ಅಂಚೆ ಕಚೇರಿಯಲ್ಲೂ ಅಕ್ಷಯ ತೃತೀಯ
ಶಿವಮೊಗ್ಗ: ಅಕ್ಷಯ ತೃತೀಯ ಅಂಗವಾಗಿ ನಗರದ ಎಲ್ಲಾ ವಸ್ತ್ರಾಭರಣಗಳ ಅಂಗಡಿಗಳಲ್ಲಿ ಕಿಕ್ಕಿರಿದು ಜನ ಸೇರುವುದು ಸಾಮಾನ್ಯ ಸಂಗತಿ. ಆದರೆ, ಅಂಚೆ ಕಚೇರಿಯಲ್ಲಿಯೂ ಚಿನ್ನಾಭರಣ ಖರೀದಿ ಮಾಡಲು ಜನ ಸಾಲುಗಟ್ಟಿ ನಿಂತಿದ್ದರೆಂದರೆ ಅಚ್ಚರಿ ಏಕೆ, ಇದು ಸತ್ಯ.
ಭಾರತೀಯರ ಸಂಪ್ರದಾಯದಲ್ಲಿ ವರ್ಷಕ್ಕೊಮ್ಮೆ ಬರುವ ಅಕ್ಷಯ ತೃತೀಯ ದಿನ ಬಹಳ ಶುಭದಿನ. ಅಂದು ವಸ್ತ್ರಾಭರಣ
ಹಾಗೂ ಮತ್ತಿತರ ವಿಶೇಷ ವಸ್ತುಗಳನ್ನು ಖರೀದಿ ಮಾಡಿದರೆ ಜೀವನದಲ್ಲಿ ಒಳ್ಳೆಯದಾಗುತ್ತದೆ. ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ ಎಂಬ ನಂಬಿಕೆ ಇದೆ. ಅದರಂತೆ ಶಿವಮೊಗ್ಗ ಪ್ರಧಾನ ಅಂಚೆ ಕಚೇರಿಯಲ್ಲಿ ಅಕ್ಷಯ ತೃತಿಯ ಅಂಗವಾಗಿ ಸೋಮವಾರದಿಂದ ಬುಧವಾರದವರೆಗೆ ಸಾರ್ವಜನಿಕರಿಗೆ ಅಂತರಾಷ್ಟ್ರೀಯ ಗುಣಮಟ್ಟದ ಪರಿಶುದ್ಧ ಬಂಗಾರವನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಮಾರಾಟ ಮಾಡುವ ಉದ್ದೇಶವನ್ನು ಅಂಚೆ ಇಲಾಖೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಮತ್ತು ಮಂಗಳವಾರ ಅಂಚೆ ಕಚೇರಿಯಲ್ಲಿ ಸುಮಾರು 395 ಗ್ರಾಂ ಚಿನ್ನದ ನಾಣ್ಯಗಳು ಮಾರಾಟವಾಗಿವೆ.
1 ಗ್ರಾಂನ 69, 5 ಗ್ರಾಂನ 14, 8 ಗ್ರಾಂನ 7, 10 ಗ್ರಾಂನ 23, 20 ಗ್ರಾಂನ 2 ಹಾಗೂ 50 ಗ್ರಾಂನ 1 ನಾಣ್ಯಗಳು ಮಾರಾಟವಾಗಿದ್ದು, ಸುಮಾರು 12.64 ಲಕ್ಷ ರುಪಾಯಿ ವಹಿವಾಟು ನಡೆದಿದೆ. ವಿಶೇಷವೆಂದರೆ ಕಳೆದ ಬಾರಿಗಿಂತ ಈ ಬಾರಿ ಶೇ.50 ರಷ್ಟು ಹೆಚ್ಚು ಚಿನ್ನದ ನಾಣ್ಯಗಳು ಮಾರಾಟವಾಗಿವೆ. ಇದು ಬುಧವಾರವು ಮುಂದುವರೆಯುವುದರಿಂದ ಮತ್ತಷ್ಟು ನಾಣ್ಯಗಳು ಮಾರಾಟವಾಗುವ ಸಾಧ್ಯತೆಗಳಿವೆ ಎನ್ನುತ್ತಾರೆ ಅಂಚೆ ಇಲಾಖೆ ಅಧಿಕಾರಿಗಳು.