ಸ್ಥಾನ ಪಡೆದಿದೆ.
ಲಯನ್ಸ್ ಪ್ರಥಮ: ಶಿವಮೊಗ್ಗ ನಗರದ ವಿಕಾಸ ಶಾಲೆ (ಅನುದಾನ ರಹಿತ) ಮತ್ತು ಶಿಕಾರಿಪುರ ತಾಲೂಕಿನ ಬನಸಿರಿ ಲಯನ್ಸ್ ಪದವಿ ಪೂರ್ವ ಕಾಲೇಜು (ಅನುದಾನಿತ) ಶೇ. 100 ಫಲಿತಾಂಶ ಪಡೆದು ಪ್ರಥಮ ಸ್ಥಾನ ಪಡೆದಿದ್ದು, ತೀರ್ಥಹಳ್ಳಿಯ ಮಳಲಿಮಕ್ಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ. 97.14 ರಷ್ಟು ಪಡೆದು ದ್ವಿತೀಯ ಸ್ಥಾನದಲ್ಲಿದೆ.
ಮೂರು ಕಾಲೇಜುಗಳು ಅತಿ ಕಡಿಮೆ ಫಲಿತಾಂಶ ಪಡೆದಿವೆ. ಚಿಕ್ಕಬಂಬೂರು ಸರ್ಕಾರಿ ಪದವಿ ಪೂರ್ವ ಕಾಲೇಜು (ಶೇ. 16.66), ಭದ್ರಾವತಿಯ ಕೃಷ್ಣ ಪದವಿಪೂರ್ವ ಕಾಲೇಜು (ಶೇ. 31.91) ಮತ್ತು ಸಾಗರದ ಶ್ರೀ ಸಿಗಂದೂರೇಶ್ವರಿ ಪದವಿಪೂರ್ವ ಕಾಲೇಜು (ಶೇ. 8.33)ಗಳ ಸಾಧನೆ ಕಳಪೆಯಾಗಿದೆ.
12,647 ವಿದ್ಯಾರ್ಥಿಗಳು ಪಾಸ್: ಜಿಲ್ಲೆಯಲ್ಲಿ ಒಟ್ಟು 18,252 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12,647 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 705 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 5,926 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್, 3,553 ವಿದ್ಯಾರ್ಥಿಗಳು ಸೆಕೆಂಡ್ ಕ್ಲಾಸ್ ಹಾಗೂ 2,463 ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.
ಶೇ.69.29 ಫಲಿತಾಂಶ: ಜಿಲ್ಲೆಗೆ ಶೇ.69.29 ರಷ್ಟು ಫಲಿತಾಂಶ ಲಭಿಸಿದ್ದು, ತೀರ್ಥಹಳ್ಳಿ ತಾಲೂಕು ಶೇ.77.47ರಷ್ಟು ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದೆ. ಸೊರಬ ಶೇ.73.66, ಶಿವಮೊಗ್ಗ ಶೇ.71.92, ಹೊಸನಗರ ಶೇ. 71.68, ಸಾಗರ ಶೇ. 68.99, ಶಿಕಾರಿಪುರ ಶೇ. 63.01, ಭದ್ರಾವತಿ ಶೇ. 59.82 ರಷ್ಟು ಫಲಿತಾಂಶ ಲಭಿಸಿದೆ.