ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಮಾನ ನಿಲ್ದಾಣದ ರನ್‌ವೇ ಸಮಸ್ಯೆ

Lingaraj Badiger
Updated On : 15 May 2013, 10:45 am

ಶಿವಮೊಗ್ಗ ಮೇ 14
ಅರ್ಧಕ್ಕೆ ನಿಂತ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಕೊನೆಗೂ ಟೇಕಾಫ್ ಆಗುವ ಲಕ್ಷಣ ಗೋಚರಿಸಿದೆ.
 ವಿವಿಧ ತಾಂತ್ರಿಕ ಕಾರಣ ಹಾಗೂ ರಾಜಕೀಯ ಇಚ್ಚಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತು ದನ ಮೇಯುವ ಹುಲ್ಲುಗಾವಲಾಗಿದ್ದ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ಪ್ರದೇಶಕ್ಕೆ ದೆಹಲಿಯ ಕೇಂದ್ರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ನಾಲ್ವರು ಹಿರಿಯ ಅಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿದೆ.
 ಪ್ರಾಧಿಕಾರದ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳಾದ ಡಿ.ಪಿ.ಸಿಂಗ್, ವಿ.ಕೆ. ಮಿಶ್ರಾ, ಜೋಶಿ, ಮುಖರ್ಜಿ  ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿ ಈ ತಂಡದಲಿದ್ದರು.
ಈ ಅಧಿಕಾರಿಗಳ ತಂಡವು ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣದ ಸಮಗ್ರ ದಾಖಲೆ, ಇಲ್ಲಿಯವರೆಗೂ ನಡೆದಿರುವ ಕಾಮಗಾರಿ, ಬಾಕಿ ಉಳಿದಿರುವ ಕೆಲಸದ ವಿವರ ಸೇರಿದಂತೆ ತಾಂತ್ರಿಕ ವಿವರಗಳನ್ನು ಕಲೆ ಹಾಕಿತು. ರನ್ ವೇ, ಕಟ್ಟಡ ನಿರ್ಮಾಣ ಕಾರ್ಯವನ್ನು ಖುದ್ದು ಪರಿಶೀಲಿಸಿದೆ.
ರನ್‌ವೇ ಸಮಸ್ಯೆ: ರನ್ ವೇ ವಿಷಯದಲ್ಲಿ ಕೇಂದ್ರ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರದ ನಡುವೆ ಸಣ್ಣದೊಂದು ಗೊಂದಲ ಏರ್ಪಟ್ಟಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಾಧಿಕಾರದ ಅಧಿಕಾರಿಗಳು ಇಲ್ಲಿಗಾಗಮಿಸಿದ್ದರು ಎಂಬ ಮಾಹಿತಿ ಇದೆ.
 ನಿಯಮಗಳ ಪ್ರಕಾರ ವಿಮಾನದ ಲ್ಯಾಂಡಿಂಗ್, ಟೇಕಾಫ್ ಆಗುವಾಗ ರನ್‌ವೇಯಿಂದ 2 ರಿಂದ 3 ಕಿಮೀ ಅಂತರದಲ್ಲಿ ಎತ್ತರ ಕಟ್ಟಡಗಳು ಮತ್ತು ಗೋಪುರಗಳು ಇರುವಂತಿಲ್ಲ. ಆದರೆ ಸೋಗಾನೆ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶವಿದ್ದು, ಇಲ್ಲಿ ಹಲವು ಕಟ್ಟಡ, ಚಿಮಣಿಗಳಿವೆ. ಈ ಹಿಂದೆ ಪರಿಶೀಲನೆಗೆ ಬಂದಿದ್ದ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಕೈಗಾರಿಕಾ ಕೇಂದ್ರದಲ್ಲಿ ಎತ್ತರವಾಗಿರುವ ಕೈಗಾರಿಕೆಗಳ ಚಿಮಣಿಗಳು, ಮೊಬೈಲ್ ಟವರ್‌ಗಳನ್ನು ತೆರವುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು.
 ಇದಕ್ಕೆ ಸ್ಥಳೀಯ ಉದ್ಯಮಿಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಒಂದೇ ಕಡೆ ರನ್ ವೇ ನಿರ್ಮಾಣ ಮಾಡುವಂತೆ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಸಲಹೆ ನೀಡಿತ್ತು.
ರು. 40 ಕೋಟಿ ವೆಚ್ಚ: ಸದ್ಯ 1700 ಮೀಟರ್ ರನ್‌ವೇಯಲ್ಲಿ 1500 ಮೀಟರ್ ಕಾಮಗಾರಿ ಮುಕ್ತಾಯವಾಗಿದ್ದು,
ಸುಮಾರು ರು. 40 ಕೋಟಿ ವೆಚ್ಚ ಮಾಡಲಾಗಿದೆ. ರಾಜ್ಯದ ಸಲಹೆಯನ್ನು ಪ್ರಾಧಿಕಾರ ಒಪ್ಪಿಕೊಂಡಲ್ಲಿ ರನ್‌ವೇ ದಿಕ್ಕು ಬದಲಾಗುತ್ತದೆ. ಜೊತೆಗೆ ವೆಚ್ಚವೂ ಹೆಚ್ಚಾಗುತ್ತದೆ.
