ಭದ್ರಾವತಿ ತಾಲೂಕು ಶೇ.74.88
ಕ.ಪ್ರ.ವಾರ್ತೆ , ಭದ್ರಾವತಿ , ಮೇ 7
ಮಂಗಳವಾರ ಪ್ರಕಟವಾದ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಭದ್ರಾವತಿ ತಾಲೂಕು ಶೇ.74.88 ರಷ್ಟು ಸಾಧನೆ ಮಾಡಿದೆ. ಒಟ್ಟು ಪರೀಕ್ಷೆಗೆ ಕುಳಿತಿದ್ದ 4304 ವಿದ್ಯಾರ್ಥಿಗಳ ಪೈಕಿ 3223 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಕಳೆದ ಬಾರಿ ಶೇ.74.7 ಫಲಿತಾಂಶ ಬಂದಿದ್ದು, ಈ ಬಾರಿ 0.18ರಷ್ಟು ಮುನ್ನಡೆ ಕಂಡಿದೆ. ಬಾಲಕಿಯರದೇ ಮೇಲುಗೈಯಾಗಿದ್ದು, ಶೇ. 77.69 ಬಾಲಕಿಯರು ತೇರ್ಗಡೆಯಾಗಿದ್ದಾರೆ. ತೇರ್ಗಡೆಯಾದ ಬಾಲಕರು ಶೇಕಡ 71.62.
ಮೊರಾರ್ಜಿ ಪ್ರೌಢಶಾಲೆ: ಸರ್ಕಾರಿ ಶಾಲೆಗಳ ಪೈಕಿ ಆನವೇರಿ ಗ್ರಾಮದ ಮೊರಾರ್ಜಿ ಪ್ರೌಢಶಾಲೆ ಶೇ.100 ಫಲಿತಾಂಶ ಸಾಧಿಸಿದೆ. ಸನ್ಯಾಸಿ ಕೋಡಮಗ್ಗೆಯ ಸರ್ಕಾರಿ ಪ್ರೌಢಶಾಲೆ ಶೇ. 98.59 ಫಲಿತಾಂಶ ಕಂಡಿದೆ. ಕಾಗೆಕೋಡಮಗ್ಗೆಯ ಮೊರಾರ್ಜಿ ದೇಸಾಯಿ ಶಾಲೆ ಶೇ. 96.67, ಅರಹತೊಳಲಿನ ಸರ್ಕಾರಿ ಪ್ರೌಢಶಾಲೆ ಶೇ. 96.30 ಹಾಗೂ ಹೆಂಚಿನಸಿದ್ದಾಪುರದ ಮೊರಾರ್ಜಿ ದೇಸಾಯಿ ಶಾಲೆ ಶೇ. 90.32 ಫಲಿತಾಂಶ ಸಾಧಿಸಿವೆ.
ಅನುದಾನರಹಿತ ಶಾಲೆಗಳ ಪೈಕಿ ಭದ್ರಾವತಿಯ ಅನನ್ಯ ಪ್ರೌಢಶಾಲೆ, ಹೊಳೆಹೊನ್ನೂರಿನ ಸೇಂಟ್ ಮೇರಿಸ್, ಭದ್ರಾವತಿ ಹೊಸಮನೆಯ ಸೈಂಟ್ ಮೇರಿಸ್ ಪ್ರೌಢಶಾಲೆ, ಕಾಗದ ನಗರದ ಪೇಪರ್ ಟೌನ್ ಆಂಗ್ಲಶಾಲೆ, ನ್ಯೂಟೌನಿನ ಈಶ್ವರಮ್ಮ ಪ್ರೌಢಶಾಲೆ, ಹೊಳೆಹೊನ್ನೂರಿನ ರಾಷ್ಟ್ರೋತ್ಥಾನ ಪ್ರೌಢಶಾಲೆ ಹಾಗೂ ಭದ್ರಾವತಿಯ ಪೂರ್ಣಪ್ರಜ್ಞಾ ಶಾಲೆ ಶೇ.100 ಫಲಿತಾಂಶ ಸಾಧಿಸಿವೆ. ಅನುದಾನಿತ ಶಾಲೆಗಳ ಪೈಕಿ ಸೇಂಟ್ ಚಾರ್ಲ್ಸ್ ಕನ್ನಡ ಶಾಲೆ ಶೇ. 96.24 ಫಲಿತಾಂಶ ಹೊಂದಿದೆ.
ಪೂರ್ಣಪ್ರಜ್ಞಾ ಶಾಲೆಯ ಸುಪ್ರೀತ್ ಟಿ.ಎಸ್ ಮತ್ತು ಇದೇ ಶಾಲೆಯ ಬಿ.ಆರ್. ನಾಗರಾಜ ಹೆಬ್ಬಾರ್ ಶೇ. 98.56 ಅಂಕ ಪಡೆದಿದ್ದು, ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಪೂರ್ಣಪ್ರಜ್ಞಾ ವಿದ್ಯಾಸಂಸ್ಥೆಯ ವಿಶಾಲ್ ಎಲ್.ಎಸ್ 614 ಅಂಕ, ಇದೇ ಶಾಲೆಯ ರಮ್ಯ ಎ.ಎನ್ 611 ಅಂಕ, ಟಿ.ಎ.ಪ್ರಿಯದರ್ಶಿನಿ 610 ಅಂಕ ಪಡೆದಿದ್ದಾರೆ.
ಸರ್ಕಾರಿ ಶಾಲೆಯ ಪೈಕಿ ಅನವೇರಿಯ ಮೊರಾರ್ಜಿ ದೇಸಾಯಿ ಶಾಲೆ ಶೇ.100, ಸನ್ಯಾಸಿಕೊಡಮಗ್ಗೆಯ ಸರ್ಕಾರಿ ಪ್ರೌ. ಶಾಲೆ (ಶೇ.98.59), ಕಡದಕಟ್ಟೆಯ ಮೊರಾರ್ಜಿ ದೇಸಾಯಿ ಶಾಲೆ (ಶೇ.96.70), ಅರಹತೊಳಲಿನ ಸ.ಪ್ರೌ.ಶಾಲೆ (96.30) ಮತ್ತು ಅರಳಿಹಳ್ಳಿಯ ಸ.ಪ್ರೌ. ಶಾಲೆ (ಶೇ.85.92) ಉತ್ತಮ ಫಲಿತಾಂಶ ಕಂಡಿವೆ.
ತರಂಗ ಕಿವುಡು ಮತ್ತು ಮೂಗರ ಶಾಲೆಯಲ್ಲಿ ಏಳು ಬಾಲಕರು ಮತ್ತು ನಾಲ್ವರು ಬಾಲಕಿಯರು ಪರೀಕ್ಷೆಗೆ ಕುಳಿತಿದ್ದು, ಅದರಲ್ಲಿ ಮೂವರು ಬಾಲಕರು ಹಾಗೂ ಒಬ್ಬ ಬಾಲಕಿ ತೇರ್ಗಡೆಯಾಗಿದ್ದಾರೆ. ಈ ಶಾಲೆ ಶೇ. 42.86 ಫಲಿತಾಂಶ ಕಂಡಿದೆ. ಭದ್ರಾವತಿಯ ಗಾಂಧಿನಗರದ ಬಾಪೂಜಿ ಪ್ರೌಢಶಾಲೆ ಅತಿ ಕಡಮೆ ಫಲಿತಾಂಶ ಪಡೆದ ಶಾಲೆಯಾಗಿದೆ.