ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ
ಸಾಗರ: ಕ್ಷೇತ್ರದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಮೊದಲು ಗಮನ ಹರಿಸಿ ಕ್ರಮ ಕೈಗೊಳ್ಳುವುದಾಗಿ ಶಾಸಕ ಕಾಗೋಡು ತಿಮ್ಮಪ್ಪ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣವೂ ಸೇರಿದಂತೆ ಇಡೀ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಈ ನಿಟ್ಟಿನಲ್ಲಿ ಇರುವ ಸೌಲಭ್ಯ ಬಳಸಿಕೊಳ್ಳಲು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕಿದೆ ಎಂದರು.
ಕೊಳವೆ ಬಾವಿ ಕೊರೆಯಲು ಜಿಲ್ಲಾಧಿಕಾರಿ ಬಳಿ ರು. 4ರಿಂದ 5 ಕೋಟಿ ಇದೆ. ಆದರೆ ಕೊಳವೆ ಬಾವಿ ನಿರ್ಮಾಣಕ್ಕೆ ಅಂತರ್ಜಲ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಬೇಕು ಎನ್ನುವ ಆದೇಶ ತೊಡಕಾಗಿ ಪರಿಣಮಿಸಿದೆ. ಇರುವ ಬಾವಿಗಳನ್ನು ಆಳ ಮಾಡಲೂ ಕೂಡಾ ಅವಕಾಶವಿದೆ ಎಂದರು.
ಇದಕ್ಕೆ ಚುನಾವಣಾ ನೀತಿ ಸಂಹಿತೆ ಅಡ್ಡ ಬಾರದಿದ್ದರೂ, ಜಿಲ್ಲಾಧಿಕಾರಿಗಳು ಕಳಿಸಿದ ಪಟ್ಟಿಗೆ ಮಂಜೂರಾತಿ ಕೊಡಲಿಲ್ಲ ಎಂದು ಆರೋಪಿಸಿದರು.
ಸದಸ್ಯರಿಗೆ ಸೂಚನೆ: ಉದ್ಯೋಗ ಖಾತ್ರಿ ಯೋಜನೆ ಪರಿಪೂರ್ಣ ಅನುಷ್ಟಾನಗೊಳಿಸಲು ಜಿಲ್ಲಾ ಹಾಗೂ ತಾಪಂ ಸದಸ್ಯರಿಗೆ ಸೂಚನೆ ನೀಡಲಾಗಿದೆ. ಇದರ ಜೊತೆಗೆ 94ಸಿ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಬಗರ್ ಹುಕುಂ ಸಕ್ರಮ, ಆಶ್ರಯ ಇನ್ನಿತರೆ ಯೋಜನೆ ಕಾಲಮಿತಿಯೊಳಗೆ ಫಲಾನುಭವಿಗಳಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ತುಮರಿ ಸೇತುವೆಗೆ ಈಗಾಗಲೇ ಮಂಜೂರಾತಿ ದೊರಕಿದ್ದು, ಸರ್ಕಾರದ ಮೇಲೆ ಒತ್ತಡ ತಂದು ಪ್ರಥಮ ಕಂತಿನಲ್ಲಿ ರು. 50 ಕೋಟಿ ಬಿಡುಗಡೆ ಮಾಡಿಸಿ, ಏಜೆನ್ಸಿ ನೇಮಿಸಿ ಕಾಮಗಾರಿ ಪ್ರಾರಂಭಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದರು.
ಶರಾವತಿ ಹಿನ್ನೀರಿನಿಂದ ನಗರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿ ಶೀಘ್ರವಾಗಿ ಮುಗಿಸಲು ಅಗತ್ಯವಾದ ಕ್ರಮವನ್ನು ಅಧಿಕಾರಿಗಳ ಜೊತೆ ಚರ್ಚಿಸಿ ಕೈಗೊಳ್ಳಲಾಗುವುದು ಎಂದರು.
ನಿರ್ದಾಕ್ಷಿಣ್ಯ ಕ್ರಮ: 2011-12, 2012-13ನೇ ಸಾಲಿನಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಶಂಕೆ ಇದ್ದು, ಮಾಹಿತಿ ಹಕ್ಕಿನಡಿ ಈಗಾಗಲೇ ಖರ್ಚುವೆಚ್ಚ, ಬಳಸಿದ ಅನುದಾನ ಕುರಿತು ಮಾಹಿತಿ ಕೇಳಲಾಗಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೂಳ್ಳಲಾಗುವುದು ಎಂದರು.
ಮುಖ್ಯಮಂತ್ರಿ ಆಯ್ಕೆ ಪಕ್ಷದ ಆಂತರಿಕ ವಿಚಾರವಾಗಿದ್ದು, ಅದನ್ನು ಹೊರಗೆ ಚರ್ಚಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪಕ್ಷದ ಹಿರಿಯ ಕಾರ್ಯಕರ್ತನಾಗಿ, ಕಿರಿಯರಿಗೆ ಮಾರ್ಗದರ್ಶನ ಮಾಡುವ ಸ್ಥಾನದಲ್ಲಿದ್ದು, ಇಂತಹ ವಿಚಾರ ಕುರಿತು ಪ್ರತಿಕ್ರಿಯಿಸುವುದು ಸರಿಯಲ್ಲ. ಪಕ್ಷ ಯಾವುದೇ ಸ್ಥಾನ ನೀಡಿದರೂ ತಮಗೆ ನಿಭಾಯಿಸುವ ಸಾಮರ್ಥ್ಯ ಇದೆ ಎಂದು ಹೇಳಿದರು. ವಿಪ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ತೀ.ನ. ಶ್ರೀನಿವಾಸ್, ಮಕ್ಬುಲ್ ಅಹಮದ್, ಹೊಳಿಯಪ್ಪ, ಭೀಮನೇರಿ ಶಿವಪ್ಪ , ಸುರೇಶಬಾಬು ಮೊದಲಾದವರು ಹಾಜರಿದ್ದರು.