ಈ ಮಧ್ಯೆ ನಿಲ್ದಾಣದಲ್ಲಿ ಲ್ಯಾಂಡಿಂಗ್ ಹಾಗೂ ಮತ್ತೊಂದು ಕಡೆ ಟೇಕಾಫ್ ಮಾಡಲು ಪ್ರತ್ಯೇಕ ರನ್ ವೇ ನಿರ್ಮಿಸಬೇಕೆಂಬ ಅಭಿಪ್ರಾಯ ಕೇಳಿಬಂದಿತ್ತು.
 ಒಂದೇ ರನ್ ವೇಯಲ್ಲಿ ವಿಮಾನದ ಲ್ಯಾಂಡಿಂಗ್, ಟೇಕಾಫ್ ಮಾಡಬೇಕು. ಈ ನಿಟ್ಟಿನಲ್ಲಿ ಕೆಲವು ಬದಲಾವಣೆ ಆಗಬೇಕೆಂಬ ವಾದವೂ ಇದೆ.
ಬಹಿರಂಗಪಡಿಸಿಲ್ಲ: ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಲಹೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಪ್ರಾಧಿಕಾರ ತನ್ನ ಯಾವುದೇ ನಿರ್ಧಾರವನ್ನು ಬಹಿರಂಗಪಡಿಸಿಲ್ಲ. ಈ ನಡುವೆ ಹಿರಿಯ ಅಧಿಕಾರಿಗಳ ತಂಡ ಸ್ಥಳ ಪರಿಶೀಲಿಸಿ ಹಿಂದಿರುಗಿದ್ದು, ಇಷ್ಟರಲ್ಲಿಯೇ ರನ್ ವೇ ಕುರಿತಂತೆ ತನ್ನ ಅಭಿಪ್ರಾಯ ಸ್ಪಷ್ಟಪಡಿಸುವ ಸಾಧ್ಯತೆಯಿದೆ.
 ಈ ಹಿಂದೆ ಕಾಮಗಾರಿ ನಿರ್ವಹಿಸುತ್ತಿರುವ ಸಂಸ್ಥೆ ಮುಂದಿಟ್ಟಿದ್ದ ಬಹುತೇಕ ಎಲ್ಲಾ ಸಮಸ್ಯೆಯನ್ನು ಜಿಲ್ಲಾಡಳಿತ ಪರಿಹರಿಸಿದೆ. ಕೆಲವು ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ರನ್ ವೇ ಕುರಿತಂತೆ ಕೆಲ ಗೊಂದಲವಿದ್ದು, ಸದ್ಯ ಜಿಲ್ಲಾಡಳಿತದ ಮಟ್ಟದಲ್ಲಿ ಈ ವಿಷಯದ ಚರ್ಚೆ ಅಸಾಧ್ಯವಾಗಿದೆ.
ಕೇಂದ್ರ ಮೂಲ ಸೌಕರ್ಯ ಇಲಾಖೆಯೇ ಎಲ್ಲ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ಹಾಲಿ ಸ್ಥಿತಿ: ವಿಮಾನ ನಿಲ್ದಾಣದ ಕಾಮಗಾರಿ ಸದ್ಯ ಕುಂಟುತ್ತಾ ಸಾಗುತ್ತಿದೆ.
ಈಗಾಗಲೇ ಕಾಮಗಾರಿ ಮುಕ್ತಾಯಕ್ಕೆ ನೀಡಿದ್ದ ಡೆಡ್‌ಲೈನ್  ಮುಕ್ತಾಯವಾಗಿದೆ. ಆದರೆ ಇಲ್ಲಿಯವರೆಗೂ ಅರ್ಧದಷ್ಟೂ ಕಾಮಗಾರಿ ಮುಗಿದಿಲ್ಲ. ಪದೇ ಪದೇ ಅಡ್ಡಿ ಆತಂಕಕಗಳು ಬರುತ್ತಲೇ ಇವೆ. ಮೊದಲು ಸಂಪರ್ಕ ರಸ್ತೆ- ನೀರಿನ ಸಮಸ್ಯೆ, ನಂತರ ರನ್‌ವೇ ಸಮಸ್ಯೆ ಕಾಮಗಾರಿ ವೇಗಕ್ಕೆ ಅಡ್ಡಗಾಲಾಯಿತು.
 ಉಪ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪರವರು ಶಿವಮೊಗ್ಗದ ಸೋಗಾನೆ ಗ್ರಾಮದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ್ದರು. ಸುಮಾರು ರು. 240 ಕೋಟಿ ವೆಚ್ಚದ ಈ ಯೋಜನೆಯನ್ನು ಬಿಒಟಿ ಆಧಾರದ ಮೇಲೆ ಏರ್‌ಪೋರ್ಟ್ ಹೋಲ್‌ಡಿಂಗ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಗೆ ನಿರ್ಮಾಣ ಕಾಮಗಾರಿ ನೀಡಲಾಗಿತ್ತು. 2012ರ ಡಿಸೆಂಬರ್‌ನಲ್ಲಿ ಕಾಮಗಾರಿ ಮುಗಿಸಬೇಕಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement