ಕಾಂಗ್ರೆಸ್ ಯಶಸ್ಸು ತಾತ್ಕಾಲಿಕ
ಕಪ್ರವಾರ್ತೆ,ಶಿವಮೊಗ್ಗ, ಮೇ 10
ಕಾಂಗ್ರೆಸ್ಗೆ ಸಿಕ್ಕಿರುವ ಯಶಸ್ಸು ತಾತ್ಕಾಲಿಕ ಮಾತ್ರ. ಕಾರ್ಯಕರ್ತರು ದೃತಿಗೆಡಬೇಕಿಲ್ಲ. ಈಗ ನಮ್ಮ ಗುರಿ ಲೋಕಸಭೆ ಚುನಾವಣೆ ಅದಕ್ಕೆ ಸಜ್ಜಾಗೋಣ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶುಕ್ರವಾರ ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯ ಸಾಧನೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿ ಮತದಾರರು ಇನ್ನಷ್ಟು ಸ್ಥಾನಗಳನ್ನು ನೀಡಲಿದ್ದಾರೆ ಎಂಬ ಭರವಸೆ ನಮಗಿತ್ತು. ಆದರೆ, ಪಕ್ಷದಲ್ಲಿನ ಗೊಂದಲ, ಭಿನ್ನಮತದಿಂದಾದ ಮತ ವಿಭಜನೆ ನಮ್ಮ ಸೋಲಿಗೆ ಕಾರಣವಾಯಿತು. ಆದರೆ ಸೋಲಿಗೆ ನಾವು ಬೆನ್ನು ತೋರಿಸುವುದಿಲ್ಲ ಎಂದರು.
ಬಿಜೆಪಿಯು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಟ್ಟಿರುವ ಪಕ್ಷ. ಈ ಹಿಂದೆ ಚುನಾವಣೆಯಲ್ಲಿ 110 ಸ್ಥಾನಗಳನ್ನು ತನ್ನ ಹೋರಾಟ, ಸಿದ್ಧಾಂತದಿಂದ ಪಡೆದಿತ್ತು. ಆದರೆ, ಈಗ ಕಾಂಗ್ರೆಸ್ 121 ಸ್ಥಾನ ಗಳಿಸಿರುವುದು ಮತ ವಿಭಜನೆ, ನಮ್ಮ ಪಕ್ಷದ ಗೊಂದಲದಿಂದ ಸಿಕ್ಕಿದೆಯೇ ಹೊರತು ಆ ಪಕ್ಷದ ಸಿದ್ಧಾಂತದ ಕಾರಣದಿಂದಲ್ಲ. ಸ್ವಂತ ಶಕ್ತಿಯಿಂದಲ್ಲ ಎಂದರು.
ಬಿಎಸ್ವೈ ಸಾಧನೆ ಏನು: ಹೊಸ ಪಕ್ಷವನ್ನು ಕಟ್ಟಿ ಯಡಿಯೂರಪ್ಪ ಅವರು ಮಾಡಿದ ಸಾಧನೆಯಾದರೂ ಏನು 6 ಸ್ಥಾನಗಳನ್ನು ಗೆಲ್ಲಲು ಇಷ್ಟೆಲ್ಲಾ ಮಾಡಬೇಕಿತ್ತೇ ಎಂದು ಪ್ರಶ್ನಿಸಿದ ಅವರು, ಕರ್ನಾಟಕ ಜನತಾ ಪಕ್ಷವನ್ನು ಯಡಿಯೂರಪ್ಪ ಅವರು ಕಟ್ಟಿದ್ದಲ್ಲ. ಕಾಂಗ್ರೆಸ್ ಪಕ್ಷದ ಕುತಂತ್ರದಿಂದ ಈ ಪಕ್ಷ ಹುಟ್ಟಿತು ಎಂದರು.
ಬಿಜೆಪಿಗೆ ಮತ ನೀಡದೇ ತಪ್ಪು ಮಾಡಿದ್ದೇವೆ ಎಂದು ಜನರಿಗೆ ಈಗ ಗೊತ್ತಾಗಿದೆ ಎಂದ ಅವರು, ಕೆಜೆಪಿಯ ಬಹಳಷ್ಟು ಜನರು ಬಿಜೆಪಿಗೆ ವಾಪಸಾಗುವುದರಲ್ಲಿ ಅನುಮಾನವಿಲ್ಲ. ಮುಂದಿನ ದಿನಗಳಲ್ಲಿ ಹಳಬರು, ಹೊಸಬರು ಎಂದುಕೊಳ್ಳದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಕಟ್ಟೋಣ ಎಂದರು.
ಬಿಜೆಪಿಗೆ ಸೋಲು ಹೊಸದಲ್ಲ. ಮುಂದಿನ ದಿನಗಳಲ್ಲಿ ಹೋರಾಟವನ್ನು ಮಾಡೋಣ. ಕಾಂಗ್ರೆಸ್ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದ ವಿಷಯಗಳನ್ನು ಜಾರಿ ಮಾಡುವುದಕ್ಕೆ ಸಮಯಾವಕಾಶ ಕೊಡೋಣ. ನಂತರ ಹೋರಾಟ ಮಾಡೋಣ ಎಂದರು.
ಬೆಂಗಳೂರಲ್ಲಿ ಸಭೆ: ಪಕ್ಷದ ಎಲ್ಲಾ ನಾಯಕರು ಬೆಂಗಳೂರಿನಲ್ಲಿ ಮೇ 14, 15ರಂದು ಸಭೆ ಸೇರಲಿದ್ದಾರೆ. ಜಿಲ್ಲಾ ಸಮಿತಿಗಳು ನೀಡಿದ ಸಲಹೆಗಳನ್ನು ಅಲ್ಲಿ ಚರ್ಚಿಸಲಾಗುವುದು. ಚುನಾವಣೆ ಮುಗಿದಿದೆ. ಮುಂದೇನು ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಜಿಲ್ಲಾಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ, ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್ ಇದ್ದರು.