ದೇವಾಲಯದಿಂದ ಯಕ್ಷಗಾನ ರಕ್ಷಣೆ
ಕ.ಪ್ರ.ವಾರ್ತ, ಶಿವಮೊಗ್ಗ, ಮೇ 12
ಇಂದು ಯಕ್ಷಗಾನ ಈ ಮಣ್ಣಿನಲ್ಲಿ ಗಟ್ಟಿಯಾಗಿ ಬೇರೂರಲು ಅದಕ್ಕೆ ದೊರೆತಿರುವ ಪೋಷಣೆಯೇ ಪ್ರಮುಖ ಕಾರಣ. ಮುಖ್ಯವಾಗಿ ನಾಡಿನ ಬಹುತೇಕ ದೇವಾಲಯಗಳು ಯಕ್ಷಗಾನ ಕಲೆಯನ್ನು ಸಮರ್ಥವಾಗಿ ಪೋಷಿಸುತ್ತಿವೆ ಎಂದು ಗಾಯಕ ಗರ್ತಿಕೆರೆ ರಾಘಣ್ಣ ಹೇಳಿದರು.
ಶಿವಮೊಗ್ಗದ ಸಹ್ಯಾದ್ರಿ ರಂಗತರಂಗ, ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಕಮಲಾ ನೆಹರೂ ಕಾಲೇಜಿನಲ್ಲಿ ಆಯೋಜಿಸಿದ್ದ 2 ದಿನಗಳ ರಂಗ ಗೀತೆಗಳ ಕಲಿಕಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆಶ್ರಯದಲ್ಲಿ 5 ಯಕ್ಷ ಮೇಳಗಳಿವೆ. ಇದರಲ್ಲಿ ನೂರಾರು ಮಂದಿ ಕಲಾವಿದರು ವರ್ಷದ 6 ತಿಂಗಳ ಕಾಲ ತಮ್ಮ ಜೀವನ ಪೋಷಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.ೆ
ಪ್ರೋತ್ಸಾಹ: ಇದು ಮಾತ್ರವಲ್ಲದೇ ಧರ್ಮಸ್ಥಳ, ಹಾಲಾಡಿ, ಸಾಲಿಗ್ರಾಮ, ಮಂದರ್ತಿ, ಕಮಲಶಿಲೆ, ಕೊಲ್ಲೂರು ಹೀಗೆ ಹಲವು ದೇವಾಲಯಗಳು ಯಕ್ಷ ಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿವೆ. ಆದರೆ ರಂಗಭೂಮಿಯ ಬಗ್ಗೆ ಆಸಕ್ತಿ ವಹಿಸುತ್ತಿರುವುದು ಕಡಿಮೆಯಾಗಿದೆ. ಹೀಗಾಗಿ ರಂಗ ಕಲೆ ನಿರ್ಜೀವವಾಗಿದೆಯೇನೋ ಎಂಬ ಭಾವನೆ ಮೂಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯಕ್ಷಗಾನಕ್ಕೆ ಸಿಗುತ್ತಿರುವಷ್ಟು ಪ್ರಾಮುಖ್ಯತೆ ರಂಗಭೂಮಿಗೆ ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ರಂಗಭೂಮಿಯ ಎಲ್ಲಾ ಪ್ರಾಕಾರಗಳನ್ನು ಉಳಿಸಿಕೊಳ್ಳಲು ನಮಗೆ ಸಾಧ್ಯವಾಗಿರುವುದು ಮರಾಠಿ ರಂಗಭೂಮಿಯ ಸಂಪರ್ಕದಿಂದ. ಮರಾಠಿ ರಂಗಭೂಮಿಯ ಪ್ರಭಾವ ಧಾರವಾಡ- ಹುಬ್ಬಳ್ಳಿಯ ರಂಗ ಕಲಾವಿದರ ಮೇಲೆ ಸಾಕಷ್ಟಿದೆ. ಹೀಗೆ ಧಾರವಾಡ-ಹುಬ್ಬಳಿ ಹಾಗೂ ಶಿವಮೊಗ್ಗದ ನಂಟು ಇರುವುದರಿಂದ ಇಲ್ಲಿಯೂ ರಂಗಭೂಮಿ ತಕ್ಕಮಟ್ಟಿಗೆ ಅಸ್ತಿತ್ವ ಉಳಿಸಿಕೊಂಡಿದೆ ಎಂದರು.
ಸೆಳೆಯುವ ಶಕ್ತಿ: ರಂಗಗೀತೆಗಳಿಗೆ ಎಲ್ಲರನ್ನೂ ಸೆಳೆಯುವ ಶಕ್ತಿ ಇದೆ. ರಾಮಲಿಂಗಾಚಾರ್ ರಂಗಗೀತೆಗಳಿಗೆ ನೀಡಿದ ಕೊಡುಗೆ ಅನನ್ಯ. ಅವರು ಯಾವುದಾದರೂ ಕಾರ್ಯಕ್ರಮದಲ್ಲಿ ರಂಗಗೀತೆ ಹಾಡಿದರೆಂದರೆ ಕಾರ್ಯಕ್ರಮದ ಕೇಂದ್ರ ಬಿಂದು ಅವರೇ ಆಗಿ ಬಿಡುತ್ತಿದ್ದರು. ಅಷ್ಟರ ಮಟ್ಟಿಗೆ ರಾಮಲಿಂಗಾಚಾರ್ ರಂಗಗೀತೆಯ ಮೇಲೆ ಹಿಡಿತ ಸಾಧಿಸಿದ್ದರು ಎಂದರು.
2 ದಿನಗಳ ರಂಗಗೀತೆ ಶಿಬಿರದಲ್ಲಿ ಹಿಂದೂಸ್ತಾನಿ ಗಾಯಕ ಬಸವಲಿಂಗಯ್ಯ ಹಿರೇಮಠ್, ನವಿಲೇಶ್, ಗಾಯಕ ಯುವರಾಜ್ ಶಿಬಿರಾರ್ಥಿಯಾಗಿ ಭಾಗವಹಿಸಿದ್ದರು. ಎನ್‌ಇಎಸ್ ಕಾರ್ಯದರ್ಶಿ ತಿಮ್ಮಯ್ಯ, ಸಹ್ಯಾದ್ರಿ ರಂಗ ತರಂಗದ ಕಾಂತೇಶ್ ಕದರಮಂಡಲಗಿ ಇದ್ದರು.