ಕಮಲದ ಬುಡ ಕಿತ್ತಾಕಿದ ಮತದಾರ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಮೇ 8
ಬೇಕಾಬಿಟ್ಟಿಯಾಗಿ ನಾಲಿಗೆ ಹರಿಯಬಿಟ್ಟರೆ, ಅಭಿವೃದ್ಧಿ ಹೆಸರಿನಲ್ಲಿ ಸ್ವಂ ಅಭಿವೃದ್ಧಿಯಾದರೆ, ಸ್ವಜನ ಪಕ್ಷಪಾತ ಮಾಡಿದರೆ ಜನತೆ ಸಹಿಸಲ್ಲ ಎಂಬುದಕ್ಕೆ ಶಿವಮೊಗ್ಗ ಜಿಲ್ಲೆಯ ವಿಧಾನಸಭಾ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ.
ಬಿಜೆಪಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಜನತೆ, ಆ ಪಕ್ಷದ ಜನಪ್ರತಿನಿಧಿಗಳಿಗೆ, ಮುಖಂಡರಿಗೆ ಹಾಗೂ ಅವರ ಹಿಂಬಾಲಕರಿಗೆ ಸರಿಯಾದ ಪೆಟ್ಟುನೀಡಿದ್ದಾರೆ. ಹೇಳಿಕೊಳ್ಳುವುದಕ್ಕೂ ಒಂದು ಸ್ಥಾನ ಗಳಿಸಲು ಸಾಧ್ಯವಾಗದಂತೆ ಮಾಡಿದ್ದಾನೆ ಮಲೆನಾಡಿನ ಸೌಮ್ಯ ಮತದಾರ.
ಸಂಘ ಪರಿವಾರದ ಗಟ್ಟಿ ನೆಲೆ ಇರುವ, ಬಿಜೆಪಿಗಾಗಿ ಬೆವರು ಹರಿಸುವ ದೇವದುರ್ಲಬ ಕಾರ್ಯಕರ್ತರು ಇದ್ದರೂ ಶಿವಮೊಗ್ಗ, ತೀರ್ಥಹಳ್ಳಿ , ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಹೊರತಾಗಿ ಉಳಿದ ನಾಲ್ಕು ಕ್ಷೇತ್ರದಲ್ಲಿ ಠೇವಣಿಕೂಡ ಗಿಟ್ಟಿಸಲಾಗಿಲ್ಲ.
ಆಗಿದ್ದಾದರೂ ಏನು? ಬಿಜೆಪಿ ಜಿಲ್ಲೆಯಲ್ಲಿ ಬೇರು ಬಿಡಲು ಡಿ.ಎಚ್. ಶಂಕರಮೂರ್ತಿ, ಬಿ.ಎಸ್. ಯಡಿಯೂರಪ್ಪ, ಕೆ.ಎಸ್. ಈಶ್ವರಪ್ಪ ಶ್ರಮದ ಬಗ್ಗೆ ಚಕಾರ ಎತ್ತುವವರಿಲ್ಲ. ಹಳ್ಳಿಹಳ್ಳಿಗೆ ಸೈಕಲ್ನಲ್ಲಿ ಸುತ್ತಿ ಪಕ್ಷ ಕಟ್ಟಿದ ನಾಯಕರಿವರು. ಶ್ರಮಕ್ಕೆ ಪ್ರತಿಫಲವೆಂಬಂತೆ ಬರುಬರುತ್ತಾ ಒಂದೊಂದೇ ಕ್ಷೇತ್ರವನ್ನು ತನ್ನದಾಗಿಸಿಕೊಂಡ ಬಿಜೆಪಿ 2008ರಲ್ಲಿ 5 ಸ್ಥಾನಗಳನ್ನು ಕಬಳಿಸಿತು, ಅಧಿಕಾರವೂ ಸಿಕ್ಕಿತು. ಒಂದಷ್ಟು ಅಭಿವೃದ್ಧಿಯನ್ನೂ ಮಾಡಿ ತೋರಿಸಿತು. ಈ ಮಧ್ಯೆಯೇ ಕೆಲವು ಬಿಜೆಪಿ ನಾಯಕರ ವರ್ತನೆಯಿಂದಾಗಿ ಇಡೀ ಜಿಲ್ಲೆಯಲ್ಲಿ ವಿರೋಧಿ ಅಲೆ ಏಳಲು ಆರಂಭವಾಯಿತು.
ಈ ಮಧ್ಯೆಯೇ ಯಡಿಯೂರಪ್ಪನವರು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದರಿಂದಾಗಿ ಪಕ್ಷಕ್ಕೆ ಮತ್ತೊಂದಿಷ್ಟು ಹೊಡೆತವೂ ಬಿತ್ತು. ಇದಕ್ಕಿಂತ ಮುಖ್ಯವಾಗಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ವೈಯಕ್ತಿಕ ಅಭಿವೃದ್ಧಿಗಳು ಜನರ ಕೆಂಗಣ್ಣಿಗೆ ಗುರಿಯಾಯಿತು.
