ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಾಗೋಡಿಗೆ ಗೆಲುವಿನ ಕೋಡು...

Lingaraj Badiger
Updated On : 9 May 2013, 10:59 am

ಸಾಗರ: ಕಾಗೋಡು ಗೆಲ್ಲುತ್ತಾರೆ ಎಂಬುದು ಚುನಾವಣೆ ಮುಂಚಿತವಾಗಿ ಕ್ಷೇತ್ರದಲ್ಲಿ ಮೂಡಿಬಂದ ಜನಜನಿತ ಮಾತು. ಅದು ಈಗ ಸಾಬೀತಾಗಿದೆ. ಜಿಲ್ಲೆಯಲ್ಲಿ ಅತ್ಯಧಿಕ ಮತಗಳಿಂದ ಆರಿಸಿಬಂದಿದ್ದಾರೆ ಕಾಗೋಡು ತಿಮ್ಮಪ್ಪ.
ಕಾಗೋಡು ತಿಮ್ಮಪ್ಪನವರು ಕೇವಲ ಚುನಾವಣಾ ಕೇಂದ್ರಿತ ರಾಜಕಾರಣ ಮಾಡದೆ ಜನಪರ, ಜನಹಿತ ರಾಜಕಾರಣ ಮಾಡಿಕೊಂಡು ಬಂದಿರುವುದು ಗೆಲುವಿಗೆ ಕಾರಣ ಎನ್ನಬಹುದು.
ಕಳೆದ ಎರಡು ಅವಧಿಯಲ್ಲಿ ಕಾಗೋಡು ಸೋಲಲು ವಿರೋಧಿ ಮತಗಳು ಪ್ರಮುಖ ಕಾರಣವಾಗಿತ್ತು. 2004ರಲ್ಲಿ ಸಾಗರ ಪಟ್ಟಣದಲ್ಲಿ ನಡೆದ ಗಣಪತಿ ಗಲಾಟೆಯಿಂದ ಆರಂಭಿಸಿ ಅದು ಮುಂದೆ ಕೋಮು ಗಲಭೆಯಾಗಿ ಮಾರ್ಪಟ್ಟಿತ್ತು. ಈ ಪ್ರಕರಣ ಆಗ ಸಿಟಿಂಗ್ ಎಂ.ಎಲ್.ಎ. ಆಗಿದ್ದ ಕಾಗೋಡರಿಗೆ ವಿರೋಧಿ ಮತಗಳನ್ನು ಸೃಷ್ಟಿಸಿತ್ತು. ಅಲ್ಲದೆ ಅದೇ ತಾನೇ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಬಿಜೆಪಿ ಸೇರಿ ಇಡೀ ರಾಜ್ಯದಲ್ಲಿ ಪಕ್ಷಕ್ಕೆ ಹೊಸ ಇಮೇಜ್ ಬಂದಿತ್ತು.
ನಿರೀಕ್ಷಿತ ಗೆಲವು ಬರಲಿಲ್ಲ: 2008ರ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಯಡಿಯೂರಪ್ಪನವರ ಪರವಾದ ಅಲೆ ಬಲವಾಗಿ ಬೀಸಿತ್ತು. ಇದು ಮತ್ತೆ ಕಾಗೋಡರ ಸೋಲಿಗೆ ಪ್ರಮುಖ ಕಾರಣವಾಯಿತು. ಅಲ್ಲದೆ ಕ್ಷೇತ್ರ ವಿಂಗಡಣೆಯಲ್ಲಿ ಹೊಸನಗರದ ಕೆಲವು ಹೋಬಳಿ ಸಾಗರಕ್ಕೆ ಸೇರಿದ್ದು ಅಲ್ಲಿ ಕಾಂಗ್ರೆಸ್ಸಿಗೆ ನಿರೀಕ್ಷಿತ ಮತಗಳು ಬರಲಿಲ್ಲ.
ಆದರೆ ಈ ಬಾರಿಯ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪನವರಿಗೆ ಯಾವುದೇ ವಿರೋಧಿ ಅಲೆ ಇರಲಿಲ್ಲ.
ಬದಲಾಗಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಬೀಸುತ್ತಿತ್ತು. ಜೊತೆಗೆ ಗೋಪಾಲಕೃಷ್ಣ ಬೇಳೂರರ ಪಕ್ಷಾಂತರದ ಹುಚ್ಚಾಟ ಜನರಿಗೆ ಹೇಸಿಗೆ ತರಿಸಿತ್ತು. ಅದು ಕಾಂಗ್ರೆಸ್ ಮತಗಳಾಗಿ ಪರಿವರ್ತನೆಯಾಯಿತು.
ಸವಾಲುಗಳು: ಕಾಗೋಡು ತಿಮ್ಮಪ್ಪ ಕ್ಷೇತ್ರದಲ್ಲಿ ಓಡಾಡಿ ಬಗರ್‌ಹುಕುಂ ಸಮಸ್ಯೆ ಕಿಚ್ಚು ಆರದಂತೆ ನೋಡಿಕೊಂಡರು. ಇದೀಗ ಈ ಸಮಸ್ಯೆಯನ್ನು ಪರಿಹಾರ ಮಾಡುವ ದೊಡ್ಡ ಸವಾಲು ಕಾಗೋಡು ಹೆಗಲ ಮೇಲಿದೆ. ತುಮರಿ ಭಾಗದ ಸೇತುವೆ ನಿರ್ಮಾಣ ಯೋಜನೆಯ ಅನುಷ್ಠಾನ, ಸಾಗರ ಪಟ್ಟಣಕ್ಕೆ ಹಿನ್ನೀರು ತರುವ ಯೋಜನೆ ಜಾರಿಯಾಗಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement