ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಖುಷಿ ಹಂಚಿಕೊಂಡ ಕಾರ್ಯಕರ್ತ

Lingaraj Badiger
Updated On : 9 May 2013, 11:03 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 8
ಮತದಾನ ನಂತರದ ಅಂತೆಕಂತೆಗಳ ಕಥೆಗಳ ಮಾತು ಮುಗಿದಿದ್ದು, ತಮ್ಮ ನಾಯಕನ ಫಲಿತಾಂಶ ಎದುರು ನೋಡುತ್ತಿದ್ದ ಕಾರ್ಯಕರ್ತರು ಬುಧವಾರ ಬೆಳಗ್ಗೆ 7.30ರಿಂದಲೇ ಚುನಾವಣೆ ಫಲಿತಾಂಶ ಪ್ರಕಟವಾಗುವ ಸ್ಥಳದ (ಎಟಿಎನ್‌ಸಿಸಿ ಕಾಲೇಜು) ಬಳಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು.
ವಿಶೇಷವೆಂದರೆ ಕಳೆದ ಬಾರಿಯಂತೆ ಮೈಕ್‌ಸೆಟ್‌ಗಳ ಮೂಲಕ ಫಲಿತಾಂಶ ಪ್ರಕಟ ಮಾಡದೆ ನೇರವಾಗಿ ಟಿವಿ ಮೂಲಕ ಫಲಿತಾಂಶ ನೀಡಲು ಜಿಲ್ಲಾಡಳಿತ, ಜಿಲ್ಲಾಧಿಕಾರಿ ಕಚೇರಿ ಎದುರು ಕಟ್ಟಡದಲ್ಲಿ ಪ್ರಾತ್ಯಕ್ಷಿಕೆ (ಬಿಗ್ ಸ್ಕ್ರೀನ್) ವ್ಯವಸ್ಥೆ ಮಾಡಿತ್ತು. ಈ ಸಂಬಂಧ ಸಾವಿರಾರು ಕಾರ್ಯಕರ್ತರು ತಮ್ಮ ನಾಯಕನ ಹಣೆಬರಹವನ್ನು ಇಲ್ಲೇ ವೀಕ್ಷಣೆ ಮಾಡುತ್ತಿದ್ದು, ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಶಿಳ್ಳೆ ಹಾಗೂ ಚಪ್ಪಾಳೆಯೊಂದಿಗೆ ಸಂಭ್ರಮಿಸುತ್ತಿದ್ದರು. ಕೆಲ ಕಾರ್ಯಕರ್ತರು ಸಿಹಿ ಹಂಚಿದರೆ, ಮತ್ತೆ ಕೆಲವರು ಬಣ್ಣ ಹಾಕಿಕೊಂಡು ತಮ್ಮ ಪಕ್ಷದ ಬಾವುಟ ಹಿಡಿದು ತಮ್ಮ ಸ್ನೇಹಿತರೊಂದಿಗೆ ನರ್ತಿಸುತ್ತಾ ಸಂತೋಷ ಹಂಚಿಕೊಂಡರು.
ಇನ್ನೂ ಭದ್ರಾವತಿಯ ಮತದಾರರು ತಮ್ಮ ಅಭ್ಯರ್ಥಿ ಎಂ.ಜೆ. ಅಪ್ಪಾಜಿ ವಿಜಯಿಯಾಗಿದ್ದಾರೆ ಎಂದು ತಿಳಿಯುತ್ತಿದ್ದಂತೆ  ಘೋಷಣೆಗಳನ್ನು ಕೂಗುತ್ತಾ, ರಸ್ತೆಗಳಲ್ಲಿ ಬೈಕ್ ರ್ಯಾಲಿ ಮಾಡಿದರು.
ಗೊಂದಲ: ಶಿವಮೊಗ್ಗ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಕೆಜೆಪಿ ಅಭ್ಯರ್ಥಿಗಳ ಫಲಿತಾಂಶ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿತ್ತು. ಒಮ್ಮೆ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ಮುನ್ನಡೆ ಸಾಧಿಸಿದ್ದಾರೆ ಎಂದರೇ, ಮತ್ತೆ ಕೆಲ ಕ್ಷಣಗಳಲ್ಲಿ ಕೆಜೆಪಿ ಅಭ್ಯರ್ಥಿ ಎಸ್. ರುದ್ರೇಗೌಡ ಅವರು ಮುನ್ನಡೆ ಸಾಧಿಸಿದ್ದಾರೆ ಎಂದಾಗ ಎರಡು ಪಕ್ಷಗಳ ಕಾರ್ಯಕರ್ತರು ಸಮಸ್ಯೆಗೀಡಾಗಿದ್ದರು.
  ನಂತರ ಅಂತಿಮವಾಗಿ ಸಂಜೆ 3.30ಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ಪ್ರಕಟಗೊಂಡಾಗ ಕೂಡಲೇ ಕಾಂಗ್ರೆಸ್ ಕಾರ್ಯಕರ್ತರ ಸಿಹಿ ಹಂಚಿ ಸಂಭ್ರಮಿಸಿದರು. ಇದನ್ನು ಕಂಡ ಕೆಜೆಪಿ ಕಾರ್ಯಕರ್ತರ ಮುಖಗಳು ಸಪ್ಪೆಯಾಗಿತ್ತು.
ನೂಕುನುಗ್ಗಲು, ಕಾಲ್ತುಳಿತ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಪೂರ್ಯಾನಾಯ್ಕ ಹಾಗೂ ಸೊರಬ ಕ್ಷೇತ್ರದ ಅಭ್ಯರ್ಥಿ ಮಧುಬಂಗಾರಪ್ಪ ಅವರು ಜಯಗಳಿಸಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಅಭ್ಯರ್ಥಿಗಳನ್ನು ಸ್ವಾಗತಿಸಲು ಕಾರ್ಯಕರ್ತರು ಓಡಿ ಬಂದರು.
ಈ ವೇಳೆ ಇಬ್ಬರು ಕಾರ್ಯಕರ್ತರು ಕೆಳಗೆ ಬಿದ್ದರೂ, ಇತರೆ ಕಾರ್ಯಕರ್ತರು ಮೇಲೆತ್ತುವ ಪ್ರಯತ್ನ ಮಾಡಲೇ ಇಲ್ಲ.
ಬದಲಿಗೆ ಅವರನ್ನೇ ತುಳಿದುಕೊಂಡು ಹೋಗುವ ಪ್ರಯತ್ನ ಮಾಡಿದರು. ನಂತರ ಪೊಲೀಸರು ಅವರ ನೆರವಿಗೆ ಬಂದರು.
   ಬೆಳಗಿನಿಂದ ಸಂಜೆಯ ವರೆಗೆ ಮಹಾವೀರ ವೃತ್ತ, ಬಸವೇಶ್ವರ ವೃತ್ತ, ಡಿಸಿ ಕಚೇರಿ ಎದುರಿನ ರಸ್ತೆ, ಗಾಂಧಿ ಪಾರ್ಕ್‌ಗಳು ಕಾರ್ಯಕ್ರಮ ಸಂಭ್ರಮ, ವಿಜಯೋತ್ಸವ, ದುಃಖದುಮ್ಮಾನಗಳಿಗೆ ಜಾಗ ಒದಗಿಸಿದ್ದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement