ಅಧಿಕ ಅಂಕಗಳಿಸಲು ಏಕಾಗ್ರತೆ ಅಗತ್ಯ
ಶಿವಮೊಗ್ಗ: ಪ್ರಸ್ತುತ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧಾತ್ಮಕತೆ ಏರ್ಪಟ್ಟಿದ್ದು, ವಿದ್ಯಾರ್ಥಿಗಳು ಹೆಚ್ಚು ಅಂಕಗಳಿಸಲು ಅಧಿಕ ಶ್ರಮ ವಹಿಸಬೇಕಿದೆ ಎಂದು ಪೇಸೆಟ್ ಕಾಲೇಜಿನ ಉಪನ್ಯಾಸಕ ಎಚ್.ಆರ್. ಶಂಕರನಾರಾಯಣ ಶಾಸ್ತ್ರೀ ಹೇಳಿದರು.
ಪ್ರಗತಿ ಗ್ರಾಮೀಣ ಬ್ಯಾಂಕ್ ಮತ್ತು ನಮ್ಮ ಕನಸಿನ ಶಿವಮೊಗ್ಗ ಗುರುವಾರ ನಗರದಲ್ಲಿ ಆಯೋಜಿಸಿದ್ದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು, ಪರಿಶ್ರಮದಿಂದ ಮಾತ್ರ ಪ್ರತಿಭೆ ಹೊರಬರಲು ಸಾಧ್ಯ. ವಿದ್ಯಾರ್ಥಿಗಳಿಗೆ ಶಿಸ್ತು, ಏಕಾಗ್ರತೆ, ಛಲ ಮುಖ್ಯವಾಗಿದ್ದು, ಮುಂದಿನ ಗುರಿಗಳ ಬಗ್ಗೆ ದೀರ್ಘವಾಗಿ ಯೋಚಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಎಸ್ಎಸ್ಎಲ್ಸಿ ಪರೀಕ್ಷೆ ಎಂಬುದು ವಿದ್ಯಾರ್ಥಿಗಳ ಪ್ರಮುಖ ಘಟ್ಟ. ಇಲ್ಲಿ 600 ಕ್ಕೂ ಹೆಚ್ಚು ಅಂಕ ಪಡೆಯುವುದು ಕಷ್ಟದ ಮಾತು. ಆದರೆ, ಇಲ್ಲಿನ ವಿದ್ಯಾರ್ಥಿಗಳು ಅಂತಹ ಕಷ್ಟಗಳನ್ನು ಮೀರಿ 610, 625 ಅಂಕ ಪಡೆದಿರುವುದು ಸಂತೋಷದ ಸಂಗತಿ ಎಂದರು.
ಎಸ್ಎಸ್ಎಲ್ಎಲ್ಸಿ ನಂತರ ಮುಂದೇನ್ನೂ ಎಂಬ ಪ್ರಶ್ನೆ ಸಾಮಾನ್ಯವಾಗಿ ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಕಾಡುತ್ತದೆ. ಆದರೆ, ವಿದ್ಯಾರ್ಥಿಗಳು ಯಾರ ಒತ್ತಡಗಳಿಗೂ ಒಳಗಾಗದೇ ನೀವು ಇಷ್ಟ ಪಡುವ ವಿಷಯವನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಿ ಎಂದುಹಾರೈಸಿದರು.
ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಮಾತನಾಡಿ, ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ವ್ಯವಹಾರಿಕ ಸಂಸ್ಥೆಗಳಾಗಿ ಮಾರ್ಪಟ್ಟಿರುವುದು ದುರಂತ. ಪ್ರಾಚೀನ ಕಾಲದಲ್ಲಿ ಶಿಕ್ಷಣವೆಂಬುದು ಜ್ಞಾನಾರ್ಜನೆಗಾಗಿ ಇದ್ದದ್ದು, ನಂತರ ಹಣ ಸಂಪಾದಿಸುವ ಮಾರ್ಗವಾಗಿ ಬದಲಾಯಿತ್ತು.
ಆದರೆ, ಈಗ ಅದೊಂದು ವ್ಯವಹಾರವಾಗಿರುವುದು ವಿಷಾದನೀಯ ಎಂದ ಅವರು, ಈ ಕಾಲಘಟ್ಟದಲ್ಲಿಯೂ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಕಾರ್ಯಕ್ರಮದಲ್ಲಿ ಪ್ರಗತಿ ಗ್ರಾಮೀಣ ಬ್ಯಾಂಕ್ವ್ಯವಸ್ಥಾಪಕ ಭಾಸ್ಕರ್, ನಮ್ಮ ಕನಸಿನ ಶಿವಮೊಗ್ಗದ ಗೋಪಿನಾಥ್, ಅ.ನಾ. ವಿಜಯೇಂದ್ರ ರಾವ್ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.
--