ಜಿಲ್ಲೆಗೆ ಸಚಿವ ಸ್ಥಾನಕ್ಕಾಗಿ ಮುಸ್ಲಿಂರ ಪ್ರಾರ್ಥನೆ
ಚಿಕ್ಕಮಗಳೂರು: ಜಿಲ್ಲೆಗೆ ಸಚಿವ ಸ್ಥಾನ ಸಿಗುವಂತೆ ಕೋರಿ ನಗರದ ಹನುಮಂತಪ್ಪ ವೃತ್ತದ ಬಡಾಮಕಾನ್ ದರ್ಗಾದಲ್ಲಿ ಮುಸ್ಲಿಮರು ಮಂಗಳವಾರ ಪ್ರಾರ್ಥಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅಂಜುಮಾನ್ ಇಸ್ಲಾಮಿ ಅಧ್ಯಕ್ಷ ಅಕ್ಬರ್ ಮಹಮ್ಮದ್, ಈ ಬಾರಿ ರಾಜ್ಯಾದ್ಯಂತ ಮತದಾರರು ಕಾಂಗ್ರೆಸ್ಗೆ ಬಹುಮತ ನೀಡಿ ಸರ್ಕಾರ ರಚನೆ ಮಾಡಲು ಸಹಕರಿಸಿದ್ದಾರೆ. ಹಿಂದುಳಿದ ವರ್ಗದ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಮಾಡಿ ಸಾಮಾಜಿಕ ನ್ಯಾಯ ದೊರಕಿಸಲಾಗಿದೆ ಎಂದರು.
ಸೋನಿಯಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡಿ ಗೌರವಿಸಿದೆ. ಈ ಬಾರಿ ಮಹಿಳಾ ಸದಸ್ಯರಾದ ಮೋಟಮ್ಮ, ಉಮಾಶ್ರೀ, ಗಾಯಿತ್ರಿ ಶಾಂತೇಗೌಡರಿಗೆ ಆದ್ಯತೆ ನೀಡಿ ಸಚಿವ ಸ್ಥಾನ ನೀಡಬೇಕು. ಜಿಲ್ಲೆಯ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗಾಯಿತ್ರಿ ಶಾಂತೇಗೌಡ ಹಾಗೂ ತರೀಕೆರೆ ಶಾಸಕ ಶ್ರೀನಿವಾಸ್ರಿಗೆ ಸಚಿವ ಸ್ಥಾನ ಕೊಟ್ಟು ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಷಹಬುದ್ಧೀನ್, ಕಾರ್ಯಕರ್ತ ಸೈಫುಲ್ಲಾಖಾನ್, ಜಮೀರ್, ನಯಾಜ್ ಆಹ್ಮದ್, ಅರ್ಪಿನ್ ರಿಯಾಜ್ ಖಾನ್ ಪ್ರಾರ್ಥನೆ ಸಲ್ಲಿಸಿದರು.