ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನ್ಯ ಸಂಸ್ಕೃತಿ ವಿರುದ್ಧ ಆಂದೋಲನ ಅಗತ್ಯ

Vishwanath S
Updated On : 12 May 2013, 12:03 pm

ಸಾಗರ: ಅಬ್ಬರದ ಪ್ರಚಾರದ ಮೂಲಕ ಅನ್ಯ ಸಂಸ್ಕೃತಿಯನ್ನು ಹೇರುವ ಪ್ರಯತ್ನದ ವಿರುದ್ಧ ಸಾಂಸ್ಕೃತಿಕ ಆಂದೋಲನ ಅಗತ್ಯ ಎಂದು ಜನಪದ ವಿದ್ವಾಂಸ ಡಾ.ಎಸ್.ಪಿ. ಪದ್ಮಪ್ರಸಾದ್ ಅಭಿಪ್ರಾಯಪಟ್ಟರು.
 ಇಲ್ಲಿನ ಶೃಂಗೇರಿ ಶಂಕರಮಠ ಹಾಗೂ ರಾಮಕೃಷ್ಣ ಹೆಗಡೆ ಚಿಂತನಾ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ವಿಚಾರಗೋಷ್ಠಿಯಲ್ಲಿ ಜಾಗತೀಕರಣದ ಸಂದರ್ಭದಲ್ಲಿ ಗ್ರಾಮೀಣ ಕಲೆಗಳ ಅಳಿವು-ಉಳಿವು ಕುರಿತು ಅವರು ಉಪನ್ಯಾಸ ನೀಡಿದರು.
ಜಾಗತೀಕರಣದ ಪ್ರಭಾವ: ಜಾಗತೀಕರಣದ ಪ್ರವಾಹದ ಎದುರು ನಮ್ಮ ನೆಲಮೂಲ ಕಲೆಯನ್ನು ಹೇಗೆ ಉಳಿಸಿ, ಬೆಳೆಸಿಕೊಂಡು ಬರಬೇಕು ಎನ್ನುವ ಗಂಭೀರ ಚಿಂತನೆ ನಡೆಯದೆ ಇರುವುದು ವಿಷಾದನೀಯ. ನಮ್ಮ ಕಲೆ ಜಾಗತೀಕರಣದ ಪ್ರಭಾವಕ್ಕೆ ಒಳಗಾಗಿದೆ ಎನ್ನುವುದಕ್ಕಿಂತ ಕಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವೇನು ಪ್ರಯತ್ನ ಮಾಡಿದ್ದೇವೆ ಎನ್ನುವತ್ತ ಗಮನ ಹರಿಸಬೇಕು ಎಂದರು.
ವಿನಾಶದ ಅಂಚಿನಲ್ಲಿ: ಪರಕೀಯವನ್ನೇ ನಮ್ಮದು ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ನಡುವೆ ನಮ್ಮ ಕಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ವಿನಾಶದ ಅಂಚಿನಲ್ಲಿರುವ ನಮ್ಮ ಕಲೆಗಳನ್ನು, ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಸ್ಥಳೀಯವಾಗಿ ನಡೆಯಬೇಕು ಎಂದು ಹೇಳಿದರು.
ಜನರಿಂದಲೆ ಬೆಳೆದ ಕಲೆ: ವಿಷಯ ಕುರಿತು ಪ್ರತಿಕ್ರಿಯಿಸಿದ ಸಾಹಿತಿ, ಜಿ.ಪಿ. ಬಸವರಾಜ್, ಜಾಗತೀಕರಣದಿಂದ ಅನುಕೂಲ ಹಾಗೂ ಅನಾನುಕೂಲ ಎರಡೂ ಆಗಿದೆ.
 ಹಿಂದೆ ಗ್ರಾಮೀಣ ಕಲೆಗಳು ಒಂದು ಚೌಕಟ್ಟಿಗೆ ಸೀಮಿತವಾಗಿದ್ದವು. ಈಗ ಅವು ನಮ್ಮ ಗಡಿಯನ್ನು ದಾಟಿದೆ. ಹೊಸತನವನ್ನು ಮೈಗೂಡಿಸಿಕೊಳ್ಳುವ ಜೊತೆಗೆ ಹೊಸ ಜನರು ಇದರತ್ತ ಆಕರ್ಷಿತರಾಗಲು ಕಾರಣವಾಗಿದೆ.  ಜಾಗತೀಕರಣದ ನಡುವೆಯೂ ಸ್ಥಳೀಯವಾಗಿ ಚಿಂತನೆ ಮಾಡಿದರೆ ಜನರಿಂದಲೆ ಬೆಳೆದ ಕಲೆಗಳನ್ನು, ಜನರು ಮನಸ್ಸು ಮಾಡಿ, ಪ್ರೋತ್ಸಾಹ ನೀಡಿದರೆ ಉಳಿಸಿಕೊಂಡು ಹೋಗಲು ಸಾಧ್ಯವಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement