ಶಿವಮೊಗ್ಗ ನಗರಸಭೆಗೆ ಯಾರು ದಿಕ್ಕು
ಕ.ಪ್ರ.ವಾರ್ತೆ, ಶಿವಮೊಗ್ಗ, ಮೇ 12
ಅತಂತ್ರವಾಗಿರುವ ಶಿವಮೊಗ್ಗ ನಗರಸಭೆಯ ಆಡಳಿತ ಚುಕ್ಕಾಣಿ ಹಿಡಿವರ್ಯಾರು ಕಾಂಗ್ರೆಸ್ ಕೆಜೆಪಿ ಮೈತ್ರಿ ಸಾಧ್ಯತೆ ಇದೆಯೇ, ಕಾಂಗ್ರೆಸ್- ಜೆಡಿಎಸ್ ಪಕ್ಷೇತರರನ್ನೇ ನೆಚ್ಚಿಕೊಳ್ಳುತ್ತದೆಯೋ ಎಂಬ ಚರ್ಚೆ ಆರಂಭವಾಗಿದ್ದು, ಮೀಸಲಾತಿ ಪ್ರಕಟಣೆಯ ನಂತರ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣೆಯಿಂದಾಗಿ ಶಿವಮೊಗ್ಗ ನಗರಸಭೆಯ ಸಾರಥ್ಯ ಯಾರಿಗೆ ಎಂಬುದು ಅಂತಿಮವಾಗಿರಲಿಲ್ಲ. ಈ ಮಧ್ಯೆ ನಗರಸಭೆಯ 35 ಸದಸ್ಯರ ಬಲದಲ್ಲಿ ಕಾಂಗ್ರೆಸ್ 12, ಬಿಜೆಪಿ 8, ಕೆಜೆಪಿ 7, ಜೆಡಿಎಸ್ 5, ಎಸ್‌ಡಿಪಿಐ 1 ಹಾಗೂ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಆಡಳಿತ ಚುಕ್ಕಾಣಿ ಹಿಡಿಯಲು ಅಗತ್ಯವಾದ 18 ಸ್ಥಾನದ ಸ್ಪಷ್ಟ ಬಹುಮತ ಯಾವೊಂದು ಪಕ್ಷಕ್ಕೂ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಮೈತ್ರಿ ಆಳ್ವಿಕೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ.
ಮಾರ್ಚ್‌ನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ರಾಜಕೀಯ ಪಕ್ಷಗಳು ಮೈತ್ರಿ ಲೆಕ್ಕಾಚಾರದ ಲಾಭ- ನಷ್ಟಗಳ ಕುರಿತು ಗಂಭೀರ ಸಮಾಲೋಚನೆ ಆರಂಭಿಸಿದ್ದವು. ಈ ನಡುವೆ ಬಿಜೆಪಿ ರಾಜ್ಯ ಸರ್ಕಾರದ ಮೂಲಕ ಪ್ರಭಾವ ಬೀರಿ ಅಧ್ಯಕ್ಷ ಸ್ಥಾನಕ್ಕೆ ತನಗೆ ಅನುಕೂಲವಾಗುವ ಮೀಸಲಾತಿ ನಿಗದಿಪಡಿಸಿಕೊಳ್ಳುವ ತಂತ್ರಕ್ಕೂ ಮೊರೆಹೋಗಿತ್ತು. ಆದರೆ, ಅಷ್ಟರಲ್ಲಾಗಲೇ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿ ಮಾದರಿ ನೀತಿ-ಸಂಹಿತೆ ಜಾರಿಯಾಗಿದ್ದರಿಂದ ಸ್ಥಳೀಯ ಸಂಸ್ಥೆಗಳಿಗೆ ಮೀಸಲು ನಿಗದಿ ಪ್ರಕ್ರಿಯೆಗೆ ಚುನಾವಣಾ ಆಯೋಗ ತಡೆ ಹಾಕಿತು.
ಮುಖಂಡರ ಚರ್ಚೆ: ಅಂತಿಮವಾಗಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿತ್ತು. ಬದಲಾದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ವಿಫಲವಾಗಿದ್ದು, ಕಾಂಗ್ರೆಸ್ ಅಧಿಕಾರದ ಗದ್ದುಗೆಯೇರಿದೆ. ನಗರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ತನಗೆ ಅನುಕೂಲವಾಗುವ ಮೀಸಲಾತಿ ನಿಗದಿಪಡಿಸಿಕೊಳ್ಳಲು ಯಾವುದೇ ಅಡತಡೆಯಿಲ್ಲ. ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು ಎಂಬುವುದರ ಕುರಿತಂತೆ ಆ ಪಕ್ಷದ ಮುಖಂಡರು ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್-ಕೆಜೆಪಿ?: ಪಕ್ಷದ ಮೂಲಗಳ ಪ್ರಕಾರ ಕಾಂಗ್ರೆಸ್ ಹಾಗೂ ಕೆಜೆಪಿ ಪಕ್ಷದ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆ ಹೆಚ್ಚಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವುದು ಹಾಗೂ ಬಿಜೆಪಿಯ ಬಲವನ್ನು ನಗರ ವ್ಯಾಪ್ತಿಯಲ್ಲಿ ಕುಗ್ಗಿಸುವುದು ಎರಡೂ ಪಕ್ಷಗಳ ಗುರಿಯಾಗಿರುವುದರಿಂದ ಇಬ್ಬರೂ ಮೈತ್ರಿಗೆ ಒಲವು ತೋರಿಸುವ ಸಾದ್ಯತೆ ದಟ್ಟವಾಗಿದೆ.
ಕಾಂಗ್ರೆಸ್ 12 ಹಾಗು ಕೆಜೆಪಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಎರಡೂ ಪಕ್ಷಗಳು ಒಟ್ಟುಗೂಡಿದರೆ ಬಹುಮತ ಲಭ್ಯವಾಗಲಿದೆ. ಕೆಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಸೀಮಿತ ಅವಧಿಗೆ ಸ್ಥಾನ ಹೊಂದಾಣಿಕೆಯ ಒಳ ಒಪ್ಪಂದ ಮಾಡಿಕೊಂಡು, ಯಾವುದೇ ಗೊಂದಲವಿಲ್ಲದೆ ಸುಲಭವಾಗಿ ಆಡಳಿತ ಚುಕ್ಕಾಣಿ ಹಿಡಿಯಬಹುದೆಂಬುವುದು ಕಾಂಗ್ರೆಸ್ ಲೆಕ್ಕಾಚಾರ.ಒಂದು ವೇಳೆ ಕಾಂಗ್ರೆಸ್ -ಜೆಡಿಎಸ್‌ಮೈತ್ರಿ ಮಾಡಿಕೊಂಡರೆ ಬಹುಮತಕ್ಕೆ ಒಂದು ಸ್ಥಾನ ಕೊರತೆಯಾಗಲಿದ್ದು, ಪಕ್ಷೇತರರತ್ತ ಅಥವಾ ಎಸ್‌ಡಿಪಿಐ ಬೆಂಬಲ ಅತ್ಯವಶ್ಯಕವಾಗುವುದು. ಈ ಮೈತ್ರಿಯಲ್ಲಿ ಸಾಕಷ್ಟು ಎಡರು ತೊಡರುಗಳು ಎದುರಾಗಲಿದೆ. ಭವಿಷ್ಯದಲ್ಲಿ ಜೆಡಿಎಸ್ ನಗರದಲ್ಲಿ ಬಲಿಯುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲದ ಕಾರಣ ಈ ಸಮೀಕರಣ ಏರ್ಪಡುವುದು ಕಷ್ಟಕರವೇ.
ಮೈತ್ರಿ ಕಸರತ್ತು: ಕಳೆದ ಬಾರಿ ಸ್ಪಷ್ಟ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಈ ಬಾರಿಯ ನಗರಸಭೆ ಚುನಾವಣೆಯಲ್ಲಿ 8 ಸ್ಥಾನ ಗಳಿಸುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ಪಿಪಟ್ಟುಕೊಂಡಿದ್ದು, ಮೈತ್ರಿಯ ಕಸರತ್ತು ನಡೆಸದೆ, ವಿರೋಧ ಪಕ್ಷದಲ್ಲಿ ಕೂರಲು ನಿರ್ಧರಿಸಿದಂತೆ ಕಾಣಿಸುತ್ತಿದೆ.
ಈ ಎರಡು ಬೆಳವಣಿಗೆ ನಡುವೆಯೇ, ಜೆಡಿಎಸ್ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ತಾನಾಗಿಯೇ ಯಾವುದೇ ಪಕ್ಷಕ್ಕೂ ಬೆಂಬಲಿಸದಿರಲು ನಿರ್ಧರಿಸಿದೆ. ಬೇರೆ ಪಕ್ಷದವರು ಬೆಂಬಲ ಕೋರಿದರೆ ಷರತ್ತು ಸಹಿತ ಬೆಂಬಲ ನೀಡುವ ಚಿಂತನೆಯಲ್ಲಿದೆ.
ಒಂದೆಡೆ ಇಬ್ಬರು ಪಕ್ಷೇತರರ ಪೈಕಿ ಒಬ್ಬರು ಬಿಜೆಪಿಗೆ ಹಾಗೂ ಮತ್ತೊಬ್ಬರು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಅದು ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಾದ ಒಪ್ಪಂದವಾಗಿರಬಹುದು. ಆದರೆ, ನಗರಸಭೆ ಅಧಿಕಾರಕ್ಕಾಗಿ ಈ ಸೇರ್ಪಡೆ ಮುರಿದು ಬಿದ್ದರೂ ಆಶ್ಚರ್ಯವಿಲ್ಲ.
ಒಟ್ಟಾರೆ ಶಿವಮೊಗ್ಗ ನಗರಸಭೆ ಆಡಳಿತ ಚುಕ್ಕಾಣಿ ಯಾರ ಪಾಲಾಗಲಿದೆ, ಯಾರ ಬೆಂಬಲ ಯಾರಿಗೆ ಎಂಬುವುದು ಮುಂದಿನ ವಾರದೊಳಗೆ ಬಹಿರಂಗವಾಗುವ ಸಾದ್ಯತೆ ಇದೆ.