ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಾಲಕಿ ಅಪಹರಿಸಲು ಯತ್ನಿಸಿದ ಇಬ್ಬರಿಗೆ ಥಳಿತ

Vishwanath S
Updated On : 8 May 2013, 4:47 am

ಕ.ಪ್ರ.ವಾರ್ತೆ ,  ಸಾಗರ ,   ಮೇ 7
ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿ ಇಬ್ಬರು ಯುವಕರು ಸಾರ್ವಜನಿಕರಿಂದ ಧರ್ಮದೇಟು ತಿಂದು ಕೊನೆಗೆ ಪೊಲೀಸರ ಅತಿಥಿಯಾದ ಘಟನೆ ಮಂಗಳವಾರ ನಡೆದಿದೆ.
ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ಪುರ ಗ್ರಾಮದ ಪಿಯುಸಿ ವಿದ್ಯಾರ್ಥಿನಿಯನ್ನು ಆಕೆಯ ತಾಯಿಯ ಚಿಕ್ಕಪ್ಪನ ಮಗ ಸತೀಶ್ ಹಾಗೂ ಆತನ ಸ್ನೇಹಿತ ಗೋವಿಂದ ರೆಡ್ಡಿ ಎಂಬುವವರು ಅಪಹರಿಸಲು ಯತ್ನಿಸಿದ್ದಾರೆ.
ಅಪಹರಿಸಲು ಸಂಚು: ಹೊಸನಗರ ನಿವಾಸಿಯಾಗಿದ್ದ ಸತೀಶ್ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾನೆ. ತಾನು ಉದ್ಯೋಗ ಮಾಡುವ ಸ್ಥಳದಲ್ಲಿ ಆತನಿಗೆ ಗೋವಿಂದ ರೆಡ್ಡಿ ಎಂಬಾತನ ಪರಿಚಯವಾಗಿದೆ. ಕಳೆದ 15 ದಿನಗಳ ಹಿಂದೆ ಸತೀಶನೊಂದಿಗೆ ಗೋವಿಂದ ರೆಡ್ಡಿ ಪುರ ಗ್ರಾಮಕ್ಕೆ ಜಾತ್ರೆಗೆ ಬಂದಿದ್ದನು. ಈ ಸಂದರ್ಭದಲ್ಲಿ ಹುಡುಗಿಯನ್ನು ನೋಡಿ ಹೇಗಾದರೂ ಮಾಡಿ ಅವಳನ್ನು ಅಪಹರಿಸಬೇಕು ಎಂದು ಸಂಚು ರೂಪಿಸಿದ್ದಾರೆ.
ಮಂಗಳವಾರ ಬೆಂಗಳೂರಿನಿಂದ ಓಮಿನಿಯಲ್ಲಿ ಸತೀಶ್ ಹಾಗೂ ಗೋವಿಂದ ರೆಡ್ಡಿ ಪುರ ಗ್ರಾಮಕ್ಕೆ ಬಂದಿದ್ದಾರೆ. ಬಾಲಕಿಗೆ ಬಟ್ಟೆ ಕೊಡಿಸಲು ಸೊರಬಕ್ಕೆ ಕರೆದುಕೊಂಡು ಹೋಗುವುದಾಗಿ ಹುಡುಗಿಯ ತಾಯಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಹುಡುಗಿಯ ಅಣ್ಣ ಸುನೀಲ್ ಸಹ ಓಮಿನಿ ವಾಹನ ಹತ್ತಿದ್ದಾನೆ. ಓಮಿನಿ ಸೊರಬ ಪಟ್ಟಣ ಸಮೀಪಿಸುತ್ತಿದ್ದಂತೆ ಕೆರೆಯೊಂದರ ಬಳಿ ಸುನೀಲನನ್ನು ಹೊರಗೆ ತಳ್ಳಿದ ಸತೀಶ್ ಹಾಗೂ ಗೋವಿಂದ ರೆಡ್ಡಿ ಓಮಿನಿಯನ್ನು ಸಾಗರ ಕಡೆಗೆ ತಿರುಸಿದ್ದಾರೆ ಎನ್ನಲಾಗಿದೆ.
ಸುನೀಲ್ ಸೊರಬಕ್ಕೆ ಸಂತೆಗೆ ಹೋಗಿದ್ದ ತಂದೆಗೆ ತಂಗಿಯನ್ನು ಅಪಹರಿಸಿಕೊಂಡು ಹೋಗಿದ್ದ ವಿಚಾರ ಫೋನ್ ಮೂಲಕ  ತಿಳಿಸಿದ್ದಾನೆ. ಬಳಿಕ ಇಬ್ಬರೂ ಸಾಗರಕ್ಕೆ ವಾಹನದಲ್ಲಿ ಸತೀಶ್ ಹಾಗೂ ಗೋವಿಂದ ರೆಡ್ಡಿಯನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಪೆಟ್ರೋಲ್ ಖಾಲಿ: ಮಧ್ಯಾಹ್ನ 4 ಗಂಟೆ ಸುಮಾರಿಗೆ ಸಾಗರದ ಪ್ರವಾಸಿ ಮಂದಿರದ ಬಳಿ ಓಮಿನಿಯ ಪೆಟ್ರೋಲ್ ಮುಗಿದು ಹೋಗಿದೆ. ತಕ್ಷಣ ಪೆಟ್ರೋಲ್ ಹಾಕಿಸಲು ವಾಹನವನ್ನು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸತೀಶ್ ಬಾಲಕಿಯ ಒಂದು ಕೈಯನ್ನು ಹಿಂದಕ್ಕೆ ಕಟ್ಟಿ, ಕೂಗದಂತೆ ಬಾಯಿ ಮುಚ್ಚಿ ಹಿಡಿದು ಕೊಂಡಿದ್ದನು. ಗೋವಿಂದ ರೆಡ್ಡಿ ವಾಹನಕ್ಕೆ ಪೆಟ್ರೋಲ್ ಹಾಕಿಸಲು ಕೆಳಗೆ ಇಳಿದ ಸಂದರ್ಭದಲ್ಲಿ ಯುವತಿಯು ಸತೀಶನಿಗೆ ತಲೆಯಿಂದ ಗುದ್ದಿ, ಓಮಿನಿ ಬಾಗಿಲು ತೆಗೆದುಕೊಂಡು ಕೂಗುತ್ತಾ ಹೊರಗೆ ಓಡಿ ಬಂದಿದ್ದಾಳೆ.
ಥಳಿತ: ಯುವತಿಯನ್ನು ಹಿಡಿಯಲು ಸತೀಶ್ ಹಾಗೂ ಗೋವಿಂದ ರೆಡ್ಡಿ ಹಿಂಬಾಲಿಸುವ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಆಟೋ ಕಾಂಪ್ಲೆಕ್ಸ್ ವ್ಯವಕರು ಹಾಗೂ ಸಾರ್ವಜನಿಕರು ಯುವತಿಯನ್ನು ರಕ್ಷಿಸಿ, ಗೋವಿಂದ ರೆಡ್ಡಿ  ಹಾಗೂ ಸತೀಶನಿಗೆ ಚನ್ನಾಗಿ ಥಳಿಸಿ ಗ್ರಾಮಾಂತರ ಠಾಣೆಗೆ ಒಪ್ಪಿಸಿದ್ದಾರೆ.
ನಂತರ ಪ್ರಕರಣವನ್ನು ಸೊರಬ ಠಾಣೆಗೆ ವರ್ಗಾಯಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement