ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

3 ದಶಕದ ಬಳಿಕ ಆಡಳಿತ ಪಕ್ಷದ ಶಾಸಕರು

Lingaraj Badiger
Updated On : 15 May 2013, 10:50 am

ಕಪ್ರ ವಾರ್ತೆ, ಹೊಸನಗರ, ಮೇ 14
ಪ್ರಜ್ಞಾವಂತರ ಕ್ಷೇತ್ರ ಎಂದೆ ಬಿಂಬಿತವಾದ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದಿಂದ 3 ದಶಕದ ಬಳಿಕ ಅಧಿಕಾರಕ್ಕೆ ಬಂದ ಪಕ್ಷದ ಶಾಸಕರು ಆಯ್ಕೆಯಾಗಿದ್ದಾರೆ.
 ಶಾಸಕ ಕಿಮ್ಮನೆ ರತ್ನಾಕರ್ ಎರಡನೆ ಬಾರಿಗೆ ಆಯ್ಕೆಯಾಗಿದ್ದು ಒಂದಡೆಯಾದರೆ, ಈ ಬಾರಿ ಅವರದೆ ಕಾಂಗ್ರೆಸ್‌ಪಕ್ಷ ಅಧಿಕಾರ ಹಿಡಿದಿರುವುದರಿಂದ ಜನತೆಯಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ.
1983ರಲ್ಲಿ ಡಿ.ಬಿ. ಚಂದ್ರೇಗೌಡ ಗೆದ್ದಾಗ ಅವರದೆ ಜನತಾ ಪರಿವಾರ ಆಡಳಿತ ಹಿಡಿದಿತ್ತು. ಆ ಸರ್ಕಾರದಲ್ಲಿ ಚಂದ್ರೇಗೌಡರು ಸ್ಪೀಕರ್ ಆಗಿ ಆಯ್ಕೆಗೊಂಡು ಗಮನ ಸೆಳೆದಿದ್ದರು. 1952 ರಲ್ಲಿ ತೀರ್ಥಹಳ್ಳಿಯ ಅರ್ಧ ಭಾಗ ಶೃಂಗೇರಿಗೆ ಸೇರಿದ್ದು ಆಗ ಗೆದ್ದಿದ್ದ ಕಡಿದಾಳ ಮಂಜಪ್ಪ ಮುಖ್ಯಮಂತ್ರಿಯಾಗಿದ್ದರು. ಇದಿಷ್ಟು ಬಿಟ್ಟರೆ ತೀರ್ಥಹಳ್ಳಿಯಲ್ಲಿ ಆಡಳಿತ ಪಕ್ಷದ ವಿರುದ್ಧದ ಶಾಸಕರು ಜಯಭೇರಿ ಬಾರಿಸುವುದು ಮಾಮೂಲಿಯಾಗಿದ್ದು. 2004ರ ಚುನಾವಣೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಆಡಳಿತ ಹಿಡಿದಿತ್ತು. ನಂತರ ಕಾಂಗ್ರೆಸ್, ಜೆಡಿಎಸ್ ನಡುವೆ ಬಿರುಕಿಗೆ ಕಾರಣವಾಗಿ ಜೆಡಿಎಸ್ ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದ ಸಂದರ್ಭದಲ್ಲಿ ತೀರ್ಥಹಳ್ಳಿಯಲ್ಲಿ ಆರಗ ಜ್ಞಾನೇಂದ್ರ ಶಾಸಕರಾಗಿದ್ದರು. ಆದರೆ 3 ದಶಕದ ಬಳಿಕ ಸ್ಪಷ್ಟ ಬಹುಮತ ಪಡೆದ ಸರ್ಕಾರದ ಶಾಸಕರಾಗಿ ಕಿಮ್ಮನೆ ಹೊರಹೊಮ್ಮಿದ್ದು, ಕ್ಷೇತ್ರದಲ್ಲಿದ್ದ ಅಪವಾದ ತೊಡೆದು ಹಾಕಿದ್ದಾರೆ.
ಸಚಿವರಾಗ್ತಾರಾ?: ಸತತ ಎರಡುಬಾರಿ ಜಯದಾಖಲಿಸಿರುವ ಕಿಮ್ಮನೆ ಸಿದ್ದು ಸಂಪುಟ ಸೇರುತ್ತಾರ ಎಂಬ ಕುತೂಹಲ ಕ್ಷೇತ್ರದೆಲ್ಲೆಡೆ ಮನೆಮಾಡಿದೆ. ಜನತಾ ಪರಿವಾರದಿಂದಲೆ ಸಿದ್ದರಾಮಯ್ಯ ಜೊತೆ ನಿಕಟ ಸಂಪರ್ಕ ಹೊಂದಿರುವ ಕಿಮ್ಮನೆ, ಸಿದ್ದು ವಿರೋಧ ಪಕ್ಷದ ನಾಯಕಾಗಿದ್ದಾಗಲೂ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಕಿಮ್ಮನೆ ಸಹಕಾರ ತೆಗೆದುಕೊಂಡಿದ್ದರು. ಅವರ ಮೇಲೆ ವಿಶೇಷ ಪ್ರೀತಿ ಹೊಂದಿದ್ದರು ಎಂದು ಆಪ್ತ ಮೂಲಗಳು ತಿಳಿಸಿವೆ. ಚುನಾವಣ ಪ್ರಚಾರಕ್ಕೆ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಶಾಸಕರಾಗಿ ತನ್ನದೆ ನಡವಳಿಕೆ ಮೂಲಕ ರಾಜ್ಯದ ಗಮನ ಸೆಳೆದಿರುವ ಕಿಮ್ಮನೆಯನ್ನು ಗೆಲ್ಲಿಸಿದರೆ ಅವರನ್ನು ಬರೀಗೈಯಲ್ಲಿ ಕಳುಹಿಸುವುದಿಲ್ಲ ಎಂಬ ಭರವಸೆ ನೀಡಿದ್ದು ಕಿಮ್ಮನೆ ಸಚಿವರಾಗುತ್ತಾರೆ ಎಂಬ ಬೆಂಬಲಿಗರ ಕನವರಿಕೆಗೆ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.
ಭರಪೂರ ನಿರೀಕ್ಷೆ: ಕಿಮ್ಮನೆ ಆಡಳಿತ ಪಕ್ಷದ ಶಾಸಕರಾಗಿ ಹೊರಹೊಮ್ಮಿದ ಕಾರಣ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರು ಸಾಕಷ್ಟು ನಿರೀಕ್ಷೆ ಹೊತ್ತಿದ್ದಾರೆ. ಮುಳುಗಡೆ ಸಮಸ್ಯೆ ಸೇರಿದಂತೆ ಇಂದಿಗೂ ಜೀವಂತವಾಗಿರುವ ಹಲವು ಬೇಡಿಕೆಯ ಈಡೇರಿಕೆಯಾಗಬಹುದು ಎಂಬ ಆಸೆ ಹೊಂದಿದ್ದಾರೆ. ಕುಪ್ಪಳ್ಳಿ, ಕುಂದಾದ್ರಿ, ಕೊಡಚಾದ್ರಿ, ಆಗುಂಬೆ, ಹುಲಿಕಲ್, ಬಿದನೂರು ಕೋಟೆ ಸೇರಿದಂತೆ ಐತಿಹಾಸಿಕ ಮತ್ತು ಪ್ರಾಕೃತಿಕ ಸಮೃದ್ಧಿ ಸ್ಥಳಗಳಲ್ಲಿ ಮೂಲ ಸೌಕರ್ಯ ಸೇರಿದಂತೆ ಪ್ರವಾಸಿಗರನ್ನು ಸೆಳೆಯಲು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಕಿಮ್ಮನೆ ಯಶಸ್ವಿಯಾಗುತ್ತಾರೆ ಮತ್ತು ಸಚಿವರಾಗದಿದ್ದ ಪಕ್ಷದಲ್ಲಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುತ್ತಾರೆ ಎಂಬ ವಿಶ್ವಾಸ ಹೊಂದಿದ್ದಾರೆ.
ಪಕ್ಷಕ್ಕೆ ಸಮಸ್ಯೆಯಾಗಲಾರೆ: ಸಚಿವಸ್ಥಾನದ ಆಕಾಂಕ್ಷಿಯಲ್ಲ. ಹೈಕಮಾಂಡ್ ಯಾವುದೆ ಜವಾಬ್ದಾರಿ ನೀಡಿದರು ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತೇನೆ. ಹಾಗಂತ ಪಕ್ಷಕ್ಕೆ ಎಂದು ನಾನೊಬ್ಬ ಸಮಸ್ಯೆಯಾಗಲಾರೆ. ಕಾಂಗ್ರೆಸ್ ಸರ್ಕಾರ ಮತ್ತು ಉತ್ತಮ ಮುಖ್ಯಮಂತ್ರಿ ಆಯ್ಕೆಯಾಗಿರುವುದರಿಂದ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರೀಕ್ಷೆ ಮೀರಿ ಕಾರ್ಯನಿರ್ವಸುತ್ತೇನೆ ಎಂದು ಶಾಸಕ ಕಿಮ್ಮನೆ ರತ್ನಾಕರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
-ರವಿ ಬಿದನೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement