ಘಟಾನುಘಟಿಗಳ ಸೋಲು
ಶಿವಮೊಗ್ಗ: ಸೋತ ಪ್ರಮುಖರಲ್ಲಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪರಿಗೆ ಮೊದಲ ಸ್ಥಾನ. ಶಿವಮೊಗ್ಗ ಕ್ಷೇತ್ರದಲ್ಲಿ ಇವರ ಸೋಲು ಬಿಜೆಪಿಗೆ ಭಾರಿ ಅಘಾತ ನೀಡಿದೆ.
ಕಾಂಗ್ರೆಸ್ ಬಹು ನಿರೀಕ್ಷೆ ಇಟ್ಟುಕೊಂಡಿದ್ದ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರು ಭದ್ರಾವತಿಯಲ್ಲಿ ಸೋಲು ಕಂಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದೆ ಕೊನೆಯ ಕ್ಷಣದಲ್ಲಿ ಪಕ್ಷೇತರರಾಗಿ ಕಣಕ್ಕಿಳಿದು ಕೆಜೆಪಿ ಬೆಂಬಲ ಪಡೆದಿದ್ದ ಸಂಗಮೇಶ್‌ಗೆ ಗೆಲವು ಸಾಧ್ಯವಾಗಿಲ್ಲ.
ಕೆಜೆಪಿ ಅಭ್ಯರ್ಥಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ತೀರ್ಥಹಳ್ಳಿಯಲ್ಲಿ ಸೋಲು ಕಂಡಿದ್ದಾರೆ.
ಮತ್ತೆ ಮೇಲೇಳುವ ಪ್ರಯತ್ನ ನಡೆಸಿದ್ದ ಬಿಜೆಪಿಯ ಆರಗ ಜ್ಞಾನೇಂದ್ರ ಅವರಿಗೂ ಗೆಲವು ಸಿಕ್ಕಿಲ್ಲ. ಇನ್ನು ಕೊನೆಯ ಕ್ಷಣದಲ್ಲಿ ಜೆಡಿಎಸ ಟಿಕೆಟ್ ಪಡೆದು ಕಣಕ್ಕಿಳಿದಿದ್ದ ಬೇಳೂರು ಗೋಪಾಲಕೃಷ್ಣ ಅವರಿಗೆ ಸಾಗರ ಕ್ಷೇತ್ರದಲ್ಲಿ ಈ ಹಿಂದಿನ ಎರಡು ಚುನಾವಣೆಯಲ್ಲಿ ಆದಂತೆ ಸೋದರ ಮಾವ ಕಾಗೋಡು ತಿಮ್ಮಪ್ಪ ಅವರನ್ನು ಸೋಲಿಸಲು ಸಾಧ್ಯವಾಗಿಲ್ಲ.
--
ಬಂಪರ್ ಬೆಳೆ ಪಡೆದ ಜೆಡಿಎಸ್
ಶಿವಮೊಗ್ಗ: ಪ್ರಮುಖ ರಾಷ್ಟ್ರೀಯ ನಾಯಕರು ಮಾಡಿದ ಪ್ರವಾಸ ಬಿಜೆಪಿ ಪಾಲಿಗೆ ವಿಫಲವಾಗಿದ್ದರೆ, ಕಾಂಗ್ರೆಸ್ ಪಾಲಿಗೆ ಮಿಶ್ರಫಲ ನೀಡಿದೆ. ಜೆಡಿಎಸ್ ಮಾತ್ರ ಬಂಪರ್ ಜಯ ಸಾಧಿಸಿದೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಅವರು ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರಕ್ಕೆ, ಸುಶ್ಮಾ ಸ್ವರಾಜ್ ಹಾಗೂ ಅರುಣ್ ಜೇಟ್ಲಿ ಅವರು ಶಿವಮೊಗ್ಗಕ್ಕೆ, ಮುಖ್ಯಮಂತ್ರಿ ಜಗದೀಶ್ ಶ್ಟೆರ್ ಅವರು ಸೊರಬಕ್ಕೆ ಭೇಟಿ ನೀಡಿದ್ದರು. ಈ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಕಂಡಿದೆ.