ತೋಟಕ್ಕೆ ಬೆಂಕಿ: ಅಪಾರ ನಷ್ಟ
ಸಾಗರ: ತಾಲೂಕಿನ ಹಿರೇನೆಲ್ಲೂರು ಗ್ರಾಮದ ಆರ್.ಎಸ್. ದಿನೇಶಕುಮಾರ್ ಎಂಬವರ ತೋಟಕ್ಕೆ ಶುಕ್ರವಾರ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಬೆಂಕಿಯಿಂದ ಅಡಕೆ, ತೆಂಗು, ಅನಾನಸ್, ನೀರಾವರಿಗೆ ಅಳವಡಿಸಿದ್ದ ಪಿವಿಸಿ ಪೈಪ್, ಮೋಟಾರ್‌ಗೆ ಹಾನಿಯಾಗಿದ್ದು ಸುಮಾರು 4 ಲಕ್ಷ ರು. ನಷ್ಟ ಸಂಭವಿಸಿದೆ ಎನ್ನಲಾಗಿದೆ. ಕೆಲ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ದಿನೇಶಕುಮಾರ್ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದು, ದುಷ್ಕರ್ಮಿಗಳು ತಮ್ಮ ತೋಟಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೊಲೆ ಆರೋಪಿ ಹತ್ಯೆ
ಶಿವಮೊಗ್ಗ: ಹಳೇ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಟೋ ಚಾಲಕನೊಬ್ಬನನ್ನು 6 ಜನರ ಗುಂಪು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಶನಿವಾರ ನಗರದ ಹೊರವಲಯ ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಬಳಿ ನಡೆದಿದೆ.
ಮಂಜು ಅಲಿಯಾಸ್ ಮಂಜುನಾಥ್ (26) ಕೊಲೆಯಾದ ವ್ಯಕ್ತಿ. ಲವ-ಕುಶ ಕೊಲೆ ಪ್ರಕರಣದಲ್ಲಿ ಬಂಧನಕೊಳ್ಳಗಾಗಿದ್ದ ಮಂಜು ಕಳೆದ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಲವ-ಕುಶ ಕಡೆಯ ಸುಮಾರು 5-6 ಜನರ ಗುಂಪು, ಶನಿವಾರ ನಗರದ ಬಸ್‌ಸ್ಟ್ಯಾಂಡ್ ಬಳಿ ಒಂದು ಮಗುವಿನೊಂದಿಗೆ ಇಬ್ಬರು ವ್ಯಕ್ತಿಗಳು ಮಂಜುವಿನ ಆಟೋ ಏರಿದ್ದಾರೆ. ನಂತರ ಹಿಂದಿನಿಂದ ಟಾಟಾ ಸುಮೋದಲ್ಲಿ ಬಂದ ನಾಲ್ವರು ತ್ಯಾವರೆಕೊಪ್ಪದ ಬಳಿ ಆಟೋವನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಏಕಾಏಕಿ ದಾಳಿ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ತುಂಗಾನಗರ ಠಾಣೆಯಲ್ಲಿ ದಾಖಲಾಗಿದೆ.
ಮರಳು ಲಾರಿ ವಶ
ಶಿವಮೊಗ್ಗ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 11 ಲಾರಿಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಶುಕ್ರವಾರ ಮುಂಜಾನೆ ತಾಲೂಕಿನ ಹಾಡೋನಹಳ್ಳಿ ಹಾಗೂ ಹೊಳಲೂರಿನಲ್ಲಿ ನಡೆದಿದೆ.
ಇಲ್ಲಿನ ಹಾಡೋನಹಳ್ಳಿ ಹಾಗೂ ಹೊಳಲೂರಿನಲ್ಲಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ ಎಂಬ ಮಾಹಿತಿ ಪಡೆದ ಅಧಿಕಾರಿಗಳು ಗುರುವಾರ ರಾತ್ರಿಯೇ ಸ್ಥಳದಲ್ಲಿ ಠಿಕಾಣಿ ಹೂಡಿದ್ದಾರೆ. ಶುಕ್ರವಾರ ಮುಂಜಾನೆ 11 ಲಾರಿ ಮತ್ತು ಒಂದು ಜೆಸಿಬಿಯನ್ನು ವಶಪಡಿಸಿಕೊಳ್ಳಲಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆಗೆ ಒಪ್ಪಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಅಧಿಕಾರಿ ಲೋಕೇಶ್ ಕುಮಾರ್, ಭೂವಿಜ್ಞಾನಿ ವಿಶ್ವನಾಥ್ ಹಾಗೂ ಸಿಬ್ಬಂದಿ ಮತ್ತಿತರರು ಇದ್ದರು.