ಗೊಂದಲದಲ್ಲೇ ಆರಂಭವಾದ ಪ್ರಾಯೋಗಿಕ ಪರೀಕ್ಷೆ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 10
ಇದೇ ಮೊದಲ ಬಾರಿಗೆ ಕೃಷಿ ಹಾಗೂ ಕೃಷಿ ಸಂಬಂಧಿ ಪದವಿಗಾಗಿ ಏಕೀಕೃತ ಪ್ರವೇಶ ಪರೀಕ್ಷೆ ನಡೆದಿದ್ದು, ಈ ಸಂಬಂಧ ಪ್ರಾಯೋಗಿಕ ಪರೀಕ್ಷೆಯು ನಗರದಲ್ಲಿ ಶುಕ್ರವಾರ ಗೊಂದಲದ ನಡುವೆಯೇ ಆರಂಭವಾಯಿತು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬೆಳಗ್ಗೆ 8.30ರ ವೇಳೆಗಾಗಲೇ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ನೆರೆದಿದ್ದರು. ಆದರೆ ಕೃಷಿಕ ಪ್ರಮಾಣ ಪತ್ರ ತಾರದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಯಿತು. ಆಗ ಪೋಷಕರು ಸ್ಥಳದಲ್ಲೇ ಪ್ರತಿಭಟನೆ ಆರಂಭಿಸಿದರು. ಚುನಾವಣೆಯ ಕಾರಣ ತಹಸೀಲ್ದಾರರಿಂದ ನಿಗದಿತ ಸಮಯದಲ್ಲಿ ಪ್ರಮಾಣ ಪತ್ರ ತರಲು ಆಗಿಲ್ಲ. ಈ ಪ್ರಮಾಣ ಪತ್ರ ಸಲ್ಲಿಸಲು ಇನ್ನಷ್ಟು ಸಮಯಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
2200 ಅಧಿಕಾರಿಗಳಿಗೆ ಅವಕಾಶ: ಆಗ ಕೃಷಿ ವಿವಿ ಅಧಿಕಾರಿಗಳು ಇದೇ ತಿಂಗಳು 20ನೇ ತಾರೀಕಿನ ವರೆಗೂ ಪ್ರಮಾಣ ಪತ್ರ ಸಲ್ಲಿಸಲು ಅವಕಾಶ ನೀಡಿ ಬಂದ 2,200 ವಿದ್ಯಾರ್ಥಿಗಳಿಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು. ಕೃಷಿ, ಪಶುವೈದ್ಯ, ಮೀನುಗಾರಿಕೆ, ಅರಣ್ಯ, ತೋಟಗಾರಿಕೆ ಇತ್ಯಾದಿ ಕೃಷಿ ಸಂಬಂಧಿ ಪದವಿಗಳ ಪ್ರವೇಶಕ್ಕಾಗಿ ಈ ಪರೀಕ್ಷೆ ನಡೆದಿದೆ.
ಪೋಷಕರಿಗೆ ಸಮುದಾಯ ಭವನದ ಹೊರಗೆ ಕುಳಿತುಕೊಳ್ಳಲು ಕುರ್ಚಿ, ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಆರಂಭದ ಗೊಂದಲ ಹೊರತುಪಡಿಸಿದರೆ ನಂತರ ಪ್ರಾಯೋಗಿಕ ಪರೀಕ್ಷೆಯು ಸರಾಗವಾಗಿ ನಡೆಯಿತು.
ಹೀಗಿತ್ತು ಪರೀಕ್ಷೆ: ಆದಿಚುಂಚನಗಿರಿ ಸಮುದಾಯ ಭವನದ ಭೋಜನ ಸ್ಥಳದಲ್ಲಿದ್ದ ಟೇಬಲ್ಗಳ ಮೇಲೆ ಬೀಜ, ಎಲೆ, ಗಿಡ, ರಾಸುಗಳ ಫೋಟೋ ಇತ್ಯಾದಿಗಳ 50 ಮಾದರಿಗಳನ್ನು 5 ಸಾಲುಗಳಲ್ಲಿ ಅಳವಡಿಸಲಾಗಿತ್ತು. ಒಟ್ಟಿಗೆ ಐದು ವಿದ್ಯಾರ್ಥಿಗಳನ್ನು ಇಲ್ಲಿಗೆ ಬಿಡಲಾಗುತ್ತಿತ್ತು. 30 ಸೆಕೆಂಡ್ಗಳಲ್ಲಿ ಅವರು ಮಾದರಿಗಳನ್ನು ಗಮನಿಸಿ ತಮಗೆ ನೀಡಿದ್ದ ಉತ್ತರ ಪತ್ರಿಕೆಯ ಮೇಲೆ ಹೆಸರುಗಳನ್ನು ನಮೂದಿಸಬೇಕಿತ್ತು.
ಹೀಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಬೇರೆ ಮಾರ್ಗದಿಂದ ಹೊರಗೆ ಹೋಗುತ್ತಿದ್ದರು. ಸ್ಥಳದಲ್ಲಿ ಸಿಸಿ ಕ್ಯಾಮರಾಗಳನ್ನೂ ಸಹ ಅಳವಡಿಸಲಾಗಿತ್ತು. ಅಲ್ಲದೇ ಮೊಬೈಲ್ ಜಾಮರ್ ಸಹ ಇದ್ದು, ಪಾರದರ್ಶಕವಾಗಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಶಿವಮೊಗ್ಗ ಕೃಷಿ ವಿವಿ ಶೈಕ್ಷಣಿಕ ನಿರ್ದೇಶಕ ಡಾ. ಕುಮಾರಸ್ವಾಮಿ “OÚ«ÚsÚ®ÚúڒOæQ ಹೇಳಿದರು.
ಆಯ್ಕೆ ಹೀಗೆ: ಕೃಷಿಕ ಕುಟುಂಬದ ವಿದ್ಯಾರ್ಥಿಗಳಿಗೆ ರಾಯಚೂರು ಹೊರತುಪಡಿಸಿ ರಾಜ್ಯದ ಕೃಷಿ ವಿವಿಗಳಲ್ಲಿ ಶೇ.23.8ರಷ್ಟು ಮೀಸಲಾತಿ ಇದೆ. ಪಿಯುಸಿ ಪರೀಕ್ಷೆ ಹಾಗೂ ಸಿಟಿಟಿ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕ ಹಾಗೂ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕದ ಸರಾಸರಿಯನ್ನು ಪರಿಗಣಿಸಿ ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ರ್ಯಾಂಕಿಂಗ್ ನೀಡಲಾಗುವುದು.
ಶಿವಮೊಗ್ಗ, ಬೆಂಗಳೂರು, ಬಾಗಲಕೋಟೆ, ಬೀದರ್, ಧಾರವಾಡದಲ್ಲಿ ಏಕಕಾಲದಲ್ಲಿ ಈ ಪರೀಕ್ಷೆ ಶುಕ್ರವಾರ ನಡೆದಿದೆ. ಆನ್ಲೈನ್ ಕೌನ್ಸೆಲಿಂಗ್ ಸಂದರ್ಭದಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳು ತಮಗೆ ಬೇಕಾದ ಊರಿನ ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದಾದ ಅವಕಾಶವಿರುತ್ತದೆ.