ಬಿಜೆಪಿಯನ್ನು ನುಂಗಿದ ಕಾಂಗ್ರೆಸ್
ಶಿವಮೊಗ್ಗ: ಡಿಸಿಎಂ ಹುದ್ದೆ ಅಲಂಕೃತ ಈಶ್ವರಪ್ಪನವರನ್ನು ಕಾಂಗ್ರೆಸ್ ಹುರಿಯಾಳು ಕೆ.ಬಿ. ಪ್ರಸನ್ನಕುಮಾರ್ ಬಗ್ಗು ಬಡಿದಿದ್ದಾರೆ.
ಚುನಾವಣಾ ಪೂರ್ವದಲ್ಲಿ ಇನ್ನಿಲ್ಲದ ತಂತ್ರಗಾರಿಕೆ ನಡೆಸಿದ್ದ ಈಶ್ವರಪ್ಪ ಎಂಬ ಚಾಣಾಕ್ಷನ ಮುಂದೆ ಪ್ರಸನ್ನಕುಮಾರ್ ಬಾಲಕ. ಆದರೆ, ಬಿಜೆಪಿ ವಿರೋಧಿ ಅಲೆ ಬಳೆಸಿಕೊಂಡು ಸದ್ದಿಲ್ಲದೇ ಕ್ರಿಯಾಶೀಲ ಚಟುವಟಿಕೆ ನಡೆಸಿದ ಪ್ರಸನ್ನಕುಮಾರ್ ವಿಜಯಿಯಾಗಿದ್ದಾರೆ. ಅಷ್ಟೇ ಅಲ್ಲದೇ, ಈಶ್ವರಪ್ಪನವರನ್ನು ಮೂರನೇ ಸ್ಥಾನಕ್ಕೂ ತಳ್ಳಿ ಬಿಜೆಪಿ ಮುಟ್ಟಿನೋಡಿಕೊಳ್ಳುವಂತಹ ಹೊಡೆತ ಕೊಟ್ಟಿದ್ದಾರೆ.
ಈ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ನ ಕೆಲವು ಪ್ರಮುಖ ನಗರಸಭಾ ಸದಸ್ಯರೇ ಉಲ್ಟಾ ಹೊಡೆಯಲು ಆರಂಭಿಸಿದ್ದರು. ಪ್ರಚಾರ ವೇಳೆಯಂತೂ ಎದುರಾಳಿ ಪಕ್ಷದೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದು ಗುಟ್ಟಾಗಿ ಉಳಿದಿಲ್ಲ. ಈ ಮಧ್ಯೆ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆಂದು ಶಿವಮೊಗ್ಗದತ್ತ ಸುಳಿಯದಿದ್ದರೂ ಪ್ರಸನ್ನಕುಮಾರ್ ಮೊದಲಿಗರಾಗಿದ್ದು ವಿಶೇಷ.
ಇನ್ನೊಂದೆಡೆ ಯಡಿಯೂರಪ್ಪನವರು ಶಿಕಾರಿಪುರಕ್ಕೆ ಕೊಟ್ಟಷ್ಟೇ ಮಹತ್ವವನ್ನು ಶಿವಮೊಗ್ಗ ನಗರಕ್ಷೇತ್ರಕ್ಕೆ ಕೊಟ್ಟಿದ್ದು ವಿಶೇಷ. ಇಲ್ಲಿ ಕೆಜೆಪಿ ಬಾವುಟ ಹಾರಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದರು. ಒಟ್ಟಾರೆ ಈಶ್ವರಪ್ಪನವರನ್ನು ಸೋಲಿಸಬೇಕೆಂಬ ಯಡಿಯೂರಪ್ಪನವರ ಆಸೆಯನ್ನು ಕಾಂಗ್ರೆಸ್ ಶಾಸಕ ಪ್ರಸನ್ನಕುಮಾರ್ ಪೂರೈಸಿದರು.