ಈಶ್ವರಪ್ಪರಿಗೆ ಹಿನ್ನಡೆ: ಚುನಾವಣೆ ಹತ್ತಿರವಾಗುತ್ತಿದ್ದಂತೆ ಉಪ ಮುಖ್ಯಮುಖ್ಯಮಂತ್ರಿಯಾಗಿದ್ದ ಈಶ್ವರಪ್ಪ ಹಾಗೂ ಅವರ ಹಿಂಬಾಲಕರ ವರ್ತನೆಗಳೇ ಶಿವಮೊಗ್ಗ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ಕಳೆದುಕೊಳ್ಳಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಮುಖವಾಗಿ ಚುನಾವಣೆ ಹಿನ್ನೆಲೆಯಲ್ಲಿ ವಿಪ್ರ ವೇದಿಕೆ ಹೆಸರಿನಲ್ಲಿ ನಡೆದ ಬ್ರಾಹ್ಮಣ ಸಮುದಾಯದಿಂದ ಈಶ್ವರಪ್ಪನವರಿಗೆ ಸನ್ಮಾನ ಹಾಗೂ ಆ ಸಮಾರಂಭದಲ್ಲಿ ಈಶ್ವರಪ್ಪನವರು ಆಡಿದ ಲವ್ ಜಿಹಾದ್ ಕುರಿತಾಗಿನ ಮಾತುಗಳೇ ಅವರ ಮತಗಳು ಕುಸಿಯಲು ಕಾರಣವಾಗಿದೆ ಎಂಬ ಮಾತೂ ಇದೆ.
2008ರ ಚುನಾವಣೆಯಲ್ಲಿ ಈಶ್ವರಪ್ಪ ಪಡೆದಿದ್ದು 58,982 ಮತ, ಗೆಲುವಿನ ಅಂತರ 32,419 ಮತ. ಈ ಬಾರಿ ಈಶ್ವರಪ್ಪ ಪಡೆದ ಮತ 33462.
ಬಿಎಸ್ವೈ ಸವಾಲ್: ಈಶ್ವರಪ್ಪನವರ ವಿರುದ್ಧ ಇನ್ನಿಲ್ಲದಂತೆ ಹಗೆ ಸಾಧಿಸಿದ್ದ ಮಾಜಿ ಸಿಎಂ ಯಡಿಯೂರಪ್ಪ, ಗೆದ್ದುತೋರಿಸುವಂತೆ ಸವಾಲು ಹಾಕಿದ್ದರು.
ಒಂದು ಪ್ರಚಾರ ಸಭೆಯಲ್ಲಂತೂ ತಲೆಕೆಟ್ಟ ಯಡಿಯೂರಪ್ಪ ಶಿವಮೊಗ್ಗದಲ್ಲಿ ಹೇಗೆ ಗೆಲ್ಲುತ್ತಾನೋ ನೋಡುತ್ತೇನೆ. ವಿಧಾನಸೌಧವನ್ನು ಟಿವಿಯಲ್ಲಿ ಕುಳಿತು ನೋಡುವಂತೆ ಮಾಡುತ್ತೇನೆ. ಗೂಟದ ಕಾರು ಅವರಿಗೆ ಇನ್ನು ಕನಸಿನ ಮಾತು ಎಂದೇ ಗುಡುಗಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ್ದ ಈಶ್ವರಪ್ಪ ಗೆಲುವಿಗಾಗಿ ಎಲ್ಲಾ ರೀತಿಯಲ್ಲೂ ಪ್ರಯತ್ನ ನಡೆಸಿದ್ದರು.
ಈ ಬೆಳವಣಿಗೆ ನಡುವೆಯೂ ಪಕ್ಷದ ಸಂಘಟನಾ ಕಾರ್ಯಕರ್ತರು, ಸ್ಥಳೀಯ ಮುಖಂಡರು ಚುನಾವಣಾ ಸಂದರ್ಭದಲ್ಲಿ ಈಶ್ವರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದ ಬೆಳವಣಿಗೆಯೂ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
ಜಿಲ್ಲೆಯ ಕಥೆ: ಕೆಜೆಪಿ ಅಬ್ಬರದಿಂದಾಗಿ ಶಿವಮೊಗ್ಗದಲ್ಲಿ ಈಶ್ವರಪ್ಪ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟರೆ, ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಸಹ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಉಳಿದಂತೆ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ ಬಾರಿ 24 ಸಾವಿರ ಮತಗಳ ಅಂತರಗಳಿಂದ ಗೆಲುವು ಪಡೆದಿದ್ದ ಕೆ.ಜಿ. ಕುಮಾರಸ್ವಾಮಿ 12435ಮತಗಳನ್ನಷ್ಟೇ ಪಡೆದು 4ನೇ ಸ್ಥಾನಕ್ಕೆ ಕುಸಿದರು.
ಸಾಗರದಲ್ಲಿ ಶರಾವತಿ ಸಿ. ರಾವ್ 5 ಸಾವಿರ ಮತ ಪಡೆದು ನಾಲ್ಕನೇ ಸ್ಥಾನ ಪಡೆದರೆ, ಸೊರಬದಲ್ಲಿ ಚಿಕ್ಕಾವಲಿ ನಾಗರಾಜ ಗೌಡ ಸಹ 5 ಸಾವಿರ ಮತ ಪಡೆದು ಅಸ್ತಿತ್ವ ತೋರಿಸಿಕೊಳ್ಳಲು ಹೆಣಗಾಡಿದರು. ಭದ್ರಾವತಿಯಲ್ಲಿ ಐದನೇ ಸ್ಥಾನದಕ್ಕಿದ್ದು, ಇಲ್ಲಿನ ಅಭ್ಯರ್ಥಿ ಶಿವಾಜಿರಾವ್ ಸಿಂಧ್ಯ ಪಡೆದಿದ್ದು 1779 ಮತ. ಒಟ್ಟಾರೆ ಬಿಜೆಪಿಯಲ್ಲಿ ಜಿಲ್ಲೆಯ ಜನ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಈ ಮೂಲಕ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
- ಶ್ರೀಕಾಂತ ಭಟ್