16ರಿಂದ 3ನೇ ಸಂಗೀತ ಸಮ್ಮೇಳನ
ಕ.ಪ್ರ.ವಾರ್ತೆ , ಶಿವಮೊಗ್ಗ , ಮೇ 11
ಸಂಕೇತಿ ಸಂಗೀತಸಭಾ ಹೊಸಹಳ್ಳಿಯಲ್ಲಿರುವ ಗಮಕ ಭವನದಲ್ಲಿ ಮೇ 16ರಿಂದ 19ರವರೆಗೆ 3ನೇ ಸಂಗೀತ ಸಮ್ಮೇಳನ ಹಮ್ಮಿಕೊಂಡಿದೆ ಎಂದು ಸಂಕೇತಿ ಸಂಗೀತ ಸಭಾದ ಅಧ್ಯಕ್ಷ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಹೊಸಹಳ್ಳಿ ಕೆ. ವೆಂಕಟರಾವ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕೇತಿ ಸಂಗೀತ ಸಭಾ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಸಂಕೇತಿಸಭಾ ಮೂರನೇ ಸಂಗೀತ ಸಮ್ಮೇಳನ ಆಯೋಜಿಸಿದ್ದು, ವಿದ್ವಾನ್ ಸುಕನ್ಯಾ ಪ್ರಭಾಕರ್ ಅವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಡಿದೆ ಎಂದರು.
ಮೇ 16ರ ಬೆಳಿಗ್ಗೆ 10.30ಕ್ಕೆ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಭೀಮೇಶ್ವರ ಜೋಷಿ ಸಂಗೀತ ಸಮ್ಮೇಳನ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಕೆ.ಆರ್. ರಾಮಕೃಷ್ಣ ಅಧ್ಯಕ್ಷತೆ ವಹಿಸುವರು. ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿಕಾಶಿ ಉಪಸ್ಥಿತರಿರುವರು ಎಂದು ವಿವರಿಸಿದರು.
ಕಾರ್ಯಕ್ರಮ ವಿವರ: 16ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ಯಾಕ್ಸೋಫೋನ್, ಪ್ರಾತ್ಯಕ್ಷಿಕೆ, ಹಾಡುಗಾರಿಕೆ ಕಾರ್ಯಕ್ರಮ ನಡೆಯುವುದು. ವಿ. ಶ್ರೀಧರ್ ಸಾಗರ್, ವಿ. ವಿವೇಕಕೃಷ್ಣ, ವಿಣ ರಾಜೀವ, ವಿ. ಆರ್.ಎಸ್. ನಂದಕುಮಾರ್, ವಿ. ಗೀತಾವೆಂಕಟೇಶ್, ವಿ. ಮಧುಮುರಳಿ, ವಿ. ವೆಂಕಟರಮಣ, ವಿ. ಡಾ. ಸುಕನ್ಯಾ ಪ್ರಭಾಕರ್, ವಿ. ಟಿ.ಎಸ್. ಕೃಷ್ಣಮೂರ್ತಿ, ವಿ. ಕೆ.ಯು. ಜಯಚಂದ್ರರಾವ್, ವಿ. ಜಿ.ಎಸ್. ರಾಮಾನುಜಂ ಕಾರ್ಯಕ್ರಮ ಪ್ರಸುತ್ತಪಡಿಸುವರು.
ಮೇ 17ರಂದು ಸಂಗೀತ ಕಾರ್ಯಕ್ರಮ ಬೆಳಿಗ್ಗೆಯಿಂದ ಆರಂಭವಾಗಲಿದ್ದು, 10 ಗಂಟೆಗೆ ಕಾರ್ಯಾಗಾರ, ಸಂಜೆ 4ಗಂಟೆಗೆ ಪ್ರಾತ್ಯಕ್ಷಿಕೆ, 5ಗಂಟೆಗೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸಂಜೆ 6ರಿಂದ ವಯೊಲಿನ್ ತ್ರಯ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ವಿದ್ವಾನ್ ಹೊಸಹಳ್ಳಿ ಕೆ. ಸುಬ್ಬರಾವ್, ಹೊಸಹಳ್ಳಿ ವಿ. ರಘುರಾಮ್, ಹೊಸಹಳ್ಳಿ ಕೆ. ವೆಂಕಟರಾಮ್ ಭಾಗವಹಿಸಲಿದ್ದು, ಮೃದಂಗದಲ್ಲಿ ವಿ. ಮೂಷ್ಣಂ ರಾಜಾರಾವ್, ಘಟಂನಲ್ಲಿ ವಿ. ತಿರುಚ್ಚಿ ಆರ್. ಕುಮಾರ್ ಸಹಕಾರ ನೀಡುವರು.
ಮೇ 18ರಂದು ಸಮ್ಮೇಳನದ ಅಧ್ಯಕ್ಷೆ ವಿ. ಡಾ. ಸುಕನ್ಯಾ ಪ್ರಭಾಕರ್ ನೇತೃತ್ವದಲ್ಲಿ ಕಾರ್ಯಾಗಾರ ನಡೆಯುವುದು. ಸಂಜೆ 4 ಗಂಟೆಗೆ ಶ್ರೀಕಾಂತಂ ನಾಗೇಂದ್ರಶಾಸ್ತ್ರಿ ಪ್ರಾತ್ಯಕ್ಷಿಕೆ ನಡೆಸಿಕೊಡುವರು.
ಸಂವಾದ: 19ರಂದು ಭಾನುವಾರ ಬೆಳಿಗ್ಗೆ 9ರಿಂದ 1ಗಂಟೆಯವರೆಗೆ ಸಂವಾದ ನಡೆಯಲಿದ್ದು, ಆರ್.ಎಸ್. ನಂದ ಕುಮಾರ್ ಹೊತ್ತರೆ, ಆರ್.ಕೆ. ಪದ್ಮನಾಭ್, ಡಾ.ಎಂ. ಸೂರ್ಯಪ್ರಸಾದ್ ಪಾಲ್ಗೊಳ್ಳುವರು. ಸಂಜೆ 6-30ಕ್ಕೆ ಸಮಾರೋಪ ನಡೆಯಲಿದ್ದು, ಮಾರ್ಕಂಡೇಯ ಅವಧಾನಿ ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪದ್ಮಶ್ರೀ ವಿ.ಆರ್.ಗೌರಿಶಂಕರ್, ವಿ. ಆರ್.ಕೆ. ಪದ್ಮನಾಭ ಉಪಸ್ಥಿತರಿರುವರು.
ಸಂಗೀತ ಸ್ಪರ್ಧೆ: ಸಂಕೇತಿ ಸಂಗೀತ ಸಭಾದ ವತಿಯಿಂದ ಮೇ 12ರಿಂದ 15ರ ವರೆಗೆ ರಾಜ್ಯಮಟ್ಟದ ಯುವ ಸಂಗೀತ ಸ್ಪರ್ಧೆ ಆಯೋಜಿಸಲಾಗಿದೆ. ರಾಜ್ಯದ ವಿವಿಧೆಡೆಯಿಂದ ಯುವ ಸಂಗೀತ ಹಾಡುಗಾರರು ಭಾಗವಹಿಸಲಿದ್ದಾರೆ.
ವಿಜೇತರಿಗೆ ಕ್ರಮವಾಗಿ ಮೊದಲ ಬಹುಮಾನ 5 ಸಾವಿರ, 2ನೇ ಬಹುಮಾನ 4 ಸಾವಿರ, 3ನೇ ಬಹುಮಾನ 3 ಸಾವಿರ, 4ನೇ ಬಹುಮಾನ 2 ಸಾವಿರ ಮತ್ತು 5ನೇ ಬಹುಮಾನ 1 ಸಾವಿರವನ್ನು ನೀಡಲಾಗುವುದು. ಮೊದಲ ಬಹುಮಾನ ಪಡೆದ ವಿಜೇತರಿಂದ ಲಹರಿ ರೆಕಾರ್ಡಿಂಗ್ ಕಂಪನಿಯ ಸಹಕಾರದಲ್ಲಿ ಸಿಡಿ ಹೊರತರಲಾಗುವುದು ಎಂದು ವೆಂಕಟರಾಮ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹೊಸಹಳ್ಳಿ ವಿ. ಜೆ. ಅನಂತ, ಮಧುಮುರಳಿ, ವಿಶ್ವನಾಥ್ ಉಪಸ್ಥಿತರಿದ್ದರು.