ಸರಿಯಾದ ಸಮಯಕ್ಕೆ ಅಭ್ಯರ್ಥಿ ಘೋಷಿಸದಿರುವುದೇ ಸೋಲಿಗೆ ಕಾರಣ
ಸೊರಬ: ಸರಿಯಾದ ವೇಳೆಗೆ ಅಭ್ಯರ್ಥಿಯ ಘೋಷಣೆ ಮಾಡದಿರುವುದು ಬಿಜೆಪಿ ಅಭ್ಯರ್ಥಿ ಸೋಲಿಗೆ ಕಾರಣ ಎಂದು ಜಿಪಂ ಸದಸ್ಯ ಹುನವಳ್ಳಿ ಗಂಗಾಧರಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೊರೆತ ಅಲ್ಪಾವಧಿ ಸಮಯದಲ್ಲಿಯೇ ಪ್ರಚಾರ ಕೈಗೊಂಡಿದ್ದೇವೆ. ಆದಾಗ್ಯೂ ಪ್ರತಿ ಮತದಾರರನ್ನು ಭೇಟಿ ಮಾಡಲಾಗಿಲ್ಲ. ಸಮರ್ಥ ಅಭ್ಯರ್ಥಿ ಕೊರತೆ, ವಿಪಕ್ಷ ಅಭ್ಯರ್ಥಿ ಪಕ್ಷದ ಬಗ್ಗೆ ಅಪಪ್ರಚಾರ ನಡೆಸಿದ್ದರಿಂದ ಮತದಾರರಲ್ಲಿ ಗೊಂದಲವುಂಟಾಗಿ ಸೋಲಿನ ಕಹಿ ಉಣ್ಣಬೇಕಾಯಿತು. ಇದರಿಂದ ಪಕ್ಷದ ಕಾರ್ಯಕರ್ತರು ಎದೆಗುಂದುವ ಅವಶ್ಯಕತೆಯಿಲ್ಲ. ಮುಂಬರುವ ಲೋಕಸಭಾ ಚುನಾವಣಾ ಸಮಯಕ್ಕೆ ಪಕ್ಷವನ್ನು ಸಂಘಟಿಸುವತ್ತ ಕ್ರಿಯಾಶೀಲರಾಗೋಣ ಎಂದು ಹೇಳಿದರು.
ಪಕ್ಷದಲ್ಲೇ ಇರುತ್ತೇನೆ: ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ತಾವು ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವ ಪ್ರಶ್ನೆಯಿಲ್ಲ. ಇಲ್ಲೇ ಉಳಿದು ಸಂಘಟಿಸುವ ಕಾರ್ಯದಲ್ಲಿ ಸಂಪೂರ್ಣ ತೊಡಗಿಕೊಳ್ಳುತ್ತೇನೆ, ಮುಂದಿನ ದಿನಗಳಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ರಾಜಕೀಯ ನಿವೃತ್ತಿ ಹೊಂದುವವನಿದ್ದು, ಉಳವಿ ಜಿಪಂ ಕ್ಷೇತ್ರದ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈ ಬಗ್ಗೆ ನಿರ್ಣಯಿಸಲಾಗುವುದು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಈಶ್ವರಪ್ಪ ಚೆನ್ನಪಟ್ಣ ಮಾತನಾಡಿ, ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ತಿಳಿಸಿದರು.
ಸಾಗರ ಎಪಿಎಂಸಿ ಅಧ್ಯಕ್ಷ ಸಿ.ಪಿ. ಮಂಜಪ್ಪ, ತಾಳಗುಪ್ಪ ಹೋಬಳಿ ಮುಖಂಡ ಗಣಪತಿ, ಅಶೋಕ್, ಮಹಿಳಾ ಮೋರ್ಚಾ ಅಧ್ಯಕ್ಷೆ ಚಂದ್ರಕಲಾ, ಪ್ರಧಾನ ಕಾರ್ಯದರ್ಶಿ ಎಂ.ಕೆ. ಯೋಗೇಶ್, ಎಪಿಎಂಸಿ ಅಧ್ಯಕ್ಷ ಗಜಾನನರಾವ್, ಮುಖಂಡರಾದ ಅಣ್ಣಾಜಿಗೌಡ, ಎಂ. ನಾಗಪ್ಪ ವಕೀಲ್, ಹುಚ್ಚರಾಯಪ್ಪ, ಶ್ರೀಧರಾಚಾರ್, ಜಿಲ್ಲಾ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಅನ್ಸರ್, ಗುರುಸ್ವಾಮಿ ಇದ್ದರು.