ಸಿರ್ಸಿ ಅಂಧ ಕಲಾವಿದರ ಸಂಗೀತ ಕಾರ್ಯಕ್ರಮ
ಕ.ಪ್ರ.ವಾರ್ತೆ, ಸೊರಬ, ಮೇ 11
ಆಧುನಿಕ ಗಾಳಿಯ ನಡುವೆ ದೇಸೀ ಸಂಸ್ಕೃತಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಖೇದ ವ್ಯಕ್ತಪಡಿಸುತ್ತಿರುವ ನಡುವೆಯೇ ಅಂತಹ ಕಲಾವಿದರನ್ನು ಹುಡುಕಿ ತಂದು ವೇದಿಕೆ ನಿರ್ಮಿಸಿಕೊಟ್ಟ ಗರಿಮೆ ತಾಲೂಕಿನ ಚಿಮ್ಮನೂರು ಗ್ರಾಮದವರಿಗೆ ಸಂದಿದೆ.
ಇಲ್ಲಿನ ತೀರ್ಥರಾಮೇಶ್ವರ ದೇವಸ್ಥಾನದ ವಾರ್ಷಿಕೋತ್ಸವ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸಾಂಸ್ಕೃತಿಕ ಸಮಾರಂಭ ಏರ್ಪಡಿಸಿದ್ದು, ಇತ್ತೀಚೆಗೆ ಸಿರ್ಸಿ ಅಂಧ ಕಲಾವಿದರ ತಂಡ ಇಲ್ಲಿ ನಡೆಸಿಕೊಟ್ಟ ಸುಶ್ರಾವ್ಯ ಗಾಯನ ಸುಧೆ ಕಾರ್ಯಕ್ರಮ ಗಮನ ಸೆಳೆಯಿತು.
ಕಲಾ ತಂಡದಲ್ಲಿ ಚಿನ್ನಮ್ಮ ಚೆನ್ನಬಸಪ್ಪ ಸಂಸಿ, ಹಾವೇರಿ, ವಿಠಲ್ ಆರ್. ಎಡ್ವಿನ್, ಹುಣಿಸೆ, ಬೆಳಗಾಂ ಜಿಲ್ಲೆ, ಬಸವರಾಜ್ ಕೆ., ಆರ್.ಸಾಗರ, ಎಸ್. ದೇವೇಂದ್ರ ಗುಲ್ಬರ್ಗ, ಹೇಮಚಂದ್ರ ಬಾಲ್ಕೇರಿ ಚಿಕ್ಕ ಇಡಗೋಡು ಪಾಲ್ಗೊಂಡು ದೇವರನಾಮ, ಭಜನ್, ಭಾವಗೀತೆಗಳನ್ನು ಹಾಡಿ ಗ್ರಾಮಸ್ಥರನ್ನು ರಂಜಿಸಿದರು.
ತೃಪ್ತಿ ತಂದ ಕಾರ್ಯಕ್ರಮ: ಅಬ್ಬರದ ಸಂಗೀತ, ಕೀಳು ಅಭಿರುಚಿಯುಳ್ಳ ಹಾಸ್ಯ ಮುಂತಾದ ದೇಸಿ ಮೂಲ ಕಳೆದುಕೊಂಡ ಮನೋರಂಜನೆಯೇ ಪ್ರಧಾನವಾಗಿರುವ ಹಿನ್ನೆಲೆಯಲ್ಲಿ ಅಪ್ಪಟ ಕಲಾವಿದರಿಗೆ ಅವಕಾಶ ಮಾಡಿಕೊಡುವುದು ಔಚಿತ್ಯ ಎನಿಸಿರುವುದರಿಂದ ಹಾಗೂ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸುವ ದೃಷ್ಟಿಯಿಂದ ಸಿರ್ಸಿ ಅನ್ನಪೂರ್ಣೇಶ್ವರಿ ಅಂಧರ ಕಲಾತಂಡದ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನಡೆಸಿದ್ದು ತೃಪ್ತಿ ತಂದಿದೆ ಎಂದು ಪ್ರಾಯೋಜಕ ಸಿ. ಜಗದೀಶ್ ತಿಳಿಸಿದ್ದಾರೆ.
ಅಂದು ತಾಲೂಕು ಕ್ಯಾಸನೂರು ಗುರುಬಸವ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ಚಂದ್ರಯ್ಯ ಶಾಸ್ತ್ರಿ ಕೋಲ್ಗುಣಿಸೆ ಇವರು ಕುಂಭಾಭಿಷೇಕ, ಹೋಮಹವನಾದಿಗಳನ್ನು ನೆರವೇರಿಸಿದರು.
ದೇಗುಲ ಸಮಿತಿಯ ಅಧ್ಯಕ್ಷ ಟಿ.ಬಿ. ಬೂದ್ಯಪ್ಪ, ಉಪಾಧ್ಯಕ್ಷ ಟಿ.ಸಿ. ಕರ್ಕಿ ಈಶ್ವರಪ್ಪ, ಖಜಾಂಚಿ ಈಶ್ವರಪ್ಪ ಗೌಡ, ಕಾರ್ಯದರ್ಶಿ ತಮ್ಮಿ ಹರೀಶ್, ಸಿ.ಬಿ. ಹಿರಿಯಣ್ಯಪ್ಪ, ಹಳಗಿ ರೇವಣಪ್ಪ, ಬೋವಿ ಮಲ್ಲೇಶಪ್ಪ, ಓಂಕಾರಪ್ಪ ಮಾಸ್ತರ್, ನಿರ್ವಾಣಪ್ಪ, ಬಡಗಿ ಪರಶುರಾಮ್ ಭಟ್ಟಿ ಪಂಚಪ್ಪ, ಸಿದ್ಧಾರೂಡಮಠದ ಕಾರ್ಯದರ್ಶಿ ಸಿ. ಜಗದೀಶ್, ಚಿಮ್ಮನೂರು, ಗದ್ದೆಮನೆ ಸೇರಿದಂತೆ ಹಲವು ಗ್ರಾಮಸ್ಥರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಇದ್ದರು.