ದೊರೆಯದ ಸ್ಟ್ಯಾಂಪ್: ಜನರ ಪರದಾಟ
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 10
ಮಳೆ ನಿಂತರೂ ಮರದ ಮೇಲಿನ ಹನಿ ಮಾತ್ರ ನಿಂತಿಲ್ಲ.., ಚುನಾವಣೆ ಕಳೆದು ಅಭ್ಯರ್ಥಿಗಳ ಅಯ್ಕೆ ಪ್ರಕ್ರಿಯೆ ಮುಗಿದಿದೆ. ಆದರೆ, ಚುನಾವಣಾ ನೀತಿ ಸಂಹಿತೆಯ ಭೂತ ಸಾರ್ವಜನಿಕ ವಲಯದಿಂದ ಹೊರ ಬಂದಿಲ್ಲ. ಇದಕ್ಕೊಂದು ಸ್ಪಷ್ಟ ಉದಾಹರಣೆ ಎಂದರೇ ಭಾರತೀಯ ಅಂಚೆ ಇಲಾಖೆ. ಹೌದು, ಸಾರ್ವಜನಿಕರ ಪತ್ರ ವ್ಯವಹಾರಕ್ಕೆ ಮೂಲ ಆಧಾರವಾಗಿರುವ ಸ್ಟ್ಯಾಂಪ್ಗಳು ಸಿಗದೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಚುನಾವಣೆ ವೇಳೆ ಅಕ್ರಮವಾಗಿ ಹಣ ಸಾಗಾಣಿಕೆ ಆಗಬಾರದು ಎಂಬ ದೃಷ್ಟಿಯಿಂದ ಚುನಾವಣಾ ಆಯೋಗ ಸ್ಟಾಪ್ಗಳ ಚಲಾವಣೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಿತ್ತೆಂದು ಇಲಾಖೆ ಮೂಲಗಳು ತಿಳಿಸುತ್ತಿವೆ. ಇದಕ್ಕೆ ಪೂರಕವಾಗಿ ನಾಸಿಕದಲ್ಲಿರುವ ಸೆಕ್ಯೂರಿಟಿ ಪ್ರೆಸ್ ಸ್ಟ್ಯಾಂಪ್ಗಳನ್ನು ಸ್ಥಳೀಯ ಅಂಚೆ ಕಚೇರಿಗಳಿಗೆ ಕಳುಹಿಸುತ್ತಿಲ್ಲ.
ಇದೇನು ಚುನಾವಣಾ ಆಯೋಗದ ಲಿಖಿತ ಆದೇಶವಲ್ಲ. ಈ ಹಿಂದೆ ಚುನಾವಣೆ ವೇಳೆ ಅಂಚೆ ಇಲಾಖೆ ಮೂಲಕವೇ ಹಣ ಕಳಿಸಿದ ದೂರುಗಳ ಹಿನ್ನಲೆಯಲ್ಲಿ ಈ ಅಲಿಖಿತ ಆದೇಶ ಜಾರಿಯಾಗಿದೆ. ಉದಾಹರಣೆಗೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬ 1 ಲಕ್ಷಕ್ಕೆ ಸುಮಾರು 20 ಸಾವಿರ ಪೋಸ್ಟಲ್ ಕವರ್ಗಳನ್ನು ಖರೀದಿ ಮಾಡುತ್ತಾನೆ. ಅದಕ್ಕೆ ಸ್ಟ್ಯಾಂಪ್ಗಳನ್ನು ಅಂಟಿಸಿ ಅಂಚೆ ಡಬ್ಬದೊಳಗೆ ಹಾಕುತ್ತಾರೆ. ಇದರ ವೆಚ್ಚವನ್ನು ಚುನಾವಣಾ ಆಯೋಗಕ್ಕೆ ಅಭ್ಯರ್ಥಿಗಳು ಕೊಡುವುದಿಲ್ಲ.
ಆದ್ದರಿಂದ ಅಂಚೆ ಸ್ಟ್ಯಾಂಪ್ಗಳ ಚಲಾವಣೆಯನ್ನು ಏಪ್ರಿಲ್ 25 ರಿಂದಲೇ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸುತ್ತಿವೆ. ಇದೇನೇ ಇದ್ದರೂ ಸ್ಟ್ಯಾಂಪ್ಗಳು ಸಿಗದೆ ಜನಸಾಮಾನ್ಯರಿಗೂ ಭಾರಿ ಸಮಸ್ಯೆಯಾಗಿದೆ.
ಪರ್ಯಾಯ ವ್ಯವಸ್ಥೆ: ಕೇಂದ್ರ ಚುನಾವಣಾ ಆಯೋಗದ ಈ ನಿಯಮದಿಂದ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮಕೈಗೊಳ್ಳಲು ಕೇಂದ್ರ ಅಂಚೆ ಇಲಾಖೆ ಫ್ರಾಕಿಂಗ್ ಮೆಷನ್ನ್ನು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ನೀಡಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ವಾಸ್ತವವಾಗಿ ಈ ರೀತಿಯ ಫ್ರಾಂಕಿಂಗ್ ಮೆಷನ್ ಇರುವುದು ಜಿಲ್ಲಾ ಕೇಂದ್ರದಲ್ಲಿ ಮಾತ್ರ. ತಾಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಫ್ರಾಂಕಿಂಗ್ ಮೆಷನ್ಗಳು ಇಲ್ಲ. ಈ ಮೆಷನ್ನಲ್ಲಿ 25 ಪೈಸೆಯಿಂದ 999 ರುಪಾಯಿವೆರೆಗಿನ ಎಲ್ಲಾ ರೀತಿಯ ಸ್ಟ್ಯಾಂಪ್ಗಳನ್ನು ಫ್ರಾಂಕ್ ಮಾಡಲಾಗುತ್ತದೆ. ಈ ಮೂಲಕ ಪ್ರತಿ ಪತ್ರಗಳ ಮೇಲೆ ಈ ಯಂತ್ರದಿಂದ ಸ್ಟ್ಯಾಂಪ್ಗಳನ್ನು ಮುದ್ರಿಸಿ ಪ್ರತಿ ಪತ್ರಕ್ಕೂ ಸ್ವೀಕೃತಿ ರಸೀದಿ ನೀಡಲಾಗುತ್ತದೆ. ಸಾಮಾನ್ಯವಾಗಿ ಬೃಹತ್ ಪ್ರಮಾಣದ ಅಂಚೆ ಕಾಗದ ಬಳಸುವ ಜೀವವಿಮಾ ನಿಗಮದಂತಹ ಸಂಸ್ಥೆಗಳಿಗೆ ಫ್ರಾಂಕಿಂಗ್ ಯಂತ್ರಗಳನ್ನು ನೀಡಲಾಗುತ್ತದೆ. ಖಾಸಗಿ ವ್ಯಕ್ತಿಗಳಿಗೆ ಸಿಗುವುದಿಲ್ಲ. ಇಷ್ಟು ದಿನಗಳ ಕಾಲ ಸ್ಟ್ಯಾಂಪ್ ಸಿಗದಿರುವುದಕ್ಕೆ ಚುನಾವಣೆಯ ಕಾರಣ ಹೇಳಲಾಯಿತು. ಕೊರಿಯರ್ ಸಂಸ್ಥೆಗಳು ಇನ್ನಷ್ಟು ಲಾಭ ಮಾಡಿಕೊಳ್ಳುವ ಮುನ್ನ ಅಂಚೆ ಇಲಾಖೆ ಕಣ್ತೆರೆದು ಸಾಮಾನ್ಯ ಜನರ ಸಮಸ್ಯೆಗಳನ್ನು ನಿವಾರಿಸಲಿ ಎಂದು ಒತ್ತಾಯಿಸಿದ್ದಾರೆ.
-ಮೋಹನ್ ಕುಮಾರ್ ಎನ್.